DK Shivakumar: ಮೆಡಿಕಲ್ ಕಾಲೇಜು ಕನಕಪುರಕ್ಕೆ ಶಿಫ್ಟ್ ಗೆ ಕುಮಾರಸ್ವಾಮಿ ವಿರೋಧ; ವಾಗ್ದಾಳಿ ನಡೆಸಿದ ಡಿ ಕೆ ಶಿವಕುಮಾರ್
ಬೆಂಗಳೂರು, ಆಗಸ್ಟ್ 28: ವೈದ್ಯಕೀಯ ಕಾಲೇಜನ್ನು ರಾಮನಗರದಿಂದ ಕನಕಪುರಕ್ಕೆ ವರ್ಗಾವಣೆ ಮಾಡುತ್ತಿರುವುದ್ದಕ್ಕೆ ಕುಮಾರಸ್ವಾಮಿ ಅವರು ವಿರೋಧ ವ್ಯಕ್ತಪಡಿಸಿರುವ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅಧಿವೇಶನದಲ್ಲಿ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಮಾಡಲು ಮನವಿ ಮಾಡಿದ್ದೇ. ಅದಕ್ಕೆ ಅವರು ಸಮ್ಮತಿ ಸೂಚಿಸಿದ್ದರು. ನಮಗೆ ನಮ್ಮ ಕ್ಷೇತ್ರದ ಮೇಲೆ ಸ್ವಾರ್ಥ, ಅಭಿಮಾನ ಇಲ್ಲವೇ. ಈಗ ಏಕೆ ರಾಜಕೀಯ. ಪ್ರಸ್ತುತ ವೈದ್ಯಕೀಯ ಕಾಲೇಜು ರಾಮನಗರ ಕ್ಷೇತ್ರದ ಗಡಿಯಿಂದ ಮೂರು ಕಿಲೋ ಮೀಟರ್ ದೂರದಲ್ಲಿದೆ. ಎರಡು ತಾಲ್ಲೂಕುಗಳಿಗೆ ಉಪಯೋಗವಾಗಲಿ ಎಂದು ಇರುವ ಆಸ್ಪತ್ರೆ ಇದಾಗಿದೆ.

ರಾಮನಗರ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಜಿಲ್ಲಾ ಆಸ್ಪತ್ರೆ ನಿರ್ಮಾಣ ಮಾಡಲಾಯಿತು. ಈ ಆಸ್ಪತ್ರೆ ನಿರ್ಮಾಣ ಪೂರ್ಣವಾಗಿ, ಉದ್ಘಾಟನೆಗೊಳ್ಳಬೇಕು ಎನ್ನುವ ಹೊತ್ತಿನಲ್ಲಿ ಯಡಿಯೂರಪ್ಪ ಅವರ ಸರ್ಕಾರ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಿತು. ಆಗ ಯಡಿಯೂರಪ್ಪ ಅವರು ರಾಮನಗರಕ್ಕೆ ಅನ್ಯಾಯ ಮಾಡುವುದಿಲ್ಲ ಎಂದು ಆಶ್ವಾಸನೆ ನೀಡಿದ್ದರು. ಬೊಮ್ಮಾಯಿಯವರ ಮಧ್ಯಸ್ಥಿಕೆಯಲ್ಲಿ ಮನವಿ ಮಾಡಿದ್ದೇವು ಆಗ ವಿಧಾನಸಭಾ ಅಧಿವೇಶನದಲ್ಲೂ ಭರವಸೆ ನೀಡಿದ್ದರು. ಈಗ ನಾವೇನು ಬದಲಾವಣೆ ಮಾಡಿಲ್ಲ, ಎರಡೂ ತಾಲ್ಲೂಕುಗಳ ಜನರಿಗೆ ಉಪಯೋಗವಾಗಲಿ ಎಂದು ಈ ತೀರ್ಮಾನ ಮಾಡಿದ್ದೇವೆ. ವಿಶ್ವವಿದ್ಯಾಲಯ ಅಲ್ಲಿಯೇ ಇರುತ್ತದೆ. ಆಸ್ಪತ್ರೆ ಎರಡೂ ಕಡೆ ಇರುತ್ತದೆ.
ಇದೇ ಕುಮಾರಸ್ವಾಮಿ ಅವರು ಪ್ರತಿಭಟನೆ ಮಾಡಲಿ. ಅವರೇ ಬಜೆಟ್ ಭಾಷಣ ಮಾಡುವಾಗ ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗುವುದು ಎಂದು ಓದಿದ ಸಾಕ್ಷಿ ಇದೆ. ಈಗ ಏಕೆ ಈ ಹೋರಾಟ? ಚುನಾವಣೆ ಹತ್ತಿರ ಬರುತ್ತಿದೆ ಎನ್ನುವ ಕಾರಣಕ್ಕೆ ಇದೆಲ್ಲಾ ಮಾಡಲು ಹೊರಟಿದ್ದಾರೆ. ಮಾಡಲಿ ಬಿಡಿ. ಆಗ ಬುದ್ದಿ ಇರಲಿಲ್ಲವೇ ಅವರಿಗೆ, ನಮ್ಮ ಎಂಬತ್ತು ಜನ ಶಾಸಕರ ಬೆಂಬಲದಿಂದ ಅವರು ಮುಖ್ಯಮಂತ್ರಿಗಳಾಗಿದ್ದು ನೆನಪಿರಲಿ" ಎಂದು ಹೇಳಿದರು.

ಬಿಜೆಪಿ ಸರ್ಕಾರದ ವಿರುದ್ಧ ಕೋವಿಡ್ ಹಗರಣ, ಆಮ್ಲಜನಕ ದುರಂತ, ಪಿಎಸ್‌ಐ ಸೇರಿದಂತೆ ನಾವು ನೂರಾರು ಆರೋಪ ಮಾಡಿದ್ದೇವೆ. ಅವರು ಯಾವ ರೀತಿ ತನಿಖೆ ಮಾಡಿದ್ದರು ಎಂಬುದು ನಮಗೆ ಗೊತ್ತಿದೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವು ಮುಂದುವರೆಯುತ್ತಾ ಇದ್ದೇವೆ. ಬಿಜೆಪಿಯವರು ಪ್ರಾಮಾಣಿಕವಾಗಿದ್ದರೆ ನ್ಯಾಯಾಂಗ ತನಿಖೆ ಬಗ್ಗೆ ಭಯ ಏಕೆ? ಎಂದು ಡಿ.ಕೆ.ಶಿವಕುಮಾರ್ ಅವರು ಪ್ರಶ್ನಿಸಿದರು.
ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಪತ್ನಿ ಇತ್ತೀಚೆಗೆ ಮುಖ್ಯಮಂತ್ರಿಗಳು ಹಾಗೂ ನನ್ನನ್ನು ಭೇಟಿಯಾಗಿ ನ್ಯಾಯ ದೊರಕಿಸಿಕೊಡಬೇಕಾಗಿ ಮನವಿ ಮಾಡಿದರು. ಅವರ ಮನವಿಗೆ ಸ್ಪಂದಿಸಿದ್ದೇವೆ. ಬಿಜೆಪಿಯವರು ಈ ಪ್ರಕರಣದಲ್ಲಿ ಏನು ಮಾಡಿದರು? ತನಿಖೆ ನಡೆಯುವುದ್ದಕ್ಕೆ ಮುಂಚಿತವಾಗಿಯೇ ಅಂದಿನ ಮುಖ್ಯಮಂತ್ರಿಗಳಾದಿಯಾಗಿ, ಸಚಿವರು, ಯಡಿಯೂರಪ್ಪ ಅವರೆಲ್ಲಾ "ಈಶ್ವರಪ್ಪ ದೋಷಮುಕ್ತರಾಗಿ" ಬರುತ್ತಾರೆ ಎಂದು ತನಿಖಾಧಿಕಾರಿಗಳಿಗೆ ಸುಳಿವು ನೀಡಿದರು. ಆದರೆ ನಾವು ಈ ರೀತಿಯ ಕೆಲಸ ಮಾಡಲು ಹೋಗುವುದಿಲ್ಲ, ನಾವು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಕಾನೂನಿನ ಚೌಕಟ್ಟಿನಲ್ಲೇ ತನಿಖಾ ಆಯೋಗ ರಚಿಸಿದ್ದೇವೆ ಎಂದರು.
ಇದರಲ್ಲಿ ಯಾವುದೇ ದ್ವೇಷ ರಾಜಕಾರಣವಿಲ್ಲ. ಬೊಮ್ಮಾಯಿ ಅವರಿಂದ ನಮಗೆ ಪ್ರಮಾಣ ಪತ್ರ ಬೇಡ. ಆಕ್ಸಿಜನ್ ದುರಂತದಲ್ಲಿ 36 ಜನ ಸತ್ತಿದ್ದರು. ಆದರೆ ಆಗಿನ ಸಚಿವರು ಕೇವಲ 3 ಜನ ಮಾತ್ರ ಸತ್ತಿದ್ದಾರೆ ಎಂದು ಹೇಳಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಹೊಳೆಗಾರಿಕೆ ಮಾಡಿಲ್ಲ. ಯಾರ ವಿರುದ್ಧವೂ ಕ್ರಮ ಕೈಗದೊಂಡಿಲ್ಲ. ಈ ಪ್ರಕರಣ ತನಿಖೆ ಆಗಬಾರದೇ? ಕೋವಿಡ್ ಉಪಕರಣಗಳ ಖರೀದಿಯಲ್ಲಿ ಕೇಂದ್ರ ಸರ್ಕಾರ ಮಾಡಿರುವ ವೆಚ್ಚದ ದರಕ್ಕೂ ರಾಜ್ಯ ಸರ್ಕಾರದ ವೆಚ್ಚದ ದರಕ್ಕೂ ಭಾರಿ ವ್ಯತ್ಯಾಸವಿದೆ.
ಇನ್ನು ಬೆಡ್ ಬ್ಲಾಕಿಂಗ್ ವಿಚಾರವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪ ಮಾಡಿದ್ದರು. ಇದೆಲ್ಲದರ ಬಗ್ಗೆ ತನಿಖೆ ಮಾಡಬೇಕಲ್ಲವೇ? ಇನ್ನು ಸರ್ಕಾರ ರೂಪಿಸಿದ 10 ಸಾವಿರ ಬೆಡ್ ಗಳ ಕೇಂದ್ರದಲ್ಲಿ ಯಾರೂ ಚಿಕಿತ್ಸೆ ಪಡೆಲಿಲ್ಲ. ಇದಕ್ಕೆ ಸಂಬಂಧಿಸಿದ ಗುತ್ತಿಗೆದಾರರು ಕಣ್ಣೀರು ಹಾಕುತ್ತಿದ್ದಾರೆ. ಈ ಎಲ್ಲದರ ಬಗ್ಗೆ ತನಿಖೆ ಮಾಡಿ ರಾಜ್ಯದ ಜನರಿಗೆ ನ್ಯಾಯ ಒದಗಿಸಿಕೊಡಬೇಕು ಎಂಬುದು ನಮ್ಮ ಬದ್ಧತೆ" ಎಂದು ತಿಳಿಸಿದರು.
"ಬಿಜೆಪಿ ನಾಯಕರು ನಮ್ಮ ಮೇಲೆ ಸುಳ್ಳು ಆರೋಪ ಮಾಡಿ, ನಾವು ಕಷ್ಟ ಅನುಭವಿಸುವಂತೆ ಮಾಡಿಲ್ಲವೇ? 79 a,b ಎಷ್ಟು ಪ್ರಕರಣಗಳು ಇದ್ದವು, ಎಷ್ಟೊಂದು ಪ್ರಕರಣಗಳನ್ನು ತನಿಖೆಗೆ ತೆಗೆದುಕೊಳ್ಳಬೇಕಿತ್ತು, ಆಸ್ತಿಗಳ ಮೌಲ್ಯ ಮಾಪನದಲ್ಲಿ ಅಕ್ರಮ ಎಸಗಿಲ್ಲವೇ? ಹೀಗೆ ಬೆಂಗಳೂರು ಸುತ್ತಾ ಮುತ್ತಾ ನಡೆದಿರುವ ಭೂ ಹಗರಣಗಳ ಪಟ್ಟಿ ಹೇಳುತ್ತಾ ಹೋಗಲೇ? ನಾವು ಇನ್ನೂ ಏನೇನು ತೆಗೆಯಬೇಕು ಕೇಳಿ ಅವರನ್ನು, ನನ್ನ ಬಳಿ ಇರುವ ಎಲ್ಲವನ್ನು ಹೊರಗೆ ತೆಗೆಯುತ್ತೇವೆ" ಎಂದು ಸವಾಲು ಹಾಕಿದರು.












Click it and Unblock the Notifications