Cauvery Dispute: ತಮಿಳುನಾಡಿಗೆ ಮತ್ತೆ ನೀರು ಹರಿಸಲು ಸೂಚನೆ
ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿದೆ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿ ದಿನ 2600 ಕ್ಯೂಸೆಕ್ಸ್ ನೀರು ಹರಿಸುವಂತೆ ನಿಯಂತ್ರಣ ಸಮಿತಿ ರಾಜ್ಯಕ್ಕೆ ಸೂಚನೆ ನೀಡಿದೆ.
ಅಕ್ಟೋಬರ್ ಅಂತ್ಯದವರೆಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಕಳೆದ ಬಾರಿ ಸಭೆಯಲ್ಲಿ ಆದೇಶಿಸಿತ್ತು. ಆದೇಶದ ಅವಧಿ ಮುಕ್ತಾಯವಾಗುತ್ತಿರುವ ಬೆನ್ನಲ್ಲೇ ಮತ್ತೆ ನೀರು ಹರಿಸಲು ಸೂಚನೆ ನೀಡಿದೆ. ಕರ್ನಾಟಕದ ಪರ ಎಸಿಎಸ್ ರಾಕೇಶ್ ಸಿಂಗ್ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಭಾಗವಹಿಸಿ ವಾದ ಮಂಡಿಸಿದ್ದರು ರಾಜ್ಯಕ್ಕೆ ಹೆಚ್ಚಿನ ಪ್ರಯೋಜನವಾಗಿಲ್ಲ.

ತಮಿಳುನಾಡಿನಲ್ಲಿ ಹಿಂಗಾರು ಮಳೆಯಾಗುತ್ತಿದ್ದು ಮೆಟ್ಟೂರು ಜಲಾಶಯಕ್ಕೆ ನೀರು ಹರಿದುಹೋಗುತ್ತಿದೆ, ಕರ್ನಾಟಕ ರಾಜ್ಯಕ್ಕಿಂತ ತಮಿಳುನಾಡು ಹೆಚ್ಚಿನ ಹಿಂಗಾರು ಮಳೆಯನ್ನು ಪಡೆಯುತ್ತದೆ, ರಾಜ್ಯದಲ್ಲಿ ಮುಂಗಾರು ಕೈಕೊಟ್ಟ ಕಾರಣ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿರುವ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಿದ್ದು, ಕುಡಿಯುವ ನೀರಿಗೂ ಹೇಗೆ ಅನ್ನುವಂತಾಗಿದೆ.
ಈ ನಡುವೆಯೇ ಪ್ರತಿ ಬಾರಿ ಸಭೆ ನಡೆದಾಗಲೂ ಕಾವೇರಿ ನೀರು ನಿಯಂತ್ರಣ ಸಮಿತಿ ರಾಜ್ಯಕ್ಕೆ ತಮಿಳುನಾಡಿಗೆ ನೀರು ಹರಿಸಲು ಸೂಚನೆ ನೀಡುತ್ತಿರುವುದು ರಾಜ್ಯಕ್ಕೆ ಮಾರಕವಾಗಿದೆ. ಈಗಾಗಲೇ ತಮಿಳುನಾಡಿಗೆ ನೀರು ಹರಿಸದಂತೆ ಬಂದ್, ಪ್ರತಿಭಟನೆ ನಡೆದಿವೆ. ಈಗ ಮತ್ತೆ ನೀರು ಹರಿಸುವಂತೆ ಸೂಚನೆ ನೀಡಿರುವುದು ಈ ಭಾಗದ ರೈತರನ್ನು ಕೆರಳಿಸಿದೆ.
ರಾಜ್ಯ ಸರ್ಕಾರ ಕೂಡಲೇ ಅಧಿವೇಶನ ಕರೆದು ನೀರು ಹರಿಸಲು ಸಾಧ್ಯವಿಲ್ಲ ಎಂದು ನಿರ್ಣಯ ಕೈಗೊಳ್ಳುವಂತೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದರು, ಅಲ್ಲದೆ ಬರದ ಸಂದರ್ಭದಲ್ಲಿ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸೂತ್ರ ರಚನೆಗೂ ಒತ್ತಾಯ ಮಾಡಲಾಗಿದೆ.












Click it and Unblock the Notifications