ಕೋವಿಡ್ ಸೋಂಕು ಭೀತಿ: ರಾಜ್ಯ ಸರ್ಕಾರದಿಂದ ಮಹತ್ವದ ಅಪ್ಡೇಟ್ಸ್!
ಕರ್ನಾಟಕದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಸಚಿವರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವೊಂದು ಮಹತ್ವದ ಸೂಚನೆಗಳನ್ನು ಹಂಚಿಕೊಂಡಿದ್ದಾರೆ. ಇನ್ನು ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಬುಧವಾರ (ಜೂನ್ 11) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಮಹತ್ವದ ಅಪ್ಡೇಟ್ಸ್ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋವಿಡ್‌ಗೆ ಸಂಬಂಧಿಸಿದಂತೆ ನೀಡಿರುವ ಅಪ್ಡೇಟ್ಸ್‌ಗಳೇನು ಎನ್ನುವುದು ಇಲ್ಲಿದೆ.
• ಕೋವಿಡ್ ಬಗ್ಗೆ ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಆದರೂ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕು.
• ರಾಜ್ಯದಲ್ಲಿ ಮೇ ತಿಂಗಳ ಬಳಿಕ ಕೋವಿಡ್ ಪರೀಕ್ಷೆ ಹೆಚ್ಚಿಸಲಾಗಿದೆ. ಈ ತಿಂಗಳು ಪ್ರತಿ ದಿನ ಸರಾಸರಿ 500 ಪರೀಕ್ಷೆ ನಡೆಸುತ್ತಿದ್ದೇವೆ.

• ಕಳೆದ 10 ದಿನಗಳಲ್ಲಿ 5 ಸಾವಿರ ಪರೀಕ್ಷೆ ನಡೆಸಲಾಗಿದ್ದು, 862 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 11ಸಾವು ಸಂಭವಿಸಿದೆ. ಆದರೂ ಇದರಲ್ಲಿ 10 ಪ್ರಕರಣಗಳಲ್ಲಿ ಕೋವಿಡ್ ಕಾರಣದಿಂದ ಸಾವು ಸಂಭವಿಸಿಲ್ಲ. ವಿವಿಧ ರೀತಿಯ ಅನಾರೋಗ್ಯಕ್ಕೆ ತುತ್ತಾಗಿದ್ದ ರೋಗಿಗಳು ಈ ಪ್ರಕರಣಗಳಲ್ಲಿ ಸಾವನ್ನಪ್ಪಿದ್ದಾರೆ. ಒಂದು ಪ್ರಕರಣದ ಆಡಿಟ್ ವರದಿ ಬರಬೇಕಾಗಿದೆ.
• ಕೋವಿಡ್ ಬಗ್ಗೆ ಯಾರೂ ಅನಗತ್ಯ ಗೊಂದಲ ಮೂಡಿಸಬಾರದು. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಪ್ರಕರಣಗಳನ್ನು ನಿಭಾಯಿಸಲು ಸೂಕ್ತ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂಬ ಸೂಚನೆ ನೀಡಲಾಗಿದೆ.
• ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು.
• ಖಾಸಗಿ ಆಸ್ಪತ್ರೆಗಳಲ್ಲಿ ಅನಗತ್ಯವಾಗಿ ಕೋವಿಡ್ ಪರೀಕ್ಷೆ ಹೆಸರಿನಲ್ಲಿ ದುಬಾರಿ ಶುಲ್ಕ ವಿಧಿಸುತ್ತಿರುವ ದೂರುಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಕೋವಿಡ್‌ನಿಂದ ಯಾವುದೇ ಸಾವು ಸಂಭವಿಸಿಲ್ಲ!
ಕೋವಿಡ್ ಸೋಂಕು ಹತೋಟಿಯಲ್ಲಿದ್ದು ಜನರು ಆತಂಕಕ್ಕೆ ಒಳಗಾಗುವ ಸ್ಥಿತಿ ಇಲ್ಲ. ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಬಂದವರಲ್ಲಿ ಸಾವಿಗೀಡಾಗಿರುವ 11 ಜನರಲ್ಲಿ 10 ಜನರ ಡೆತ್ ಆಡಿಟ್ ರಿಪೋರ್ಟ್ ಬಂದಿದೆ. ಡೆತ್ ಆಡಿಟ್ ರಿಪೋರ್ಟ್ ಪ್ರಕಾರ 10 ಜನರು ಇತರ ಮಾರಕ ಕಾಯಿಲೆಗಳಾದ ಹೃದಯಸಂಬಂಧಿ, ಕಿಡ್ನಿ, ಅಂಗಾಂಗ ವೈಫಲ್ಯದಂತಹ ಕಾರಣಗಳಿಂದ ಸಾವನ್ನಪ್ಪಿದ್ದು, ಕೋವಿಡ್ ಕಾರಣವಲ್ಲ ಎಂಬುದು ಸ್ಪಷ್ಟವಾಗಿದೆ. ಇನ್ನು ಒಬ್ಬರ ಡೆತ್ ಆಡಿಟ್ ರಿಪೋರ್ಟ್ ಬರುವುದು ಬಾಕಿ ಇದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಡೆತ್ ಆಡಿಟ್ ರಿಪೋರ್ಟ್ ಬಳಿಕವೇ ಕೋವಿಡ್ ಡೆತ್ ರಿಪೋರ್ಟ್ ಘೋಷಿಸುವಂತೆ ಇಂದು ನಡೆದ ಸಿಎಂ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೋವಿಡ್ ಡೆತ್ ಎಂದಾಕ್ಷಣ ಅನಗತ್ಯವಾಗಿ ಜನರು ಆತಂಕಕ್ಕೆ ಒಳಗಾಗುವುದು ಸಹಜ. ಆದರೆ ವಾಸ್ತವ ಚಿತ್ರಣ ಬೇರೆಯೇ ಆಗಿರುತ್ತದೆ. ಈಗಿರುವ ಕೋವಿಡ್ ರೂಪಾಂತರಿ ವೈರಸ್ ಸೌಮ್ಯ ಸ್ವಭಾವದ್ದಾಗಿದೆ. 500 ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಕೇವಲ ಇಬ್ಬರು ಮಾತ್ರ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಆತಂಕದ ಸ್ಥಿತಿ ಇಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಆರೋಗ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಟೆಸ್ಟಿಂಗ್ ಮಾಡಲಾಗುತ್ತಿದೆ. ಕಳೆದ 10 ದಿನಗಳಲ್ಲಿ 5 ಸಾವಿರಕ್ಕೂ ಹೆಚ್ಚು ಕೋವಿಡ್ ಟೆಸ್ಟಿಂಗ್ ಮಾಡಲಾಗಿದೆ. SARI ಪ್ರಕರಣಗಳಲ್ಲಿ ಕಡ್ಡಾಯವಾಗಿ ಕೋಡಿಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ. ತಜ್ಞರ ಸಮಿತಿ ಸಭೆಗಳನ್ನ ನಡೆಸುತ್ತಿದ್ದು, ಆರೋಗ್ಯ ಇಲಾಖೆ ಕೂಡ ಮೇಲ್ವಿಚಾರಣೆ ನಡೆಸುತ್ತಿದೆ. ಕೋವಿಡ್ ಗೆ ಆತಂಕಗೊಳ್ಳದೇ ಜನರು ತಮ್ಮ ಸಹಜ ಜೀವನ ನಡೆಸಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.












Click it and Unblock the Notifications