DK Shivakumar: ಹಲವು ಬೇಡಿಕೆಗಳ ಈಡೇರಿಕೆಗೆ ಪೌರಕಾರ್ಮಿಕರ ಧರಣಿ: ಡಿ.ಕೆ. ಶಿವಕುಮಾರ್ ಕೊಟ್ಟ ಭರವಸೆ ಏನು?
ಬೆಂಗಳೂರು, ಡಿಸೆಂಬರ್ 04: ವಿಧಾನಮಂಡಲ ಅಧಿವೇಶನದ ಬಳಿಕ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು. ಪೌರಕಾರ್ಮಿಕರ ಬಗ್ಗೆ ನಮಗೆ ಸಹಾನುಭೂತಿ ಇದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಹೇಳಿದರು.
ಐಪಿಡಿ ಸಾಲಪ್ಪ ವರದಿ ಜಾರಿ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಮಾಡುತ್ತಿದ್ದ ಪೌರಕಾರ್ಮಿಕರನ್ನು ಶಿವಕುಮಾರ್ ಅವರು ಭೇಟಿದ ಬಳಿಕ ಮಾತನಾಡಿ, ಕಳೆದ 25 ವರ್ಷಗಳಿಂದ ಮಾತ್ರವಲ್ಲ, ಈ ಸಮಾಜ ಆರಂಭವಾದಾಗಿನಿಂದಲೂ ನೀವು ಈ ಕೆಲಸ ಮಾಡುತ್ತಾ ಸೇವೆ ಮಾಡುತ್ತಿದ್ದೀರಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.

ಕಳೆದ ಸರ್ಕಾರದ ಅವಧಿಯಲ್ಲಿ ನೀವು ಪಾಲಿಕೆ ವ್ಯಾಪ್ತಿಗೆ ಬರುವುದಿಲ್ಲ ಎಂದು ತೀರ್ಮಾನ ಮಾಡಲಾಗಿತ್ತು. ಆಗ ನಿಮ್ಮ ಜತೆ ಚರ್ಚೆ ಮಾಡಲಾಗಿತ್ತು. ಈಗಲೂ ನೀವು ಹೋರಾಟ ಮಾಡುತ್ತಿದ್ದೀರಿ. ದೇಶದ ವಿವಿಧ ಭಾಗಗಳಲ್ಲಿ ವಿವಿಧ ವ್ಯವಸ್ಥೆ ಇವೆ. ಏನೇ ಮಾಡಿದರೂ ವ್ಯವಸ್ಥಿತವಾಗಿ ಮಾಡಬೇಕು.
ಖಾಸಗಿಯವರ ಜತೆ ಗುತ್ತಿಗೆ ಆಧಾರದ ಮೇಲೆ ನೀವು ಕೆಲಸ ಮಾಡುತ್ತಿದ್ದೀರಿ. ನಿಮಗೆ ಎಲ್ಲಾ ರೀತಿಯಲ್ಲೂ ಸೂಕ್ತವಾಗುವಂತೆ ನೆರವು ನೀಡಬೇಕು. ಈ ವಿಚಾರವಾಗಿ ನಮ್ಮ ಸರ್ಕಾರ ಸಿಎಂಸಿ ಮಟ್ಟದಲ್ಲಿ ಕೆಲವು ಪರಿಹಾರ ತೆಗೆದುಕೊಂಡಿದೆ. ಅಧಿವೇಶನದ ಬಳಿಕ ನಿಮ್ಮಲ್ಲಿರುವ ಎಲ್ಲಾ ಗುಂಪುಗಳನ್ನು ಕರೆಸಿ ಚರ್ಚೆ ಮಾಡಿ ಕಾನೂನು ಚೌಕಟ್ಟಿನಲ್ಲಿ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಪರಿಹಾರ ಕೈಗೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಹಾಸನದಲ್ಲಿ ಜನಕಲ್ಯಾಣ ಸಮಾವೇಶದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷ ಸುಧೀರ್ಘ ಇತಿಹಾಸ ಹೊಂದಿರುವ ದೊಡ್ಡ ಪಕ್ಷ. ಕಾಂಗ್ರೆಸ್ ಪಕ್ಷದ ಜತೆ ಯಾವುದೇ ಸಂಘ ಸಂಸ್ಥೆಗಳು ಸೇರಿಕೊಳ್ಳಬಹುದು. ಆದರೆ ಕಾಂಗ್ರೆಸ್ ಬೇರೆಯವರ ಜತೆ ಸೇರಿಕೊಳ್ಳುವುದಿಲ್ಲ. ನಾನು ಈ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಭಾಗವಹಿಸುತ್ತಿದ್ದೇನೆ.
ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಕಾಂಗ್ರೆಸ್ ನಾಯಕರಾಗಿ ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ನಮ್ಮ ನೇತೃತ್ವದಲ್ಲೇ ಸಮಾವೇಶ ನಡೆಯಲಿದೆ. ನಮ್ಮ ಸರ್ಕಾರದಿಂದ ಆಗಿರುವ ಅಭಿವೃದ್ಧಿ ಸಾಧನೆಗಳು ಹಾಗೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸುಳ್ಳುಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ಸಮಾವೇಶ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇನ್ನೂ ಈ ತೀರ್ಮಾನದಿಂದ ಸಿದ್ದರಾಮಯ್ಯ ಅವರ ನಿಷ್ಠರಿಗೆ ಅಸಮಾಧಾನವಾಗಿದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಇಲ್ಲಿ ಯಾರೂ ಶಿವಕುಮಾರ್ ಬೆಂಬಲಿಗರು, ಸಿದ್ದರಾಮಯ್ಯ ಬೆಂಬಲಿಗರಿಲ್ಲ. ಪ್ರತಿಯೊಬ್ಬರೂ ಕಾಂಗ್ರೆಸ್ ಬೆಂಬಲಿಗರು ಎಂದು ತಿಳಿಸಿದರು.
ವಿಕಲಚೇತನತೆ ವರವೂ ಅಲ್ಲ, ಶಾಪವೂ ಅಲ್ಲ. ದೇವರು ನಿಮಗೆ ಜೀವನದಲ್ಲಿ ನೀಡಿರುವ ಪರೀಕ್ಷೆ. ಇದನ್ನು ಮೆಟ್ಟಿನಿಂತ ಅನೇಕರು ಸಾಧನೆ ಮಾಡಿ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ನೀವೂ ಇದನ್ನು ಅನುಸರಿಸಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಕಲಚೇತನರಿಗೆ ಕಿವಿಮಾತು ಹೇಳಿದರು.












Click it and Unblock the Notifications