ನಿಗಮ ಮಂಡಳಿ ನೇಮಕಾತಿ: ಕಾಂಗ್ರೆಸ್ ಹೈಕಮಾಂಡ್, ರಾಜ್ಯ ನಾಯಕರ ನಡುವೆ ಬಿಕ್ಕಟ್ಟು: ಆಗಿದ್ದೇನು?
ಬೆಂಗಳೂರು, ಜನವರಿ 23: ಲೋಕಸಭಾ ಚುಣಾವಣೆ ಹಿನ್ನೆಲೆ ರಾಜ್ಯ ಕಾಂಗ್ರೆಸ್ ನಲ್ಲಿರುವ ಅಸಮಾಧಾನವನ್ನ ಶಮನಗೊಳಿಸುವ ನಿಟ್ಟಿನಲ್ಲಿ ನಿಗಮ ಮಂಡಳಿ ನೇಮಕಕ್ಕೆ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಮುಂದಾಗಿದ್ದಾರೆ. ಆದರೆ, ಇದೀಗ ನಿಗಮ ಮಂಡಳಿ ವಿಚಾರದಲ್ಲಿ ಬಿಕ್ಕಟ್ಟು ಶುರುವಾಗಿದೆ.
ಹೌದು, ನಿಗಮ-ಮಂಡಳಿಗಳ ಅಧ್ಯಕ್ಷ ನೇಮಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವದ ನಡುವಿನ ಜಟಾಪಟಿ ಮುಂದುವರಿದಿದೆ. ಕೇಂದ್ರ ಪಕ್ಷದ ನಾಯಕರು ಕಳುಹಿಸಿದ್ದ ಪಟ್ಟಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದು, ಮರುಪರಿಶೀಲಿಸುವಂತೆ ಸೂಚಿಸಿದ್ದರು. ಕರ್ನಾಟಕದ ಗೃಹ ಸಚಿವ ಜಿ ಪರಮೇಶ್ವರ ಅವರು ನಿರ್ಧಾರ ಕೈಗೊಳ್ಳುವ ಮುನ್ನ ರಾಜ್ಯ ನಾಯಕರನ್ನು ಸಂಪರ್ಕಿಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎಂಟು ತಿಂಗಳು ಕಳೆದರೂ ಇನ್ನೂ ಮಂಡಳಿ, ನಿಗಮಗಳಿಗೆ ನೇಮಕಾತಿ ನಡೆದಿಲ್ಲ. ಶೀಘ್ರವೇ ನೇಮಕಾತಿ ಮಾಡುವಂತೆ ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರಿಂದ ರಾಜ್ಯ ನಾಯಕರು ಒತ್ತಡ ಹೇರುತ್ತಿದ್ದಾರೆ.
ಬಹಳ ವಿಳಂಬದ ನಂತರ ಶನಿವಾರ ಪಕ್ಷದ ಹೈಕಮಾಂಡ್ ರಾಜ್ಯ ನಾಯಕರಿಗೆ ಪಟ್ಟಿ ಕಳುಹಿಸಿದೆ. ಆದರೆ, ರಾಜ್ಯ ನಾಯಕರ ಸಲಹೆ ಪಡೆಯದೆ ಕೊನೆಯ ಕ್ಷಣದಲ್ಲಿ ಪಟ್ಟಿಗೆ ಸೇರ್ಪಡೆಗೊಂಡಿರುವುದು ಸಿಎಂ ಹಾಗೂ ಉಪಮುಖ್ಯಮಂತ್ರಿಗಳ ಮನಗೆದ್ದಿಲ್ಲ. ಇದರಿಂದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರಿಗೆ ಭೇಟಿ ನೀಡಿ ರಾಜ್ಯ ನಾಯಕರ ಜತೆ ಸಮಾಲೋಚನೆ ನಡೆಸಬೇಕಾಯಿತು. ಸಭೆಯಲ್ಲಿ ರಾಜ್ಯ ನಾಯಕರು ಕಳುಹಿಸಿದ ಹೆಸರುಗಳನ್ನು ಅನುಮೋದಿಸುವಂತೆ ಸಿಎಂ ಮತ್ತು ಡಿಸಿಎಂ ಹೈಕಮಾಂಡ್ ಕೇಳಿದರು.

ಸ್ಥಳೀಯ ನಾಯಕರಿಗೆ ಬಿಟ್ಟುಬಿಡಬೇಕೆಂದ ಪರಮೇಶ್ವರ
ನಿಗಮ ಮಂಡಳಿಯಂತಹ ವಿಚಾರಗಳನ್ನು ರಾಜ್ಯ ನಾಯಕರಿಗೆ ಬಿಟ್ಟು ಕೊಡಿ ಎಂದು ಗೃಹ ಸಚಿವ ಪರಮೇಶ್ವರ ಮಂಗಳವಾರ ಕಾಂಗ್ರೆಸ್ ಹೈಕಮಾಂಡ್ ಗೆ ಹೇಳಿದ್ದಾರೆ. ಹೈಕಮಾಂಡ್ ನಮ್ಮನ್ನು ಸಂಪರ್ಕಿಸಿಲ್ಲ. ಅವರು ನಮ್ಮ ಶಿಫಾರಸುಗಳನ್ನು ಸ್ವೀಕರಿಸಿಲ್ಲ. ಜಿಲ್ಲಾ ಮಟ್ಟದಲ್ಲಿ ಯಾರು ಕೆಲಸ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆಯೇ ಹೊರತು ಹೈಕಮಾಂಡ್ ಅಲ್ಲ. ಹೈಕಮಾಂಡ್ ಇಂತಹ ವಿಚಾರಗಳನ್ನು ಸಿಎಂ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಿಗೆ ಬಿಡಬೇಕು ಎಂದು ಪರಮೇಶ್ವರ ಹೇಳಿದರು
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸದೆ ನೇಮಕ ಮಾಡಿದ್ದಾರೆ ಎಂದು ಆರೋಪಿಸಿದರು. ನೇಮಕಾತಿ ಮಾಡುವ ಮೊದಲು ಜಿಲ್ಲೆಯ ನಾಯಕರನ್ನು ಸಂಪರ್ಕಿಸಬೇಕು. ಆದರೆ, ಇಲ್ಲಿ, ನಮ್ಮ ಪ್ರಧಾನ ಕಾರ್ಯದರ್ಶಿ ನೇಮಕಾತಿಗಳನ್ನು ಮಾಡುತ್ತಿದ್ದಾರೆ. ಪಕ್ಷಕ್ಕಾಗಿ ಯಾರು ದುಡಿದಿದ್ದಾರೆ ಎಂಬುದು ನಮಗೆ ಗೊತ್ತು ಅವರಿಗೆ ಹುದ್ದೆಗಳು ಸಿಗಬೇಕು. ಕೆಲಸ ಮಾಡದವರಿಗೆ ಪ್ರಮುಖ ಹುದ್ದೆಗಳು ಸಿಕ್ಕರೆ ನಮ್ಮ ನಿಜವಾದ ಕಾರ್ಯಕರ್ತರು ಗಲಿಬಿಲಿಗೊಳ್ಳುವುದು ಸ್ಪಷ್ಟವಾಗಿದೆ ಎಂದು ಪರಮೇಶ್ವರ ಹೇಳಿದರು.
ಇನ್ನೂ ನಿಗಮ ಮಂಡಳಿಯಲ್ಲಿ 36 ಶಾಸಕರು ಮತ್ತು 39 ಪಕ್ಷದ ಕಾರ್ಯಕರ್ತರನ್ನು ವಿವಿಧ ಮಂಡಳಿ ಮತ್ತು ನಿಗಮಗಳ ಮುಖ್ಯಸ್ಥರನ್ನಾಗಿ ನೇಮಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಈಗಾಗಲೇ ಹೇಳಿದ್ದರು.












Click it and Unblock the Notifications