ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಎಸ್‌ಐಟಿಯಿಂದ ಭಾಸ್ಕರ್ ಬಂಧನ
ಬೆಂಗಳೂರು, ಆಗಸ್ಟ್ 5 : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿ.ಭಾಸ್ಕರ್ ಅವರನ್ನು ಎಸ್‌ಐಟಿ ಬಂಧಿಸಿದೆ. ವಿ.ಭಾಸ್ಕರ್ ಲೋಕಾಯುಕ್ತ ನ್ಯಾ.ವೈ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಪರಮಾಪ್ತ ಎಂದು ಹೇಳಿಕೊಂಡಿದ್ದಾನೆ.
ಬುಧವಾರ ಎಸ್‌ಐಟಿ ಅಧಿಕಾರಿಗಳು ವಿ.ಭಾಸ್ಕರ್ ಅವರನ್ನು ಬಂಧಿಸಿದ್ದು, ಗುರುವಾರ ಬೆಂಗಳೂರಿನ ಲೋಕಾಯುಕ್ತ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಲಿವೆ. ವಿ.ಭಾಸ್ಕರ್ ಅವರನ್ನು ಎಲ್ಲಿ ಬಂಧಿಸಲಾಗಿದೆ? ಎಂಬ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ. [ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಮೊಬೈಲ್ ಕರೆ ಸಾಕ್ಷಿಗಳು ನಾಶ]

ವಿ.ಭಾಸ್ಕರ್ ತಾನು ಅಶ್ವಿನ್ ರಾವ್ ಅವರ ಪರಮಾಪ್ತ ಎಂದು ಹೇಳಿಕೊಂಡಿದ್ದಾನೆ. ಚಿತ್ರದುರ್ಗದ ಸಣ್ಣ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ ಚನ್ನಬಸಪ್ಪ ಅವರ ಬಳಿ ವಿ.ಭಾಸ್ಕರ್ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಚನ್ನಬಸಪ್ಪ ಅವರು ಈ ಕುರಿತು ದೂರು ಲೋಕಾಯುಕ್ತಗೆ ದೂರು ನೀಡಿದ್ದು, ಅದನ್ನು ಎಸ್‌ಐಟಿಗೆ ವರ್ಗಾವಣೆ ಮಾಡಲಾಗಿದೆ. [ಅಶ್ವಿನ್ ರಾವ್ ಬಂಧನ : ಲೋಕಾಯುಕ್ತರ ಮುಂದಿನ ನಡೆಯೇನು?]
ಆ.14ಕ್ಕೆ ಜಾಮೀನು ಅರ್ಜಿ ತೀರ್ಪು : ಲೋಕಾಯುಕ್ತ ಜಂಟಿ ಆಯುಕ್ತ ಸೈಯದ್ ರಿಯಾಜ್ ಅವರನ್ನು ಇಂದು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಸೈಯದ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದರು. ನ್ಯಾಯಾಧೀಶ ಜಿ.ವಿ.ಬೋಪಯ್ಯ ಅವರು ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ತೀರ್ಪನ್ನು ಆ.14ರಂದು ನೀಡಲಿದ್ದಾರೆ.
ಸೈಯದ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಬುಧವಾರ ಆದೇಶ ನೀಡಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಅಶೋಕ್ ಕುಮಾರ್, ಶ್ರೀನಿವಾಸಗೌಡ ಹಾಗೂ ಶಂಕರೇಗೌಡ ಅವರ ಜಾಮೀನು ಅರ್ಜಿಯ ವಿಚಾರಣೆಯೂ ಆ.14ರಂದು ನಡೆಯಲಿದೆ.
ಅಂದಹಾಗೆ ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ವಿನ್ ರಾವ್, ಅಶೋಕ್ ಕುಮಾರ್, ಶ್ರೀನಿವಾಸಗೌಡ ಹಾಗೂ ಶಂಕರೇಗೌಡ, ಸೈಯದ್ ರಿಯಾಜ್ ಅವರನ್ನು ಬಂಧಿಸಲಾಗಿದೆ.











Click it and Unblock the Notifications