ಕಾವೇರಿಗಾಗಿ ಮುಂದುವರೆದ ಹೋರಾಟ ಕಿಚ್ಚು; ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದೇನು?: ಡಿ ಕೆ ಶಿವಕುಮಾರ್ ಹೇಳಿದಿಷ್ಟು
ಬೆಂಗಳೂರು, ಸೆಪ್ಟೆಂಬರ್ 23: ತಮಿಳುನಾಡಿಗೆ ನಾವು ನೀರು ಬಿಡದಿದ್ದರೂ 3,00 ದಿಂದ 3,500 ಕ್ಯೂಸೆಕ್ ನೀರು ಹೋಗುತ್ತಿರುತ್ತದೆ. ಇದನ್ನು ಸೆಪ್ಟೆಂಬರ್ 26 ರವರೆಗೆ ಮುಂದುವರೆಸುತ್ತೇವೆ. ಬಳಿಕ ರಾಜ್ಯದ ಪರ, ರೈತರ ಹಿತ ಕಾಯಲು ಯಾವುದೆಲ್ಲಾ ನಡೆ ಅನುಸರಿಸಬಹುದು ಎಂಬ ಬಗ್ಗೆ ರೂಪರೇಷೆ ಸಿದ್ಧಪಡಿಸುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಈ ಕುರಿತು ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕಾವೇರಿ ವಿಚಾರವಾಗಿ ನಿರಂತರ ಹೋರಾಟ ಹಾಗೂ ತಮಿಳು ನಾಡಿಗೆ ಕಾವೇರಿ ನೀರು ಬಿಡುವ ಕುರಿತು ಚರ್ಚಿಸಿದ ಬಳಿಕ, ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈಗಾಗಲೇ ಆಣೆಕಟ್ಟು ಕೆಳ ಹಂತದಲ್ಲಿ ನಮ್ಮ ನಿಯಂತ್ರಣ ಮೀರಿ 3500 ಕ್ಯೂಸೆಕ್ ನೀರು ಹರಿಯುತ್ತಿದೆ. ಉಳಿದ ನೀರನ್ನು ಹೊಂದಿಸಿ ಆದೇಶ ಪಾಲನೆ ಮಾಡುತ್ತೇವೆ. ಇದರ ಜೊತೆಗೆ ರಾಜ್ಯದ ಕುಡಿಯುವ ನೀರು ಅಗತ್ಯ ಹಾಗೂ ರೈತರ ಹಿತ ಕಾಯುವ ಕೆಲಸ ಮಾಡುತ್ತೇವೆ.

ಕಾವೇರಿ ವಿಚಾರವಾಗಿ ಅಡ್ವೊಕೇಟ್ ಜನರಲ್ ಅವರು ಸಂಪುಟ ಸದಸ್ಯರಿಗೆ ವಸ್ತುಸ್ಥಿತಿ ವಿವರಿಸಿದ್ದಾರೆ. ಕಾವೇರಿ ಆಣೆಕಟ್ಟುಗಳ ಒಳಹರಿವು 7500 ರಿಂದ 8000 ಕ್ಯೂಸೆಕ್ ಇದೆ. 3500 ಕ್ಯೂಸೆಕ್ ನಷ್ಟು ನೀರು ಹೊರ ಹೋಗುತ್ತಿದೆ.ಕಾವೇರಿ ನೀರು ಹಂಚಿಕೆ ವಿಚಾರವಾಗಿ ನ್ಯಾಯಾಲಯದ ಆದೇಶ ಪಾಲನೆ ಹಾಗೂ ರಾಜ್ಯದ ರೈತರ ಹಿತ ಕಾಯಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಮೇಕೆದಾಟು ಯೋಜನೆ ವಿಚಾರ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆಗೆ ಪ್ರಸ್ತಾಪ ಆಗಿದೆ. ಈ ಯೋಜನೆ ಮುಂದುವರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ, ಕೇಂದ್ರ ಸರ್ಕಾರದ ಅನುಮತಿ ಪಡೆದು ಯೋಜನೆ ಆರಂಭಿಸಲು ಸರ್ಕಾರದ ಪ್ರಯತ್ನ ಮುಂದುವರಿಯಲಿದೆ. ಈ ಯೋಜನೆಯಿಂದ ಎರಡೂ ರಾಜ್ಯಗಳಿಗೆ ಉಪಯೋಗ ಆಗಲಿದೆ. ಇದಕ್ಕೆ ಬೇಕಾದ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ರಾಜಕಾರಣ ಮಾಡುವವರು ರಾಜಕಾರಣ ಮಾಡಲಿ. ನಾವು ರೈತರ ಹಿತ ಕಾಯುವ ಕೆಲಸ ಮಾಡುತ್ತೇವೆ.ಇದರ ಜೊತೆಗೆ ನ್ಯಾಯಾಲಯದ ಆದೇಶ ಪಾಲನೆ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.
ತಮಿಳುನಾಡು ಜತೆ ಮಾತುಕತೆ ನಡೆಸುತ್ತಿರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು. ಇನ್ನೂ ವಿಶೇಷ ಅಧಿವೇಶನದ ಬಗ್ಗೆ ಚರ್ಚೆ ಕುರಿತು ಮಾತನಾಡಿ, ನಮಗೆ ಈ ವಿಚಾರವಾಗಿ ಯಾವುದೇ ಪ್ರಸ್ತಾವನೆ ಬಂದಿಲ್ಲ. ಹೀಗಾಗಿ ಈ ಬಗ್ಗೆ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.
ಬಂದ್ ಹಾಗೂ ಬಿಜೆಪಿ ಹೋರಾಟದ ಬಗ್ಗೆ ಕುರಿತು ಮಾತನಾಡಿ, ಬಿಜೆಪಿ ಅವರ ರಾಜಕಾರಣ ಮಾಡುತ್ತಿದ್ದಾರೆ ಮಾಡಲಿ. ನಾವು ನಮ್ಮ ಕೆಲಸ ಮಾಡುತ್ತೇವೆ ಎಂದು ತಿಳಿಸಿದ ಅವರು, ನ್ಯಾಯಾಲಯದ ಆದೇಶ ಪಾಲನೆ ಮಾಡುತ್ತಾ ರೈತರ ಹಿತವನ್ನ ಕಾಪಾಡುತ್ತವೆ. ಖಂಡಿತವಾಗಿ ನಾವು ಆದೇಶ ಪಾಲನೆ ಹಾಗೂ ರೈತರ ಹಿತ ಕಾಯುತ್ತೇವೆ ಎಂದು ತಿಳಿಸಿದರು.
ಕುಂಚಿಟಿಗ ಒಕ್ಕಲಿಗ ಸಮುದಾಯವನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರಿಸಲು ತೀರ್ಮಾನಿಸಲಾಗಿದೆ. ಕೊಡವ ಸಮಾಜದಲ್ಲಿ ಕೊಡವರು, ಕೊಡವ ಎಂಬ ಪದದ ವಿಚಾರವಾಗಿ ಇದ್ದ ಗೊಂದಲ ಬಗೆ ಹರಿಸಲು ತೀರ್ಮಾನಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ 15 ವರ್ಷಗಳ ಹಳೆಯ ವಾಹನಗಳನ್ನು ಸ್ಕ್ರಾಪ್ ಮಾಡಲು ಸರ್ಕಾರ ತೀರ್ಮಾನಿಸಿದೆ. ಖಾಸಗಿ ವಾಹನ ವಿಚಾರವಾಗಿ ಮುಂದೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.












Click it and Unblock the Notifications