ಹೆಚ್.ಡಿ.ಕುಮಾರಸ್ವಾಮಿಗೆ ಸವಾಲ್ ಹಾಕಿದ ಡಿ.ಕೆ.ಶಿವಕುಮಾರ್, ಯಾವ ಕಾರಣಕ್ಕೆ?
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಹಲವು ಸವಾಲುಗಳನ್ನು ಹಾಕಿದ್ದಾರೆ. ರಾಜ್ಯ ಸರ್ಕಾರದಿಂದ ಹಾಲಿನ ದರ ಏರಿಕೆ ವಿಚಾರವಾಗಿ ಕುಮಾರಸ್ವಾಮಿ ಅವರು ಹಲವು ಆರೋಪಗಳನ್ನು ಮಾಡಿದ್ದರು. ಈಸ್ಟ್ ಇಂಡಿಯಾ ಕಾಂಗ್ರೆಸ್ ಎಂದು ಕರೆಯುವ ಮೂಲಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಇದಕ್ಕೆ ದೆಹಲಿಯಿಂದಲೇ ಉತ್ತರಿಸಿರುವ ಡಿಕೆ ಶಿವಕುಮಾರ್ ಅವರು ಕುಮಾರಸ್ವಾಮಿ ಅವರಿಗೆ ಕಾಳಜಿ ಇದ್ದರೆ ಹಸುಗಳ ಮೇವಿನ ಬೆಲೆ ಕಡಿಮೆ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ.
ಕುಮಾರಸ್ವಾಮಿ ಏನಾದರೂ ಟೀಕೆ ಮಾಡಲಿ, ರೈತರು ಬದುಕಬೇಕಲ್ವಾ? ಹಾಗಾಗಿ ಅವರು ಜಿಎಸ್‌ಟಿ, ಇಂಧನ ತೈಲ ಬೆಲೆ ಎಲ್ಲವನ್ನೂ ಕಡಿಮೆ ಮಾಡಿಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಹಾಲಿನ ದರ ಹೆಚ್ಚಳದ ಹಣ ಸರ್ಕಾರಕ್ಕೆ ಹೇಗೆ ಹೋಗುತ್ತದೆ? ಅವರಿಗೆ ಹಾಲು ಒಕ್ಕೂಟದ ವ್ಯವಸ್ಥೆ ಬಗ್ಗೆ ಗೊತ್ತೇ ಇಲ್ಲ, ಈ ಬಗ್ಗೆ ಕುಮಾರಸ್ವಾಮಿ ಬೇಕಾದ್ರೆ ತಮ್ಮ ಸಹೋದರ ಹೆಚ್‌ಡಿ ರೇವಣ್ಣನ ಬಳಿ ಮಾಹಿತಿ ಪಡೆಯಲಿ ಎಂದು ತಿರುಗೇಟು ನೀಡಿದ್ದಾರೆ.

ಹಾಲಿನ ದರ ಏರಿಕೆ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಖಂಡನೆ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಸರ್ಕಾರದಿಂದ ಎರಡು ವರ್ಷಗಳ ಸರಣಿ ಸುಲಿಗೆ, ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆ ಹೋಳಿಗೆ ಎಂದು ಕಿಡಿಕಾರಿದ್ದರು. ಇದು ಪ್ರಜಾಪ್ರಭುತ್ವ ಸರ್ಕಾರವಲ್ಲ, ದರ ಏರಿಕೆ, ತೆರಿಗೆ ಹೇರಿಕೆ ಸರ್ಕಾರ. ಇದು ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ. ಸುಲಿಗೆಯಷ್ಟೇ ಇದರ ನಿತ್ಯಕೃತ್ಯ. ಕರ್ನಾಟಕ ರಾಜ್ಯ ಈಗ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿಯ ಕಪಿಮುಷ್ಟಿಯಲ್ಲಿದೆ. ಈಸ್ಟ್ ಇಂಡಿಯಾ ಕಾಂಗ್ರೆಸ್ ಎಂದು ಹರಿಹಾಯ್ದಿದ್ದರು.
ಸತತ ಮೂರನೇ ಸಲ ಹಾಲಿನ ದರ ಏರಿಕೆ ಮಾಡಿದ್ದೀರಿ. 2023 ಆಗಸ್ಟ್‌ನಲ್ಲಿ 3 ರೂಪಾಯಿ, 2024ರ ಜೂನ್‌ನಲ್ಲಿ 2 ರೂಪಾಯಿ ಹಾಗೂ 2025 ಮಾರ್ಚ್ ಅಂದರೆ ಈಗ 4 ರೂಪಾಯಿ ದರ ಏರಿಕೆ ಮಾಡಲಾಗಿದೆ. ಇನ್ನು ವಿದ್ಯುತ್ ಶಾಕ್ ಕೂಡ ಕೊಟ್ಟಿದ್ದಾರೆ. ಈಗ ಎಲ್ಲರಿಗೂ ಪ್ರತೀ ಯೂನಿಟ್‌ಗೆ 36 ಪೈಸೆ ಬರೆ ಹಾಕಿದ್ದಾರೆ. ಇದರಿಂದ ಮಹಾದೇವಪ್ಪನಿಗೂ ಶಾಕು, ಕಾಕಾ ಪಾಟೀಲನಿಗೂ ಶಾಕು ಎಂದು ವ್ಯಂಗ್ಯವಾಡಿದ್ದರು.

ಒಂದು ಕೈಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ಕಿತ್ತುಕೊಳ್ಳುವ ದಶಾವತಾರಿ ರಾವಣರೂಪಿ ಸುಲಿಗೆಯ ಪ್ರವೃತ್ತಿ ಕನ್ನಡಿಗರ ಪಾಲಿಗೆ ನಿಜಕ್ಕೂ ಮರಣಶಾಸನ. ಹಾಲು, ವಿದ್ಯುತ್ ದರ ಏರಿಕೆ ಕೂಡ ಖಂಡನೀಯ. ನೆಪ ಮಾತ್ರ ರೈತರದ್ದು, ಆದರೆ ಲಾಭ ಕೆಎಂಎಫ್‌ಗೆ. ಕಾಂಗ್ರೆಸ್ ಕಂಪನಿ ಆಡಳಿತ ನಡೆಸುತ್ತಿದೆ. ಮೊಸರು ದರ ಕೂಡ 4 ರೂಪಾಯಿ ಏರಿಕೆ ಮಾಡಿ, ಈ ಹಣ ಏನು ಮಾಡುತ್ತೀರಿ? ರೈತರಿಗೆ ವರ್ಗಾಯಿಸುತ್ತೀರೋ ಅಥವಾ ಕೆಎಂಎಫ್ ತಾನೇ ಉಳಿಸಿಕೊಳ್ಳಿಲಿದೆಯೇ? ಮೊದಲು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದ್ದರು.












Click it and Unblock the Notifications