ಕೊರೊನಾ: ಇದುವರೆಗಿನ ಪ್ರಯತ್ನವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಯಿತೇ?
ಪ್ರಧಾನಿ ಲಾಕ್ ಡೌನ್ ಘೋಷಣೆ ಮಾಡಿದ ನಂತರ, ಕೆಲವು ದಿನ ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದ ಸಾರ್ವಜನಿಕರು ಬರಬರುತ್ತಾ ಅದರ ಸೂಕ್ಷ್ಮತೆಯನ್ನು ಅರಿತುಕೊಂಡರು. ಪೊಲೀಸರ ಹರಸಾಹಸ ಮತ್ತು ಸರಕಾರದ ಬಿಗು ಕ್ರಮದಿಂದ, ಪರಿಸ್ಥಿತಿ ಒಂದು ಹಂತಕ್ಕೆ ಸರಿದಾರಿಗೆ ಬಂದಿತ್ತು.
ಸೋಮವಾರದ (ಮಾ 30) ವರೆಗೂ ಕೊರೊನಾ ನಿಯಂತ್ರಣ ರೈಟ್ ಟ್ರ್ಯಾಕ್ ನಲ್ಲಿ ಸಾಗುತ್ತಿದೆ ಎನ್ನುವಷ್ಟರಲ್ಲಿ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿನ ಘಟನೆ, ಇಡೀ ದೇಶಕ್ಕೆ ದೇಶವೇ ಬೆಚ್ಚಿಬೀಳುವಂತೆ ಮಾಡಿದೆ.
ದೆಹಲಿಯಲ್ಲಿ ನಡೆದ ಈ ಮುಸ್ಲಿಂ ಧಾರ್ಮಿಕ ಕಾರ್ಯಕ್ರಮದಲ್ಲಿ ಮುನ್ನೂರಕ್ಕೂ ಹೆಚ್ಚು ರಾಜ್ಯದ ಮಂದಿ ಭಾಗವಹಿಸಿದ್ದಾರೆ ಎಂದು ಸರಕಾರ ಅಧಿಕೃತವಾಗಿ ಪ್ರಕಟಿಸುವ ಮೂಲಕ, ಕೊರೊನಾ ನಿಯಂತ್ರಣದ ವಿಚಾರದಲ್ಲಿ, ಇದುವರೆಗೆ ಮಾಡಿದ ಎಲ್ಲಾ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತಾಯಿತೇ ಎಂದು ಸರಕಾರವೇ ತಲೆ ಮೇಲೆ ಕೈ ಹಿಡಿದು ಕೂರುವಂತೆ ಮಾಡಿದೆ.
ದೆಹಲಿಯ ನಿಜಾಮುದ್ದೀನ್ ಭಾಗದ ಜಮಾತ್ ಧಾರ್ಮಿಕ, ತಬ್ಲಿಫಿ ಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕೋವಿಡ್ 19, ಸೋಂಕು ತಗಲಿರುವ ಸಾಧ್ಯತೆ ದಟ್ಟವಾಗಿದ್ದು, ದೆಹಲಿ ಸರಕಾರದ ಆದೇಶದ ಹೊರತಾಗಿಯೂ ಮಸೀದಿಯಲ್ಲಿ ಇದ್ದ ಎಲ್ಲರನ್ನೂ ಬಲವಂತವಾಗಿ ಹೊರಹಾಕಲಾಗಿದೆ.

ನಿಜಾಮುದ್ದೀನ್ ಪ್ರದೇಶದಲ್ಲಿರುವ ಆಲಾಮಿ ಮಾರ್ಕಜ್ ಮಸೀದಿ
ನಿಜಾಮುದ್ದೀನ್ ಪ್ರದೇಶದಲ್ಲಿರುವ ಆಲಾಮಿ ಮಾರ್ಕಜ್ ಮಸೀದಿಯಲ್ಲಿ ಮಾರ್ಚ್ 13-15ರ ಅವಧಿಯಲ್ಲಿ, ತಬ್ಲಿಫ್-ಇ-ಜಮಾತ್ ಸಂಘಟನೆ ಈ ಧಾರ್ಮಿಕ ಸಮಾವೇಶವನ್ನು ಆಯೋಜಿಸಿತ್ತು. ಸೌದಿ, ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ವಿಶ್ವದ ಹದಿನಾರು ರಾಷ್ಟ್ರಗಳ ಧಾರ್ಮಿಕ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಕೊರೊನಾ ಬಲಿ ಪಡೆದುಕೊಂಡವರಲ್ಲಿ ಹತ್ತು ಜನ ಈ ಸಮಾವೇಶದಲ್ಲಿದ್ದವರು
ದೇಶದಲ್ಲಿ ಇದುವರೆಗೆ ಕೊರೊನಾ ಬಲಿ ಪಡೆದುಕೊಂಡವರಲ್ಲಿ ಹತ್ತು ಜನ ಈ ಸಮಾವೇಶದಲ್ಲಿ ಭಾಗವಹಿಸಿದ್ದವರು ಎನ್ನುವುದೇ ಸರಕಾರವನ್ನು ಬೆಚ್ಚಿಬೀಳಿಸಲು ಕಾರಣವಾಗಿರುವುದು. ಈ ಸಮಾವೇಶದಿಂದ ಕೊರೊನಾ ವ್ಯಾಪಕವಾಗಿ ಹರಡಿದೆ ಎನ್ನುವುದು ಕೇಂದ್ರ ಗೃಹ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ. ಪ್ರವಾಸೀ ವೀಸಾದಲ್ಲಿ ಬಂದ ವಿದೇಶಿ ಧಾರ್ಮಿಕ ಮುಖಂಡರನ್ನು ಕೇಂದ್ರ, ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಲು ನಿರ್ಧರಿಸಿದೆ.

ದೆಹಲಿ ಸರಕಾರದ ನಿಷೇದಾಜ್ಞೆ
ದೆಹಲಿ ಸರಕಾರದ ನಿಷೇದಾಜ್ಞೆಯ ನಡುವೆಯೂ ತಬ್ಲಿಫ್-ಇ-ಜಮಾತ್ ಸಂಘಟನೆ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು ಎನ್ನುವುದು ಗಮನಿಸಬೇಕಾದ ವಿಚಾರ. ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ, ದೇಶದ ನಾನಾ ಭಾಗಗಳ ಸುಮಾರು 3,300 ಮುಸ್ಲಿಮರು ಈ ಸಭೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಸುಮಾರು 1,400 ಜನರನ್ನು ಕ್ವಾರಂಟೈನ್ ಗೆ ಗುರಿಪಡಿಸಲಾಗಿದೆ.

ಕರ್ನಾಟಕದ ಮುನ್ನರಕ್ಕೂ ಹೆಚ್ಚು ಜನ ಈ ಸಭೆಯಲ್ಲಿ ಭಾಗವಹಿಸಿದ್ದರು
ಕರ್ನಾಟಕದ ಮುನ್ನರಕ್ಕೂ ಹೆಚ್ಚು ಜನ ಈ ಸಭೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಕೇವಲ 40 ಜನರನ್ನು ಪತ್ತೆಹಚ್ಚಲು ರಾಜ್ಯ ಸರಕಾರಕ್ಕೆ ಸಾಧ್ಯವಾಗಿದ್ದು, ಉಳಿದವರ ಶೋಧ ಕಾರ್ಯ ತೀವ್ರವಾಗಿ ನಡೆಯುತ್ತಿದೆ. ಕ್ವಾರಂಟೈನ್ ಗೆ ಒಳಪಟ್ಟ 40 ಜನರ ಪೈಕಿ, ಹನ್ನೆರಡು ಜನರ ವರದಿ ನೆಗೆಟೀವ್ ಬಂದಿದೆ. ಈ ಸಭೆಯಲ್ಲಿ ಭಾಗವಹಿಸಿದ್ದ, ಇಂಡೋನೇಷ್ಯಾ ಹಾಗೂ ಮಲೇಷ್ಯಾದ 62 ಪ್ರಜೆಗಳು ಕರ್ನಾಟಕಕ್ಕೆ ಬಂದ ಮಾಹಿತಿ ಲಭ್ಯವಾಗಿದೆ. ಇದರಲ್ಲಿ 12 ಜನರನ್ನ ಪತ್ತೆ ಹಚ್ಚಿ Quarantine ಮಾಡಲಾಗುತ್ತಿದೆ.

ನೀರಿನಲ್ಲಿ ಹೋಮ ಮಾಡಿದಂತಾಗದಿದ್ದರೆ ಸಾಕು
ಸಭೆಯಲ್ಲಿ ಭಾಗವಹಿಸಿದ್ದ ದೇಶದ ಸುಮಾರು ಮುನ್ನೂರು ಜನರ ಪೈಕಿ, ಕ್ವಾರಂಟೈನ್ ಗೆ ಒಳಪಡದ ಸುಮಾರು 260, ವಿದೇಶದಿಂದ ಬಂದ 50 ಜನರ ಪೈಕಿ ಮಾಹಿತಿ ಸಿಗದ ನಲವತ್ತು ವಿದೇಶಿಗರು ಈಗ ಎಲ್ಲಿದ್ದಾರೆ, ತಮ್ಮ ಊರಿಗೆ ಬಂದ ನಂತರ, ಇನ್ನೆಷ್ಟು ಜನರನ್ನು, ಕುಟುಂಬದವರನ್ನು ಭೇಟಿಯಾಗಿದ್ದಾರೆ ಎನ್ನುವ ಅಂಶದ ಜಾಡು ಹಿಡಿದು ಪೊಲೀಸರು ಹೊರಟಿದ್ದಾರೆ. ಒಟ್ಟಿನಲ್ಲಿ, ಇದುವರೆಗೆ ರಾಜ್ಯ ಸರಕಾರ, ಪೊಲೀಸರು ಮಾಡಿದ ಕೆಲಸಗಳೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗದಿದ್ದರೆ ಸಾಕು, ಕೊರೊನಾ, ಲಾಕ್ ಡೌನ್ ನಿಂದ ದೇಶ ಹೊರಬಂದರೆ ಸಾಕು ಎನ್ನುವುದೇ ಎಲ್ಲರೂ ಆಶಯ.












Click it and Unblock the Notifications