ಸಿಎಂ ಕುರ್ಚಿಗೆ ಟವೆಲ್ ಹಾಕಿದವರು ಚುನಾವಣೆ ಖರ್ಚಿಗೆ 2 ಸಾವಿರ ಕೋಟಿ ನೀಡುತ್ತಾರಂತೆ: ಸಿ ಟಿ ರವಿ
ಬೆಂಗಳೂರು, ಅಕ್ಟೋಬರ್ 16: ಬೆಂಗಳೂರಿನ ಗುತ್ತಿಗೆದಾರರ ಮನೆಯಲ್ಲಿ ಬರೋಬ್ಬರಿ 42 ಕೋಟಿ ಹಣ ಪತ್ತೆಯಾದ ಬೆನ್ನಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರ ಹೆಚ್ಚಾಗಿದ್ದು, ಪಂಚರಾಜ್ಯಗಳ ಚುನಾವಣೆ ಹಿನ್ನಲೆ ಕರ್ನಾಟಕದಿಂದ ಹಣ ಸಂಗ್ರಹಿಸಲಾಗುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಈ ಕುರಿತು ಮಾಜಿ ಸಚಿವ ಸಿ ಟಿ ರವಿ ಮಾತನಾಡಿ, ಸಿಎಂ ಕುರ್ಚಿಗೆ ಟವೆಲ್ ಹಾಕಿದವರೊಬ್ಬರು ಚುನಾವಣೆ ಖರ್ಚಿಗೆ ಎರಡು ಸಾವಿರ ಕೋಟಿ ಕೊಡುವುದಾಗಿ ಹೇಳಿದ ಮಾಹಿತಿ ಇದೆ. ಹಾಲಿ ಮುಖ್ಯಮಂತ್ರಿಗಳು ಕಷ್ಟಪಟ್ಟು ಅದರ ಅರ್ಧ ವ್ಯವಸ್ಥೆ ಮಾಡುವುದಾಗಿ ಹೇಳಿದ ಮಾಹಿತಿ ಸಿಕ್ಕಿದೆ ಎಂದು ಹೇಳಿದ್ದಾರೆ.

ತನಿಖೆ ಆದರೆ ಸಂಗ್ರಹಿತ ಮೊತ್ತ, ನಂಬರ್ 1ರಿಂದ ಆದ ಸಂಗ್ರಹ, ನಂಬರ್ 2 ಸಂಗ್ರಹಿಸಿದ ಮೊತ್ತದ ವಿವರ ಹೊರಬರುತ್ತದೆ. ಅಂತರರಾಜ್ಯ ವಿಷಯವಾದ ಕಾರಣ ಸಿಬಿಐ ತನಿಖೆಗೆ ಆಗ್ರಹಿಸುವುದಾಗಿ ಹೇಳಿದ ಅವರು, ಐಟಿ ದಾಳಿ ಹಿಂದೆ ರಾಜಕೀಯ ಇರುತ್ತದೆ ಎಂದು ಉಪ ಮುಖ್ಯಮಂತ್ರಿ ಹೇಳಿದರೆ, ಎಲ್ಲ ಖಾತೆ ತಮ್ಮ ಕೈಯಲ್ಲಿ ಇರುವಂತೆ ವರ್ತಿಸುವ ಪ್ರಿಯಾಂಕ್ ಖರ್ಗೆಯವರು ದಾಳಿ ವಿರುದ್ಧ ಅಣಿಮುತ್ತು ಉದುರಿಸುತ್ತಾರೆ ಎಂದು ಟೀಕಿಸಿದರು. ಏಕ್ ತರಫ್ ಸೆ ಆಲೂ ಡಾಲ್‍ನ, ದೂಸ್‍ರಾ ತರಫ್ ಸೆ ಸೋನಾ ನಿಕಾಲ್‍ನ ಎಂಬಂತೆ ದುಡ್ಡು ತೆಗೆದಿದ್ದಾರಾ ಎಂದು ವ್ಯಂಗ್ಯವಾಡಿದರು.
ಅಬಕಾರಿ ಸುಂಕ, ವಿದ್ಯುತ್ ದರ, ಸ್ಟ್ಯಾಂಪ್ ಶುಲ್ಕ ಹೀಗೆ ಎಲ್ಲ ಬೆಲೆಏರಿಸಿದ ಬಳಿಕ ಬಾಕಿ ಬಿಲ್ ನೀಡಲು ನೀವು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದೀರಿ. ಬಹುಶಃ ಪಂಜಾಬ್ ಬಳಿಕ ಕರ್ನಾಟಕದ ಸಿಎಂ ಕೂಡ ತನ್ನ ರಾಜ್ಯ ದಿವಾಳಿ ಆಗುತ್ತಿದೆ ಎಂದು ಮುನ್ಸೂಚನೆ ಕೊಟ್ಟಿದ್ದಾರೆ. ಇಷ್ಟಾದರೂ ಇವರು ನುಡಿದಂತೆ ನಡೆದಿದ್ದೇವೆ ಎಂದು ಜಾಹೀರಾತು ಕೊಡುವುದನ್ನು ನಿಲ್ಲಿಸಿಲ್ಲ. ಈ ಸರಕಾರ ವಸೂಲಿ ಸರಕಾರ ಎಂದು ಟ್ಯಾಗ್‍ಲೈನ್ ಕೊಟ್ಟರೆ ತಪ್ಪಾಗದು. ಹಾಗಾಗಿ ವಸೂಲಿಗೆ ಸಂಬಂಧಿಸಿ ಸಿಬಿಐ ತನಿಖೆಗೆ ಆಗ್ರಹಿಸುವುದಾಗಿ ತಿಳಿಸಿದರು.

ಮಾನ್ಯ ಮುಖ್ಯಮಂತ್ರಿಗಳು ನಮ್ಮದು ಭ್ರಷ್ಟಾಚಾರರಹಿತ ಆಡಳಿತ ಎನ್ನುತ್ತಾರೆ. ಅಬ್ಬರಿಸಿ ಬೊಬ್ಬಿರಿವ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಅವರ ಮೂಗಿನ ಕೆಳಗೇ ಇದು ನಡೆದಿದೆ. ಬೇರೆ ಜಿಲ್ಲೆಗಳಲ್ಲಿ ಇನ್ನು ಪರಿಸ್ಥಿತಿ ಹೇಗಿರಬಹುದು ಎಂದು ಪ್ರಶ್ನೆಯನ್ನು ಮುಂದಿಟ್ಟರು. ಒತ್ತಡದ ಮೂಲಕ ಪ್ರಕರಣ ಮುಚ್ಚಿಹಾಕಲು ಮುಂದಾದುದು ಇನ್ನಷ್ಟು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಎಂದರೆ ಕರ್ನಾಟಕ ಪ್ರದೇಶ ಕಮಿಷನ್ ಕಾಂಗ್ರೆಸ್ ಆಗಿ ಬದಲಾಗಿದೆ. ಹಿಂದೆ ನಮ್ಮ ಸರಕಾರದ ಮೇಲೆ ಆರೋಪ ಮಾಡುತ್ತಿದ್ದರು. ಈಗ ಗುತ್ತಿಗೆದಾರ ಅಂಬಿಕಾಪತಿ ಕರೋಡ್‍ಪತಿಯಾಗಿದ್ದಾರೆ. ಅವರ ಮನೆಯಲ್ಲಿ 42 ಕೋಟಿ, ಇನ್ನೊಬ್ಬ ಬಿಲ್ಡರ್ ಕೇತಮಾರನಹಳ್ಳಿ ಸಂತೋಷ್ ಕೃಷ್ಣಪ್ಪ ಮನೆಯಲ್ಲಿ 40 ಕೋಟಿ- ಹೀಗೆ ಕೋಟಿ ಕೋಟಿ ಹೊರಕ್ಕೆ ಬರುತ್ತಿದೆ. ಇವರಿಬ್ಬರೂ ರಾಜ್ಯದ ನಂಬರ್ 1, ನಂಬರ್ 2 ಅವರ ಬೇನಾಮಿಗಳು ಎಂಬ ಮಾಹಿತಿ ನಮಗಿದೆ ಎಂದು ವಿವರ ನೀಡಿದರು. ಇದರ ಸಿಬಿಐ ತನಿಖೆ ಮಾಡಿ ಎಂದು ಆಗ್ರಹಿಸಿದರು.
ನಂಬರ್ 1, ನಂಬರ್ 2 ಅವರು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ನೂರಾರು ಬೇನಾಮಿಗಳನ್ನು ನೇಮಿಸಿದ್ದಾರೆ. ಇಬ್ಬರು ಬೇನಾಮಿಗಳು ಮಾತ್ರ ಸಿಕ್ಕಿದ್ದಾರೆ. ಈ ಹಣವೇ ಬೇನಾಮಿಗಳ ನೇಮಕಕ್ಕೆ ಸಾಕ್ಷಿ. ಕರ್ನಾಟಕವನ್ನು ಇವರು ಎಟಿಎಂ ಮಾಡಿಕೊಂಡಿದ್ದಾರೆ. ಹಿಂದೆ ಗೋವಿಂದರಾಜು ಅವರ ಡೈರಿ ಇದಕ್ಕೆ ಸಾಕ್ಷಿ ಆಗಿತ್ತು. ಆರ್‍ಜಿ ಯಾರು, ಎಸ್‍ಜಿ ಯಾರು, ಎಷ್ಟೆಷ್ಟು ಕೊಟ್ಟಿದ್ದಾಗಿ ಡೈರಿ ಸಾಕ್ಷಿ ಕೊಟ್ಟಿತ್ತು ಎಂದರು.












Click it and Unblock the Notifications