ಸೋನಿಯಾ ನಾರಂಗ್ ತನಿಖೆ ಕಡತಗಳು ಎಸ್‌ಐಟಿಗೆ
ಬೆಂಗಳೂರು, ಜುಲೈ 11 : ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಎಸ್ಪಿ ಸೋನಿಯಾ ನಾರಂಗ್ ನಡೆಸಿದ ತನಿಖೆಯ ಕಡತಗಳನ್ನು ಎಸ್‌ಐಟಿಗೆ ನೀಡುವಂತೆ ಸರ್ಕಾರ ಲೋಕಾಯುಕ್ತಕ್ಕೆ ಸೂಚನೆ ನೀಡಿದೆ. ಭ್ರಷ್ಟಾಚಾರದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ.
ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ಅವರು ಎಸ್ಪಿ ಸೋನಿಯಾ ನಾರಂಗ್ ಅವರಿಗೆ ಸೂಚನೆ ನೀಡಿದ್ದರು. ಇದರಂತೆ ತನಿಖೆ ನಡೆಸಿದ್ದ ಅವರು, ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದರು. [ಸೋನಿಯಾ ನಾರಂಗ್ ತನಿಖೆಗೆ ತಡೆ]

ಆದರೆ, ಅಶ್ವಿನ್ ರಾವ್ ಅವರು ಸೋನಿಯಾ ನಾರಂಗ್ ನಡೆಸುತ್ತಿದ್ದ ತನಿಖೆಗೆ ತಡೆ ನೀಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಕರ್ನಾಟಕ ಹೈಕೋರ್ಟ್ ಸರ್ಕಾರ ರಚನೆ ಮಾಡಿದ ಎಸ್‌ಐಟಿ ಮಾತ್ರ ತನಿಖೆ ಮಾಡಲಿ ಎಂದು ಆದೇಶ ನೀಡಿತ್ತು. ಸೋನಿಯಾ ನಾರಂಗ್ ನಡೆಸುತ್ತಿದ್ದ ತನಿಖೆಗೆ ತಡೆಯಾಜ್ಞೆ ನೀಡಿತ್ತು.[ಲೋಕಾಯುಕ್ತದಲ್ಲಿ ಇದೇನಿದು ಹಗರಣ?]
ಎಸ್‌ಐಟಿಯ ಸದಸ್ಯರು : ಸರ್ಕಾರ ಎಡಿಜಿಪಿ ಕಮಲ್ ಪಂತ್ ನೇತೃತ್ವದಲ್ಲಿ ಎಸ್‌ಐಟಿಯನ್ನು ರಚನೆ ಮಾಡಿದೆ. ತನಿಖಾ ದಳದಲ್ಲಿ ಕೆಎಸ್‌ಆರ್‌ಟಿಸಿ ಭದ್ರತಾ ಮತ್ತು ಜಾಗೃತ ದಳದ ನಿರ್ದೇಶಕ (ಡಿಐಜಿ ) ಸೌಮೇಂದ್ರ ಮುಖರ್ಜಿ, ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಲಾಬೂರಾಮ್, ಕೇಂದ್ರ ವಿಭಾಗದ ಡಿಸಿಪಿ ಸಂದೀಪ್‌ಪಾಟೀಲ್, ಸಿಐಡಿ ವಿಭಾಗದ ಇಬ್ಬರು ಡಿವೈಎಸ್‌ಪಿ, ಮೂವರು ಇನ್ಸ್‌ಪೆಕ್ಟರ್‌ಗಳು, ಇಬ್ಬರು ಸಬ್‌ಇನ್ಸ್‌ಪೆಕ್ಟರ್ ಸೇರಿದಂತೆ 12 ಸದಸ್ಯರಿದ್ದಾರೆ.
ಸರ್ಕಾರ ಈಗ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರು ನಡೆಸಿದ ತನಿಖೆಯ ವರದಿ ಮತ್ತು ಕಡತಗಳನ್ನು ಎಸ್‌ಐಟಿಗೆ ನೀಡುವಂತೆ ಸೂಚನೆ ನೀಡಿದೆ. ಅತ್ತ ವಿವಿಧ ಸಂಘಟನೆಗಳು ಲೋಕಾಯುಕ್ತ ನ್ಯಾ.ಭಾಸ್ಕರರಾವ್ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿವೆ.












Click it and Unblock the Notifications