ಲೋಕಾಯುಕ್ತದಲ್ಲಿ ಭ್ರಷ್ಟಾಚಾರ : ನಾಲ್ವರ ಬಿಡುಗಡೆಗೆ ಸುಪ್ರೀಂ ತಡೆ
ಬೆಂಗಳೂರು, ಸೆ. 16 : ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಾಲ್ವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಆದ್ದರಿಂದ, ನಾಲ್ವರು ಆರೋಪಿಗಳು ಇಂದು ಬಿಡುಗಡೆಯಾಗಲು ಸಾಧ್ಯವಿಲ್ಲ.
ಸೆಪ್ಟೆಂಬರ್ 8ರಂದು ಲೋಕಾಯುಕ್ತ ಮಾಜಿ ಪಿಆರ್‌ಒ ಸೈಯದ್ ರಿಯಾಜ್, ಶ್ರೀನಿವಾಸ ಗೌಡ, ಶಂಕರೇಗೌಡ, ಅಶೋಕ್ ಕುಮಾರ್ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಸೆ.16ರಿಂದ ಈ ಆದೇಶ ಜಾರಿಗೆ ಬರಬೇಕಿತ್ತು. [ನಾಲ್ವರಿಗೆ ಜಾಮೀನು ನೀಡಿದ ಹೈಕೋರ್ಟ್]

ಎಲ್ಲಾ ಆರೋಪಿಗಳನ್ನು ಬುಧವಾರ ಬೆಳಗ್ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ, ಎಸ್‌ಐಟಿ ಪರ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ಇಂದು ಜಾಮಿನು ಅರ್ಜಿಗೆ ತಡೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇದೆ. ಆದ್ದರಿಂದ ಮಧ್ಯಾಹ್ನ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು. [ಲೋಕಾಯುಕ್ತದಲ್ಲಿ ಭ್ರಷ್ಟಾಚಾರ : 1550 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ]
ಎಸ್‌ಐಟಿ ಪರ ವಕೀಲರ ಮನವಿಗೆ ಸ್ಪಂದಿಸಿದ ಲೋಕಾಯುಕ್ತ ಕೋರ್ಟ್ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿತ್ತು. ಸದ್ಯ, ಸುಪ್ರೀಂಕೋರ್ಟ್ ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನು ಆದೇಶಕ್ಕೆ ತಡೆಯಾಜ್ಞೆ ನೀಡಿದೆ ಮತ್ತು ಈ ಕುರಿತು ಲೋಕಾಯುಕ್ತ ಕೋರ್ಟ್‌ಗೆ ತಕ್ಷಣ ಮಾಹಿತಿ ನೀಡುವಂತೆ ಸೂಚನೆ ನೀಡಿದೆ.
ಎಸ್ಐಟಿ ಸುಪ್ರೀಂ ಮೊರೆ ಹೋಗಿತ್ತು : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನಾಲ್ವರಿಗೆ ಜಾಮೀನು ನೀಡಿರುವ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಈ ಪ್ರಕರಣವು ಗಂಭೀರ ಸ್ವರೂಪದಿಂದ ಕೂಡಿರುವುದರಿಂದ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಎಸ್‌ಐಟಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಿತ್ತು.












Click it and Unblock the Notifications