Darshan Thoogudeepa: ದರ್ಶನ್ ನ್ಯಾಯಾಂಗ ಬಂಧನ ಆ. 28ರ ತನಕ ವಿಸ್ತರಣೆ
ಬೆಂಗಳೂರು, ಆಗಸ್ಟ್ 14: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ, ನಟ ದರ್ಶನ್ ಮತ್ತು ಇತರ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಆಗಸ್ಟ್ 28ರ ತನಕ ವಿಸ್ತರಣೆ ಮಾಡಲಾಗಿದೆ. ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. 50 ದಿನಗಳಿಗೂ ಅಧಿಕ ಕಾಲದಿಂದ ಪ್ರಕರಣದ ಎ-2 ಆರೋಪಿ ದರ್ಶನ್ ಮತ್ತು ಇತರ ಆರೋಪಿಗಳು ಜೈಲಿನಲ್ಲಿದ್ದಾರೆ.
ಬುಧವಾರ ಬೆಂಗಳೂರಿನ 24ನೇ ಎಸಿಎಂಎಂ ಇನ್‌ಚಾರ್ಜ್ ಕೋರ್ಟ್‌ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ಸೇರಿ ಹಲವು ಆರೋಪಿಗಳು, ತುಮಕೂರು ಜೈಲಿನಿಂದ ನಾಲ್ವರು ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿತ್ತು.

ಆಗಸ್ಟ್ 1ರಂದು ನಟ ದರ್ಶನ್ಮತ್ತು ಇತರ ಆರೋಪಿಗಳ ನ್ಯಾಯಾಂಗ ಬಂಧನವನ್ನು ಆಗಸ್ಟ್ 14ರ ತನಕ ವಿಸ್ತರಣೆ ಮಾಡಲಾಗಿತ್ತು. ಇಂದು ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಪೊಲೀಸರು ಪುನಃ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿದ್ದರು.
ಆರೋಪಿಗಳನ್ನು ನ್ಯಾಯಾಧೀಶ ವಿಶ್ವನಾಥ್ ಸಿ. ಗೌಡರ್ ಮುಂದೆ ಬುಧವಾರ ಹಾಜರುಪಡಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಆಗಸ್ಟ್ 28ರ ತನಕ ವಿಸ್ತರಣೆ ಮಾಡಿ ಆದೇಶವನ್ನು ಹೊರಡಿಸಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 11ರಂದು ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಟ ದರ್ಶನ್ ಬಂಧಿಸಲಾಗಿತ್ತು. ಪೊಲೀಸರ ವಿಚಾರಣೆ ಬಳಿಕ ಜೂನ್ 22ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಅರ್ಜಿಯ ವಿಚಾರಣೆ ವೇಳೆ ಕೋರ್ಟ್‌ಗೆ ಆರೋಪಿಗಳು ಸಾಕ್ಷಿ ನಾಶಪಡಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಐವರು ಆರೋಪಿಗಳು ಸಾಕ್ಷಿಗಳನ್ನು ನಾಶ ಮಾಡಲು ಪ್ರಯತ್ನಿದ್ದಾರೆ ಎಂದು ತಿಳಿಸಲಾಯಿತು.
ನಟ ದರ್ಶನ್ ಸೇರಿದಂತೆ ಯಾವುದೇ ಆರೋಪಿಗಳು ಸಹ ಇದುವರೆಗೂ ಜಾಮೀನು ಪಡೆಯಲು ಅರ್ಜಿ ಸಲ್ಲಿಕೆ ಮಾಡಿಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ-1 ಆರೋಪಿ, ನಟ ದರ್ಶನ್ ಎ-2 ಆರೋಪಿಯಾಗಿದ್ದಾರೆ.
ಹತ್ಯೆ ಪ್ರಕರಣದ ಬಗ್ಗೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡುವ ತನಕ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಕೆ ಮಾಡುವುದಿಲ್ಲ ಎಂಬ ಮಾಹಿತಿ ಇದೆ. ಪೊಲೀಸರು ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, ಪ್ರಕರಣದ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಮಂಗಳವಾರ ಪೊಲೀಸರ ಕೈ ಸೇರಿದೆ.
ಪೊಲೀಸರು ತನಿಖೆಯಲ್ಲಿ ಸಾಕ್ಷ್ಯಗಳ ಸಂಗ್ರಹ, ಸಾಕ್ಷ್ಯಗಳ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ದರ್ಶನ್ ಪರ ವಕೀಲರು ಚಾರ್ಜ್ ಶೀಟ್‌ನಲ್ಲಿ ಇರುವ ಅಂಶಗಳನ್ನು ಗಮನಿಸಿದ ಬಳಿಕ ಜಾಮೀನು ಅರ್ಜಿಯನ್ನು ಸಲ್ಲಿಕೆ ಮಾಡಲಿದ್ದಾರೆ. ನ್ಯಾಯಾಂಗ ಬಂಧನದ ಅವಧಿ ಗರಿಷ್ಠ 14 ದಿನಗಳು ಇರುವುದರಿಂದ ಅವಧಿ ಪೂರ್ಣಗೊಂಡ ಬಳಿಕ ಪೊಲೀಸರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸುತ್ತಾರೆ.
ಬುಧವಾರ ಪರಪ್ಪನ ಅಗ್ರಹಾರ ಜೈಲಿಗೆ ನಟ ಅಭಿಷೇಕ್ ಅಂಬರೀಶ್, ಚಿಕ್ಕಣ್ಣ ಸೇರಿದಂತೆ ದರ್ಶನ್ ಹಲವು ಸ್ನೇಹಿತರು ಆಗಮಿಸಿದ್ದರು. ಅಭಿಷೇಕ್ ದರ್ಶನ್ ತಬ್ಬಿಕೊಂಡು ಕಣ್ಣೀರು ಹಾಕಿದ್ದು, ಸುಮಲತಾ ಆರೋಗ್ಯವನ್ನು ದರ್ಶನ್ ವಿಚಾರಿಸಿದ್ದಾರೆ ಎಂಬ ಮಾಹಿತಿ ಇದೆ.












Click it and Unblock the Notifications