Breaking; ಕೋವಿಡ್ 4ನೇ ಭೀತಿ; ಶಾಲೆಗಳು ಬಂದ್ ಆಗಲ್ಲ
ಬೆಂಗಳೂರು, ಏಪ್ರಿಲ್ 26; "ಮೇ 16ರಿಂದ ಶಾಲೆಗಳು ಆರಂಭವಾಗುತ್ತಿವೆ. ಕೋವಿಡ್ ನಾಲ್ಕನೇ ಅಲೆ ಭೀತಿ ಹಿನ್ನಲೆಯಲ್ಲಿ ಯಾವುದೇ ಕಾರಣಕ್ಕೂ ಶಾಲೆಗಳನ್ನು ಬಂದ್ ಮಾಡುವುದಿಲ್ಲ" ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್, "ಜೂನ್, ಜುಲೈನಲ್ಲಿ 4ನೇ ಅಲೆ ಬರಲಿದೆ ಎಂದು ಹೇಳುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು ಸಹ ಸಭೆ ಮಾಡಿದ್ದಾರೆ" ಎಂದರು.
"ತಾಂತ್ರಿಕ ಸಲಹಾ ಸಮಿತಿ ನೀಡುವ ಸಲಹೆಗಳನ್ನು ನಾವು ಕಡ್ಡಾಯವಾಗಿ ಪಾಲನೆ ಮಾಡುತ್ತೇವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಕ್ರಮಗಳನ್ನು ಕೈಗೊಳ್ಳುತ್ತೇವೆ. ಆದರೆ ಶಾಲೆಗಳನ್ನು ಬಂದ್ ಮಾಡುವುದಿಲ್ಲ" ಎಂದು ಹೇಳಿದರು.

"ದ್ವಿತೀಯ ಪಿಯುಸಿ ಪರೀಕ್ಷೆಗಳು ಉತ್ತಮವಾಗಿ ನಡೆಯುತ್ತಿದೆ, ಹಾಜರಾತಿ ಸಹ ಚೆನ್ನಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪತ್ರಿಕೆಗಳ ಮೌಲ್ಯ ಮಾಪನ ನಡೆಯುತ್ತಿದೆ. ಮೇ 2ನೇ ವಾರದಲ್ಲಿ ಫಲಿತಾಂಶ ನೀಡುವ ನಿರೀಕ್ಷೆ ಇದೆ" ಎಂದು ಸಚಿವರು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ 2022ನೇ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ಮೇ 15ರ ತನಕ ಬೇಸಿಗೆ ರಜೆ ಇರಲಿದೆ. ಮೇ 16ರಂದು ಶಾಲೆಗಳು ಆರಂಭವಾಗಲಿವೆ. ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೆ ಮಾರ್ಗಸೂಚಿ ಅನ್ವಯವಾಗುತ್ತದೆ.
ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಪರಿಸ್ಥಿತಿ ಕಾರಣ ಪೂರ್ಣ ಪ್ರಮಾಣದ ಕಲಿಕೆ ನಡೆದಿರಲಿಲ್ಲ. ಈ ಹಿನ್ನಲೆಯಲ್ಲಿ ಈ ಬಾರಿ ನಿಗದಿತ ಅವಧಿಗೂ ಮೊದಲೇ ಶಾಲೆಗಳನ್ನು ಆರಂಭಿಸುತ್ತಿದೆ.
ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಪ್ರಕಾರ ಮೇ 16 ರಿಂದ ಅಕ್ಟೋಬರ್ 2ರ ತನಕ ಮೊದಲ ಅವಧಿಯ ಶಾಲೆಗಳು ನಡೆಯಲಿವೆ. 2ನೇ ಅವಧಿಯಲ್ಲಿ ಅಕ್ಟೋಬರ್ 17 ರಿಂದ 2023ರ ಏಪ್ರಿಲ್ 10ರ ತನಕ ತರಗತಿಗಳು ನಡೆಯಲಿವೆ.












Click it and Unblock the Notifications