Cyclone Fengal: ಚಂಡಮಾರುತ ಅಬ್ಬರ ತಗ್ಗೋದು ಯಾವಾಗ? ಇನ್ನೆಷ್ಟು ದಿನ ಭಾರೀ ಮಳೆ! ಹವಾಮಾನ ವರದಿ
ಬೆಂಗಳೂರು, ಡಿಸೆಂಬರ್ 02: ಬಂಗಾಳಕೊಲ್ಲಿ ನೈಋತ್ಯ ಭಾಗದಿಂದ ವೇಗವಾಗಿ ಬಂದ ಚಂಡಮಾರುತ 'ಫೆಂಗಲ್' ಕರಾವಳಿ ಜಿಲ್ಲೆಗಳನ್ನು ತಲ್ಲಣಗೊಳಿಸಿದೆ. ಇನ್ನಿಲ್ಲದಂತೆ ಸರ್ಕಾರ, ಜನರನ್ನು ಕಾಡಿದ್ದು, ಭಾರೀ ಮಳೆ ಸುರಿಸುತ್ತಿದೆ. ಬೆಂಗಳೂರು ಮತ್ತು ಕರ್ನಾಟಕ ಭಾಗದಲ್ಲಿ ಚಂಡಮಾರುತ ಎಫೆಕ್ಟ್ ಸಾಕಷ್ಟು ಪ್ರಮಾಣದಲ್ಲಿ ಉಂಟಾಗಿದೆ. ಹಾಗಾದರೆ ಇನ್ನೂ ಎಷ್ಟು ದಿನ ಈ ಭಾರೀ ಮಳೆ, ಶೀತ ವಾತಾವರಣ, ಚಳಿ ಇರಲಿದೆ. ಸದ್ಯದ ಸೈಕ್ಲೋನ್ ಪರಿಸ್ಥಿತಿ ಹೇಗಿದೆ?
ಚಂಡಮಾರುತವು ಶನಿವಾರ ಪುದುಚೇರಿ ಕರಾವಳಿ ಭಾಗಕ್ಕೆ ಅಪ್ಪಳಿಸುತ್ತಿದ್ದಂತೆ ವೇಗ ಕಡಿಮೆ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಪೂರ್ಣ ಪ್ರಮಾಣದಲ್ಲಿ ಇಳಿಕೆ ಕಂಡಿಲ್ಲ. ಡಿಸೆಂಬರ್ 02 ರಂದು ಸೋಮವಾರ ತಮಿಳುನಾಡು ಭಾಗದಲ್ಲಿ ಹಾಗೂ ಸಮುದ್ರ ಮಟ್ಟದಲ್ಲಿ ಸೈಕ್ಲೋನ್ ಪ್ರಭಾವ ಮುಂದುವರಿದಿದೆ. ಪರಿಣಾಮ ಚೆನ್ನೈ, ತಮಿಳುನಾಡು ಹಾಗೂ ಕರ್ನಾಟಕದ ಒಳನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ.

ಡಿಸೆಂಬರ್ 3ರಂದು ಮಂಗಳವಾರ ಸಹ ಈ ಕಡಿಮೆ ಒತ್ತಡದ ಪ್ರದೇಶವು (ಫೆಂಗಲ್ ಚಂಡಮಾರುತ) ಆಗ್ನೇಯ ದಿಕ್ಕಿನತ್ತ ಜೋರಾಗಿ ಬೀಸುವ ಸಾಧ್ಯತೆ ಇದೆ. ಉತ್ತರ ಕೇರಳ-ಕರ್ನಾಟಕ ಕರಾವಳಿಯ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮಾರ್ಗವಾಗಿ ಸಾಗುವ ನಿರೀಕ್ಷೆ ಇದೆ. ಅಲ್ಲಿಯವರೆಗೆ ವಿವಿಧೆಡೆ ಭಾರೀ ಮಳೆಯ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಈವರೆಗೆ ಚಂಡಮಾರುತ ಪ್ರಭಾವದಿಂದ ಕರ್ನಾಟಕದ ದಕ್ಷಿಣ ಒಳನಾಡಿಗೆ ಮಾತ್ರ ಭಾರೀ ಮಳೆಯ ಆತಂಕವಿತ್ತು. ಆದರೆ ಫೆಂಗಲ್ ಪೂರ್ವ ಅರಬ್ಬಿ ಸಮುದ್ರದತ್ತ ಸಾಗಿದರೆ, ಕರ್ನಾಟಕ ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡು ಜಿಲ್ಲೆಗಳಿಗೂ ವ್ಯಾಪಕ ಮಳೆ ಆಗುವ ಸಾಧ್ಯತೆ ಇದೆ.
ಮುಂದಿನ ಎರಡು ದಿಗನಳಲ್ಲಿ ಅಂದರೆ, ಡಿಸೆಂಬರ್ 4ರ ಹೊತ್ತಿಗೆ ಚಂಡಮಾರುತದ ತೀವ್ರ ಕುಂದುವ, ಗಾಳಿಯ ತೀವ್ರತೆಯಲ್ಲಿ ಇಳಿಕೆ ಆಗುವ ಲಕ್ಷಣಗಳು ಇವೆ ಎಂದು ಸೋಮವಾರದ ಹವಾಮಾನ ವರದಿ ತಿಳಿಸಿದೆ.
ಕರ್ನಾಟಕ ಹವಾಮಾನ ವರದಿ: ರೆಡ್ ಅಲರ್ಟ್
ಇಂದಿನಿಂದ ಡಿಸೆಂಬರ್ 5ರವರೆಗೆ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ವಿಜಯಪುರ, ಬೆಳಗಾವಿ, ಬಳ್ಳಾರಿ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಹಾಸನ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಬಹದು. ಮುಂದಿನ 48 ಗಂಟೆಗಳ ಕಾಲ ಇದೇ ರೀತಿ ಮೋಡ ಕವಿದ ಚಳಿಯ ವಾತಾವರಣವೇ ಮುಂದುವರಿಯಲಿದೆ ಎಂದು ಐಎಂಡಿ ಮಳೆ ಮುನ್ಸೂಚನೆ ವರದಿ ತಿಳಿಸಿದೆ.
ಚಂಡಮಾರುತ ವಿಸ್ತರಣೆ ಆಗುತ್ತಿರುವ ಕಾರಣ, ಮುಂದಿನ 24 ಗಂಟೆಯಲ್ಲಿ ಕೊಡಗು ಜಿಲ್ಲೆಗೆ ಗರಿಷ್ಠ 200 ಮಿ.ಮೀ.ಗೂ ಹೆಚ್ಚು ಮಳೆ ನಿರೀಕ್ಷೆ ಇದ್ದು 'ರೆಡ್ ಅಲರ್ಟ್' ನೀಡಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಅತ್ಯಧಿಕ ಭಾರೀ ಮಳೆ ಅಂದರೆ 130ರಿಂದ 200 ವರೆಗೆ ಧಾರಾಕಾರ ಮಳೆ ಆಗುವ ಪ್ರಯುಕ್ತ 'ಆರೆಂಜ್ ಅಲರ್ಟ್' ನೀಡಲಾಗಿದೆ ಎಂದು ಸೋಮವಾರದ IMD ವರದಿ ತಿಳಿಸಿದೆ.
ಇನ್ನೂ ರಾಜಧಾನಿ ಬೆಂಗಳೂರು ಸೇರಿದಂತೆ ಶಿವಮೊಗ್ಗ ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾರೀ ಮಳೆಯ ಕಾರಣಕ್ಕೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆಯಾ ಜಿಲ್ಲಾಡಳಿತಗಳು ಶಾಲೆಗಳಿಗೆ ರಜೆ ನೀಡಿ ಆದೇಶಿಸಿವೆ. ಮಕ್ಕಳ ಸುರಕ್ಷತೆಗಾಗಿ, ಮುಂಜಾಗ್ರತಾ ಕ್ರಮಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.












Click it and Unblock the Notifications