ಕರ್ನಾಟಕದಲ್ಲಿ ಮತ್ತೊಂದು ಚುನಾವಣೆಗೆ ಮುಹೂರ್ತ ನಿಗದಿ
ಬೆಂಗಳೂರು, ಮೇ.13: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಬಳಿಕ ಮತ್ತೊಂದು ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ರಾಜ್ಯದ ವಿಧಾನಪರಿಷತ್ತಿನ 6 ಸ್ಥಾನಗಳಿಗೆ ನಡೆಯಬೇಕಿರುವ ಚುನಾವಣೆಗೆ ಆಯೋಗವು ಅಧಿಸೂಚನೆ ಹೊರಡಿಸಿದೆ.
ಜೂನ್ 21ರಂದು ಕರ್ನಾಟಕದ ಶಿಕ್ಷಕರ ಕ್ಷೇತ್ರ, ಪದವೀಧರರ ಕ್ಷೇತ್ರದ ತಲಾ 3 ಸದಸ್ಯರ ಅವಧಿ ಮುಕ್ತಾಯವಾಗಲಿದ್ದು, ಈ ಕ್ಷೇತ್ರಗಳಿಗೆ ಜೂನ್ 8ಕ್ಕೆ ಚುನಾವಣೆ ನಡೆಯಲಿದೆ.
ಡಿ.ಎಚ್. ಶಂಕರಮೂರ್ತಿ, ರಮೇಶ್ ಬಾಬು, ಮರಿತಿಬ್ಬೇಗೌಡ, ಗಣೇಶ್ ಕಾರ್ಣಿಕ್, ರಾಮಚಂದ್ರಗೌಡ, ಅಮರನಾಥ್ ಪಾಟೀಲ್ ಸೇರಿ 6 ಸದಸ್ಯರ ಅಧಿಕಾರಾವಧಿ ಜೂನ್ 21ಕ್ಕೆ ಮುಕ್ತಾಯವಾಗುತ್ತಿದೆ. ಈ 6 ಮಂದಿ ಪ್ರತಿನಿಧಿಸಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ, ನೈಋತ್ಯ ಪದವೀಧರರ ಕ್ಷೇತ್ರ, ಬೆಂಗಳೂರು ಪದವೀಧರರ ಕ್ಷೇತ್ರ, ಈಶಾನ್ಯ ಪದವೀಧರರ ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

ಮೇ 15 ರಿಂದ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಮೇ 22 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಮೇ 23ರಂದು ಪರಿಷತ್ ಚುನಾವಣೆಯ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮೇ 25 ಕೊನೆಯ ದಿನವಾಗಿದೆ.
ಜೂನ್ 8ರಂದು 6 ಕ್ಷೇತ್ರಗಳಲ್ಲಿ ವಿಧಾನಪರಿಷತ್ ಚುನಾವಣೆ ನಡೆಯಲಿದೆ. ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಜೂನ್ 12ರಂದು 6 ಪರಿಷತ್ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ.












Click it and Unblock the Notifications