ಗೋಧ್ರಾ ಹೇಳಿಕೆ: ಸಿಎಂ ಸಿದ್ದರಾಮಯ್ಯ, ಬಿ.ಕೆ ಹರಿ ಪ್ರಸಾದ್ ಒಳಸುಳಿ ಬಲ್ಲರು ಎಂದ ಸಿ.ಟಿ ರವಿ
ಕೊಪ್ಪಳ, ಜನವರಿ 05: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ವೇಳೆ ಮತ್ತೊಂದು ಗೋಧ್ರಾ ರೀತಿಯಲ್ಲಿ ಹತ್ಯಾಕಾಂಡ ಘಟನೆ ನಡೆಯಬಹುದು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿ ಪ್ರಸಾದ್ ಹೇಳಿದ್ದನ್ನು ನೋಡಿದರೆ ಹರಿ ಪ್ರಸಾದ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಒಳಸುಳಿ ಬಲ್ಲವರಾಗಿದ್ದಾರೆ ಎನ್ನುವುದು ತಿಳಿಯುತ್ತದೆ ಎಂದು ಮಾಜಿ ಸಚಿವ ಸಿ.ಟಿ ರವಿ ಆರೋಪಿಸಿದ್ದಾರೆ.
ಕೊಪ್ಪಳದ ಗವಿಮಠದಲ್ಲಿ ಶುಕ್ರವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಾರನ್ನು ರಕ್ಷಣೆ ಮಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿದವರ ಮೇಲಿದ್ದ ಪ್ರಕರಣಗಳನ್ನು ಸಿಎಂ ವಾಪಸ್ ಪಡೆದಿದ್ದಾರೆ ಎಂದು ಆರೋಪಿಸಿದರು.

ಸಿಎಂ ಹಿಂಬಾಲಕರು ಈ ರೀತಿಯ ಕೃತ್ಯ ಮಾಡುವ ಸೂಚನೆ ಇರಬೇಕು. ಅದಕ್ಕೆ ಹರಿಪ್ರಸಾದ್ ಆ ರೀತಿ ಹೇಳಿಕೆ ನೀಡಿರಬಹುದು. ಅವರನ್ನು ತನಿಖೆಗೆ ಒಳಪಡಿಸಬೇಕು ರಾಮ ಭಕ್ತರಿಗೆ ರಕ್ಷಣೆ ನೀಡಬೇಕು ಎಂದು ಮಾಜಿ ಸಚಿವ ಸಿ.ಟಿ ರವಿ ಆಗ್ರಹಿಸಿದರು.
ರಾಮಮಂದಿರ ಉದ್ಘಾಟನೆ ಅಂಗವಾಗಿ ಹಿಂದೂ ಕಾರ್ಯಕರ್ತರು ಮನೆಮನೆಗೆ ತೆರಳಿ ಮಂತ್ರಾಕ್ಷತೆ ನೀಡುತ್ತಿದ್ದಾರೆ. ಇದಕ್ಕೆ ಅನ್ನಭಾಗ್ಯದ ಅಕ್ಕಿ ಬಳಕೆ ಮಾಡಲಾಗುತ್ತಿದೆ ಎಂದು ಕೆಲ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಅನ್ನ ಬೆಳೆದ ರೈತ ಎಲ್ಲಿಯೂ ತನ್ನ ಅಕ್ಕಿ ಎಂದು ಹೇಳಿಲ್ಲ. ಕೇಂದ್ರ ಸರ್ಕಾರ ನೀಡುತ್ತಿರುವ ಐದು ಕೆ.ಜಿ. ಅಕ್ಕಿ ಮೇಲೆ ರಾಜ್ಯ ಸರ್ಕಾರ ಒಂದು ಕೆ.ಜಿ. ಅಕ್ಕಿ ಕೊಟ್ಟಿಲ್ಲ. ನನ್ನದು ಎನ್ನುವುದು ದೊಡ್ಡ ಅಹಂಕಾರ ಎಂದು ಕಾಂಗ್ರೆಸ್ ವಿರುದ್ಧ ಸಿ.ಟಿ ರವಿ ಕಿಡಿಕಾರಿದ್ದಾರೆ.

ಬಿ.ಕೆ ಹರಿ ಪ್ರಸಾದ್ ಹೇಳಿದ್ದೇನು..?
ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ನೀಡಬೇಕು. ಏಕೆಂದರೆ, ಗೋಧ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರು ಅಹಿತಕರ ಘಟನೆ ಕರ್ನಾಟಕದಲ್ಲಿ ಆಗಬಹುದು. ಈ ಹಿಂದೆ ಕರಸೇವಕರು ಅಯೋಧ್ಯೆಯಿಂದ ಹಿಂತಿರುಗುವಾಗ ಗುಜರಾತ್‌ನಲ್ಲಿ ಗೋಧ್ರಾ ದುರಂತ ನಡೆದಿತ್ತು. ಈ ಬಾರಿ ಅಯೋಧ್ಯೆಗೆ ತೆರಳುವ ಭಕ್ತರಿಗೆ ರಾಜ್ಯ ಸರ್ಕಾರ ರಕ್ಷಣೆ ನೀಡಬೇಕು. ಈ ಬಗ್ಗೆ ಮಾಹಿತಿ ಸಿಕ್ಕಿಯೇ ನಾನು ಹೇಳುತ್ತಿದ್ದೇನೆ ಎಂದು ಹರಿಪ್ರಸಾದ್ ಹೇಳಿದ್ದರು.
ರಾಮಮಂದಿರದಕ್ಕೆ ಹೋಗುವವರ ಎಚ್ಚರಿಕೆ ಬಗ್ಗೆ ಕಾಂಗ್ರೆಸ್ ಹೇಳಿದ್ದೇನು..?
ಬಿ.ಕೆ ಹರಿ ಪ್ರಸಾದ್ ಹೇಳಿಕೆ ಬಳಿಕ ಬಿಜೆಪಿ ನಾಯಕರು ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದ ರಾಜ್ಯ ಕಾಂಗ್ರೆಸ್ ರಾಮಮಂದಿರವನ್ನು ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಸ್ಪೋಟಿಸುತ್ತೇವ ಎಂದು ಮುಸ್ಲಿಮರ ಹೆಸರಲ್ಲಿ ಬೆದರಿಕೆ ಹಾಕಿದವರು ತಾಹರ್ ಸಿಂಗ್ ಹಾಗೂ ಓಂಪ್ರಕಾಶ್ ಮಿಶ್ರ. ರಾಮ ಮಂದಿರದ ದರ್ಶನಕ್ಕೆ ಹೋಗುವವರು ಎಚ್ಚರಿಕೆಯಿಂದ ಇರಬೇಕು ಎಂದಾಗ ಬೊಬ್ಬೆ ಹೊಡೆಯುವ ಬಿಜೆಪಿ ನಾಯಕರು ಸಂಘಪರಿವಾರದ ಬೆಂಬಲಿಗರ ಈ ಕೃತ್ಯಕ್ಕೆ ಮೌನವಹಿಸುತ್ತಾರೆ.ಇವರು ಯಾರ ಲಾಭಕ್ಕಾಗಿ ಬೆದರಿಕೆ ಹಾಕಿದರು? ಮುಸ್ಲಿಮರ ಹೆಸರು ಬಳಸಿ ಬೆದರಿಕೆ ಹಾಕಿದ್ದೇಕೆ? ಇವರ ಉದ್ದೇಶ ಏನಿತ್ತು? ಬಿಜೆಪಿ ಉತ್ತರಿಸುವುದೇ? ಚುನಾವಣೆಯ ಲಾಭಕ್ಕಾಗಿ, ಕೋಮು ದಳ್ಳುರಿ ಸೃಷ್ಟಿಸುವುದಕ್ಕಾಗಿ ಬಿಜೆಪಿ ಯಾರನ್ನು ಬೇಕಾದರೂ ಬಳಸಿ ಏನನ್ನು ಬೇಕಾದರೂ ಮಾಡಬಲ್ಲರು ಎಂಬ ಎಚ್ಚರಿಕೆ ಜನತೆಗಿರಬೇಕು ಎಂದಿದೆ.












Click it and Unblock the Notifications