48 ಗಂಟೆಗಳಲ್ಲಿ ಕರ್ನಾಟಕಕ್ಕೆ ಅಪ್ಪಳಿಸಲಿದೆ 'ಮಹಾ' ಚಂಡಮಾರುತ
Recommended Video
ಬೆಂಗಳೂರು, ಅಕ್ಟೋಬರ್ 31: ಮುಂದಿನ 48 ಗಂಟೆಗಳಲ್ಲಿ ಕರ್ನಾಟಕಕ್ಕೆ 'ಮಹಾ' ಚಂಡಮಾರುತ ಅಪ್ಪಳಿಸಲಿದೆ. ಕಳೆದ ಒಂದು ವಾರದ ಹಿಂದಷ್ಟೇ 'ಕ್ಯಾರ್' ಚಂಡಮಾರುತ ಸೃಷ್ಟಿಯಾಗಿ ಕರಾವಳಿ ಜನರನ್ನು ಆತಂಕಕ್ಕೀಡು ಮಾಡಿತ್ತು.
ಈಗ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗುತ್ತಿದ್ದು ಅದು ಚಂಡಮಾರುತವಾಗಿ ಮಾರ್ಪಾಡಾಗಲಿದೆ. ಇಂದು ಹಾಗೂ ನಾಳೆ ಎಂದರೆ ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ಅದು ಚಂಡಮಾರುತವಾಗಿ ಮತ್ತೆ ಅರಬ್ಬೀ ಸಮುದ್ರದಲ್ಲಿ ತನ್ನ ಆರ್ಭಟ ತೋರ್ಪಡಿಸುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆಯು ತಿಳಿಸಿತ್ತು.
ಅದರಂತೆ ಬುಧವಾರ ರಾತ್ರಿಯೇ ಮಳೆ, ಗುಡುಗು, ಮಿಂಚು ಕಾಣಿಸಿಕೊಂಡಿದ್ದು, ನ.4ರವರೆಗೂ ಇದು ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.
ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಸಹ ಘೋಷಿಸಲಾಗಿದೆ.

ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತ
ಲಕ್ಷದ್ವೀಪ ಬಳಿಯ ಅರಬ್ಬಿ ಸಾಗರದಲ್ಲಿ ವಾಯುಭಾರ ಕುಸಿತದಿಂದ ಮಹಾ ಚಂಡಮಾರುತ ಎದ್ದಿದ್ದು, ಇಂದು ಮಧ್ಯಾಹ್ನ ಲಕ್ಷದ್ವೀಪ ತೀರಕ್ಕೆ ಅಪ್ಪಳಿಸಲಿದೆ. ಸದ್ಯ ಲಕ್ಷದ್ವೀಪದ ರಾಜಧಾನಿ ಕವರಟ್ಟಿಯಿಂದ ಆಗ್ನೇಯ ದಿಕ್ಕಿನ 240 ಕಿ.ಮೀ ದೂರದಲ್ಲಿ ಮಹಾ ಚಂಡಮಾರುತ ಕೇಂದ್ರೀಕೃತವಾಗಿದೆ.

ಗಂಟೆಗೆ 100 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ
ಕಳೆದ ಎರಡು ದಿನಗಳಿಂದ ಸ್ವಲ್ಪ ಮಳೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಕರಾವಳಿಯ ಭಾಗದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಈಗಾಗಲೇ ಗಂಟೆಗೆ 90ರಿಂದ 100 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು, 2 ಮೀ. ಎತ್ತರದವರೆಗೂ ರಕ್ಕಸ ಅಲೆಗಳು ಏಳುತ್ತಿವೆ. ಈಗಾಗಲೇ ಲಕ್ಷದ್ವೀಪ, ಕೇರಳದ ಹಲವೆಡೆ ಭಾರೀ ಮಳೆ ಆಗುತ್ತಿದ್ದು, ಇದರ ಪರಿಣಾಮ ಕರ್ನಾಟಕಕ್ಕೂ ತಟ್ಟಲಿದೆ.

ಕ್ಯಾರ್ ಚಂಡಮಾರುತ ದಿಕ್ಕು ಬದಲು
ಅರಬ್ಬಿ ಸಮುದ್ರದಲ್ಲಿ ಕಳೆದ ವಾರ ಕಾಣಿಸಿಕೊಂಡಿದ್ದ 'ಕ್ಯಾರ್' ಚಂಡಮಾರುತವು ಒಮನ್ ನತ್ತ ತನ್ನ ದಿಕ್ಕು ಬದಲಿಸಿದರೂ ಬುಧವಾರ ರಾತ್ರಿ ಮಂಗಳೂರು ಸೇರಿದಂತೆ ಜಿಲ್ಲೆಯ ಹಲವು ಕಡೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಮತ್ತೆ ಚಂಡಮಾರುತದ ಭೀತಿ ಎದುರಾಗಿದೆ.

ಎರಡು ದಿನ ಕರಾವಳಿ ಭಾಗದಲ್ಲಿ ವರುಣನ ಆರ್ಭಟ
ಎರಡು ದಿನದಿಂದ ಕರಾವಳಿ ತೀರದಲ್ಲಿ ಮಳೆಯ ಆರ್ಭಟ ಕಡಿಮೆಯಾಗಿತ್ತು. ಮಂಗಳವಾರ ಹಗಲಿಡೀ ಬಿಸಿಲು ಆವರಿಸಿದ್ದರೆ ರಾತ್ರಿ ಸುಮಾರು 8 ಗಂಟೆಯ ಬಳಿಕ ಗುಡುಗು-ಮಿಂಚಿನ ಆರ್ಭಟದಿಂದ ಮತ್ತೆ ಆತಂಕದ ಛಾಯೆ ಸೃಷ್ಟಿಸಿದೆ. ಜಿಲ್ಲೆಯ ಮಂಗಳೂರು, ಉಳ್ಳಾಲ, ದೇರಳಕಟ್ಟೆ, ಸುರತ್ಕಲ್, ಬಂಟ್ವಾಳ ಸಹಿತ ತಾಲೂಕು ಕೇಂದ್ರಗಳು ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮಳೆಯಾಗಿದೆ.












Click it and Unblock the Notifications