ಬಿಟ್‌ಕಾಯಿನ್ ವಿಚಾರವನ್ನು ಕಾಂಗ್ರೆಸ್ ಇಟಲಿಯಲ್ಲೇ ತನಿಖೆ ಮಾಡಲಿ: ಸಿಟಿ ರವಿ ವ್ಯಂಗ್ಯ
ಬೆಂಗಳೂರು, ನ.9: ಬಿಟ್‌ಕಾಯಿನ್ ವಿಚಾರವಾಗಿ ಸರ್ಕಾರ ತನಿಖೆ ನಡೆಸುತ್ತಿದೆ. ಆದರೆ, ಕಾಂಗ್ರೆಸ್‌ಗೆ ತೃಪ್ತಿ ಇದ್ದಂತೆ ಕಾಣುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಕಾಂಗ್ರೆಸ್ ಕೇವಲ ಗಾಳಿಯಲ್ಲಿ ಗುಂಡು ಹೊಡೆಯುತ್ತಿದೆ. ಬಿಟ್‌ಕಾಯಿನ್ ವಿಚಾರವಾಗಿ ಸರ್ಕಾರ ಈಗಾಗಲೇ ತನಿಖೆ ನಡೆಸುತ್ತಿದೆ. ಆದರೆ, ಕಾಂಗ್ರೆಸ್ ನಾಯಕರ ಮಾತುಗಳನ್ನು ಗಮನಿಸಿದರೆ ಅವರಿಗೆ ಸರ್ಕಾರಿ ಸಂಸ್ಥೆಗಳ ತನಿಖೆಯ ಮೇಲೆ ತೃಪ್ತಿ ಇದ್ದಂತೆ ಕಾಣುತ್ತಿಲ್ಲ. ಅವರಿಗೆ ಇಟಲಿಯ ಮೇಲೆ ನಂಬಿಕೆ ಇದ್ದರೆ ಇಟಲಿಗೇ ಹೋಗಿ ತನಿಖೆಗೆ ಕೊಡಲಿ ಎಂದು ವ್ಯಂಗ್ಯವಾಡಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ "ಜಗನ್ನಾಥ ಭವನ"ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಯಾರ ಮೇಲೆ ನಂಬಿಕೆ ಇದೆ? ನ್ಯಾಯಾಂಗದ ಮೇಲೆ ವಿಶ್ವಾಸವಿದ್ದರೆ ಆಧಾರಗಳನ್ನು ನೀಡಲಿ, ಸಿಬಿಐ ಬಗ್ಗೆ ನಂಬಿಕೆ ಇದ್ದರೆ ಆಧಾರ ಕೊಡಲಿ. ಅಥವಾ ಪೊಲೀಸರ ಕುರಿತು ವಿಶ್ವಾಸವಿದ್ದಲ್ಲಿ ಅವರಿಗೆ ಬಿಟ್‌ಕಾಯಿನ್ ಹಗರಣ ಕುರಿತು ಸಾಕ್ಷ್ಯಾಧಾರಗಳನ್ನು ಕೊಡಲಿ ಎಂದು ಸವಾಲು ಹಾಕಿದರು.
ಶ್ರೀಕಿಯನ್ನು ಬಿಜೆಪಿ ಸರಕಾರ ಬಂಧಿಸಿದ್ದಲ್ಲವೇ? ಅದಕ್ಕೂ ಮೊದಲು ಯಾರ ಜೊತೆ ಶ್ರೀಕಿ ಸಂಬಂಧ ಇತ್ತು? ಮಲ್ಯ ಟವರ್‌ನಲ್ಲಿ ಯಾರ ಜೊತೆ ಆತ ಪಾರ್ಟಿ ಮಾಡುತ್ತಾ ಕುಳಿತಿದ್ದ? ಬಿಜೆಪಿ ಎಂಎಲ್‍ಎ ಮಗನ ಜೊತೆಗಾ? ಕಾಂಗ್ರೆಸ್ ಶಾಸಕನ ಮಗನ ಜೊತೆಗಾ? ಎಂದು ತಿಳಿಸಲಿ. ಜವಾಬ್ದಾರಿ ಇರುವವರು ಆರೋಪ ಮಾಡುವುದಾದರೆ ಮಾಧ್ಯಮದವರ ಮುಂದೆ ಆ ಆಧಾರ ಇಡಲಿ. ಇದರಲ್ಲಿ ನಾವೂ ಮಾಜಿ ಮುಖ್ಯಮಂತ್ರಿಯೊಬ್ಬರ ಮಗನ ಸಂಬಂಧ ಇದೆ ಎನ್ನಬಹುದು. ಆಗ ಎಲ್ಲ ಮಾಜಿ ಸಿಎಂಗಳೂ ಬೆನ್ನು ಮುಟ್ಟಿ ನೋಡಿಕೊಳ್ಳುತ್ತಾರೆ. ಜವಾಬ್ದಾರಿ ಇರುವವರು ಜವಾಬ್ದಾರಿಯುತ ಆರೋಪಗಳನ್ನು ಮಾಡಬೇಕು ಎಂದರು.
ಕಾಂಗ್ರೆಸ್‌ನದು ಇಬ್ಬಗೆಯ ನೀತಿ:
ಕಾಂಗ್ರೆಸ್ ಕರ್ನಾಟಕದಲ್ಲಿ ಒಂದು, ತಮಿಳುನಾಡಿನಲ್ಲಿ ಇನ್ನೊಂದು ನಿಲುವು ತೆಗೆದುಕೊಳ್ಳುತ್ತದೆ. ಕಾಂಗ್ರೆಸ್ಸಿಗರ ಮಾತಿಗೂ ಕೃತಿಗೂ ಅಜಗಜಾಂತರ ವ್ಯತ್ಯಾಸ ಇದೆ ಎಂದು ಸಿ.ಟಿ. ರವಿ ಆರೋಪಿಸಿದರು.

ಎತ್ತಿನಹೊಳೆ ನೀರು ಒಂದು ವರ್ಷದೊಳಗೆ ಚಿಕ್ಕಬಳ್ಳಾಪುರಕ್ಕೆ ಬರುತ್ತದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಬಂದಿದೆಯೇ? ಎಲ್ಲಿ ಹೋಗಿದೆ? ಬದ್ಧತೆ ಇಲ್ಲದವರು ಪಾದಯಾತ್ರೆ ಮಾಡಿದರೇನು? ತಲೆ ಕೆಳಗಾಗಿ ನಿಂತರೇನು? ಎಂದು ಪ್ರಶ್ನಿಸಿದರು. ನಮ್ಮ ಮುಖ್ಯಮಂತ್ರಿಯವರು ಯೋಜನೆ ಬಗ್ಗೆ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಬೆಂಗಳೂರಿಗೆ ಜಾರಿಯಾಗುವ ಯೋಜನೆ ಎಂದರೆ ಅಲ್ಲಿ ಕನ್ನಡಿಗರು ಮಾತ್ರ ಇದ್ದಾರಾ? ಎಲ್ಲ ಜನಾಂಗದವರು ಇಲ್ಲವೇ? ತಮಿಳು, ತೆಲುಗು, ಹಿಂದಿ ಸೇರಿ ಎಲ್ಲ ಭಾಷೆಯವರೂ ಇದ್ದಾರೆ. ಚೆನ್ನೈ ಕುಡಿಯುವ ನೀರಿನ ಯೋಜನೆ ಎಂದರೆ ಅಲ್ಲಿ ಎಲ್ಲ ಭಾಷೆಯವರೂ ಇಲ್ಲವೇ? ರಾಜ್ಯ ಸರಕಾರ ತೆಗೆದುಕೊಳ್ಳುವ ನಿರ್ಧಾರದ ಜೊತೆ ಬಿಜೆಪಿ ಇದೆ. ಒಂದು ರಾಷ್ಟ್ರೀಯ ಪಕ್ಷವಾಗಿ ಎಲ್ಲ ರಾಜ್ಯಗಳ ರೈತರನ್ನು ಸಮಾನವಾಗಿ ನೋಡುತ್ತೇವೆ ಎಂದು ಅವರು ಮೇಕೆದಾಟು ಯೋಜನೆ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಬಿಜೆಪಿ ಎಂದೂ ಜಾತಿರಾಜಕಾರಣ ಮಾಡಿಲ್ಲ
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ಯೋಜನೆಯಲ್ಲಿ ಜಾತಿಯನ್ನು ತುರುಕಿಲ್ಲ. ಕಾಂಗ್ರೆಸ್ ವಿವಿಧ ಯೋಜನೆಗಳಲ್ಲಿ ಜಾತಿಯನ್ನು ತುರುಕಿದರೆ, ಅದನ್ನು ಪರಾಕಾಷ್ಠೆಗೆ ಒಯ್ದವರು ಸಿದ್ದರಾಮಯ್ಯ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರು ಹೋದಲ್ಲೆಲ್ಲಾ ತಾವು ಜಾತಿ ವಾದಿ ಅಲ್ಲ, ಜಾತ್ಯತೀತರು ಎಂದು ಹೇಳಿಕೊಳ್ಳುತ್ತಾರೆ. ಇವರು ಜಾತಿವಾದಿಗಳಲ್ಲ. ಅದಕ್ಕಾಗಿಯೇ ಶಾದಿ ಭಾಗ್ಯ ಒಂದು ಕೋಮಿಗೆ ಮಾತ್ರ ಕೊಟ್ಟಿದ್ದಾರೆ. ಇವರು ಜಾತಿವಾದಿಗಳಲ್ಲ ಹಾಗೂ ಇವರು ಸ್ವಚ್ಛಜನ; ಅದಕ್ಕಾಗಿಯೇ ಜಾತಿ ಹೆಸರಿನಲ್ಲಿ ಮಕ್ಕಳ ಪ್ರವಾಸ ಭಾಗ್ಯ ಯೋಜನೆ ಜಾರಿಗೊಳಿಸಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು.
ಬಿಜೆಪಿ ಜಾತಿ ರಾಜಕಾರಣ ಮಾಡಿದ ಕಾರಣಕ್ಕಾಗಿಯೇ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಆದುದಲ್ಲವೇ? ನಮ್ಮ ಜಾತಿ ರಾಜಕಾರಣಕ್ಕಾಗಿಯೇ ಕಾಲಿಗೆ ಚಪ್ಪಲಿಯೂ ಹಾಕದ ಹಾಜಬ್ಬ ಮತ್ತು ತುಳಸಿ ಗೌಡರಿಗೆ ಪದ್ಮ ಪ್ರಶಸ್ತಿ ಸಿಕ್ಕಿದ್ದಲ್ಲವೇ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಬಹಳಷ್ಟು ಜನ ಬಾಟಲಿಮೇಟ್‍ಗಳಿಗೆ ಮಾತ್ರ ಪ್ರಶಸ್ತಿ ಸಿಗುತ್ತಿತ್ತು. ಈಗ ತಳಮಟ್ಟದ ಜನರು ಮತ್ತು ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದೇವೆ. ನಾವು ಕೊಳಕು ಮನಸ್ಸಿನವರಾಗಿದ್ದರೆ ಇದು ಸಾಧ್ಯವಾಗುತ್ತಿತ್ತೇ ಎಂದು ಕೇಳಿದರು.