ಕೊರೊನಾ ಹೆಚ್ಚಳ: ತಜ್ಞರ ಜೊತೆ ಸಿಎಂ ನಿರಂತರ ಸಭೆ
ಬೆಂಗಳೂರು, ಜ.4: ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನೇತೃತ್ವದಲ್ಲಿ ತಜ್ಞರ ಸಭೆ ನಡೆಯುತ್ತಿದ್ದು, ಎರಡು ತಾಸಿಗೂ ಅಧಿಕ ಸುಧೀರ್ಘ ಚರ್ಚೆ ನಡೆಯುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಂಗಳವಾರ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಕೊರೊನಾ ವಿಷಯಕ್ಕೆ ಸಂಬಂಧಿಸಿದಂತೆ ತಜ್ಞರ ಸಭೆ ಕರೆಯಲಾಗಿತ್ತು. ರಾಜ್ಯದಲ್ಲಿ ಜಾರಿ ಮಾಡಬೇಕಾದ ಕಠಿಣ ರೂಲ್ಸ್‌ಗಳು, ಬೆಡ್‌ಗಳ ಲಭ್ಯತೆ, ಔಷಧಗಳ ದಾಸ್ತಾನು ಸಹಿತ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಗುತ್ತಿದೆ.
ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಕಂದಾಯ ಸಚಿವ ಆರ್. ಅಶೋಕ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸಹಿತ ಹಲವು ಅಧಿಕಾರಿಗಳು ಸಭೆಯಲ್ಲಿ ಇದ್ದಾರೆ.

ರಾಜ್ಯದಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ಜ.7ರವರೆಗೂ ಇದು ಜಾರಿಯಲ್ಲಿರುತ್ತದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತಜ್ಞರು ಪೂರ್ವಭಾವಿ ಸಭೆ ಮಾಡಿದ್ದರು. ಇದರಲ್ಲಿ ಸರ್ಕಾರಕ್ಕೆ ನೀಡಬಹುದಾದ ಸಲಹೆಗಳ ಕುರಿತು ಚರ್ಚೆ ನಡೆಸಿದ್ದರು. ತಜ್ಞರ ಸಲಹೆ ಕುರಿತು ಮುಖ್ಯಮಂತ್ರಿ ಮತ್ತು ಸಚಿವರು ಸುದೀರ್ಘವಾಗಿ ಚರ್ಚೆ ನಡೆಸಿದರು.
ಕೊರೊನಾ ಸೋಂಕು ಹೆಚ್ಚಳ ಆಗುತ್ತಿರುವ ರಾಜ್ಯಗಳಲ್ಲಿ ಈಗಾಗಲೇ ಕಠಿಣ ನಿಯಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಎಲ್ಲಿಯೂ ಲಾಕ್‌ಡೌನ್ ಮಾಡಿಲ್ಲ. ಆದೇ ರೀತಿ ರಾಜ್ಯದಲ್ಲಿಯೂ ಸದ್ಯಕ್ಕೆ ಲಾಕ್‌ಡೌನ್ ಜಾರಿ ಮಾಡುವ ಪ್ರಸ್ತಾಪ ಸರ್ಕಾರಕ್ಕೆ ಇಲ್ಲ. ಆದರೆ, ಸೋಂಕು ಹರಡುವುದನ್ನು ನಿಯಂತ್ರಿಸುವ ಸಂಬಂಧ ಸಹ ಕಠಿಣ ನಿಯಮಗಳನ್ನು ಜಾರಿ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ತಜ್ಞರು ನೀಡಿದ ಸಲಹೆಗಳೇನು?
ರಾಜ್ಯದಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಇದನ್ನು ಇದೇ ರೀತಿ ಮುಂದುವರಿಸಬೇಕು ಎಂದು ತಜ್ಞರು ಸಭೆಯಲ್ಲಿ ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಜ.7ಕ್ಕೆ ನೈಟ್ ಕರ್ಫ್ಯೂ ಮುಗಿಯುತ್ತಿದ್ದು, ಮುಂದಿನ 10 ದಿನಗಳ ಕಾಲ ವಿಸ್ತರಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಶಾಲಾ-ಕಾಲೇಜುಗಳಲ್ಲಿ ಆನ್‌ಲೈನ್ ತರಗತಿ ಶುರು ಮಾಡುವ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ. ಆದರೆ, ಈ ಸಂಬಂಧ ಮುಖ್ಯಮಂತ್ರಿಗಳು ಯಾವುದೇ ತೀರ್ಮಾನ ಮಾಡಲಿಲ್ಲ. ಸದ್ಯ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಐಸೋಲೇಷನ್‌ಗೆ ಒಳಗಾಗಿದ್ದಾರೆ. ಅವರು ಆರೋಗ್ಯವಾಗಿ ಮರಳಿದ ಬಳಿಕ ಶಾಲಾ- ಕಾಲೇಜು ಕುರಿತು ತೀರ್ಮಾನ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಯಿತು ಎನ್ನಲಾಗಿದೆ.
ಮೂರನೇ ಅಲೆ:
ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಜ.4ರಂದು ಒಂದೇ ದಿನ 2479 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಬೆಂಗಳೂರಿನಲ್ಲಿಯೇ 2053 ಪ್ರಕರಣಗಳು ಇವೆ.
'ರಾಜ್ಯದಲ್ಲಿ ಶೇ.1.60 ಇದ್ದ ಪ್ರಕರಣ ಪ್ರಮಾಣ ಮಂಗಳವಾರ ಶೇ.2.59ಗೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಇಷ್ಟು ಪ್ರಮಾಣದಲ್ಲಿ ಏರಿದರೆ ಇದು ಮೂರನೇ ಅಲೆ ಅಲ್ಲದೆ ಮತ್ತೇನು' ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಪ್ರಶ್ನಿಸಿದ್ದಾರೆ.











Click it and Unblock the Notifications