ರಾತ್ರಿ ಕರ್ಫ್ಯೂ; ಪೊಲೀಸರು ಸಂಚಾರಿ ಪಾಸ್ ಕೊಡಲ್ಲ
ಬೆಂಗಳೂರು, ಏಪ್ರಿಲ್ 9; ಕರ್ನಾಟಕ ಸರ್ಕಾರ ಕೋವಿಡ್ ಸೋಂಕು ಹರಡುವಿಕೆ ತಡೆಯಲು ಕೊರೊನಾ ಕರ್ಫ್ಯೂ ಘೋಷಣೆ ಮಾಡಿದೆ. ವಿವಿಧ ಜಿಲ್ಲೆಗಳಲ್ಲಿ ಏಪ್ರಿಲ್ 10ರಿಂದ 20ರ ತನಕ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಶುಕ್ರವಾರ ರಾತ್ರಿ ಕರ್ಫ್ಯೂ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಬೆಂಗಳೂರು ನಗರ, ಮೈಸೂರು, ಮಂಗಳೂರು, ಉಡುಪಿ, ಮಣಿಪಾಲ, ಬೀದರ್, ಕಲಬುರಗಿ ಮತ್ತು ತುಮಕೂರಿನಲ್ಲಿ ಕರ್ಫ್ಯೂ ಜಾರಿಯಾಗಲಿದೆ.
ಕೊರೊನಾ ಕರ್ಫ್ಯೂ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯ ತನಕ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ವೈದ್ಯಕೀಯ ಸೇವೆ ಮತ್ತು ತುರ್ತು ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಇನ್ನುಳಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಿದೆ.

ಕರ್ಫ್ಯೂ ಜಾರಿಯಲ್ಲಿದ್ದರೂ ಬಸ್, ರೈಲು ಹಾಗೂ ವಿಮಾನದ ದೂರ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಪ್ರಯಾಣಿಕರು ಮನೆಯಿಂದ ನಿಲ್ದಾಣಗಳಿಗೆ ಮತ್ತು ನಿಲ್ದಾಣಗಳಿಂದ ಮನೆಗೆ ಅಧಿಕೃತ ಟಿಕೆಟ್ ಆಧಾರದ ಮೇಲೆ ಆಟೋ/ ಕ್ಯಾಬ್ ಇತ್ಯಾದಿಗಳ ಮೂಲಕ ಸಂಚರಿಸಲು ಅವಕಾಶವಿದೆ.
ಪೊಲೀಸ್ ಇಲಾಖೆ ಪಾಸ್ ಇಲ್ಲ; ಹಿಂದೆ ಲಾಕ್ ಡೌನ್ ಘೋಷಣೆಯಾದ ಸಮಯದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ತುರ್ತು ಸಂಚಾರಕ್ಕಾಗಿ ಪಾಸುಗಳನ್ನು ವಿತರಣೆ ಮಾಡಿತ್ತು. ಆದರೆ, ಈಗ ಪಾಸುಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕೊರೊನಾ ಕರ್ಫ್ಯೂ 10 ದಿನಗಳ ಅವಧಿಗೆ ಮಾತ್ರ ಸೀಮಿತವಾಗಿದೆ. ರಾತ್ರಿ ವೇಳೆ ಮಾತ್ರ ಸಂಚಾರಕ್ಕೆ ಅವಕಾಶವಿಲ್ಲ. ಆದ್ದರಿಂದ, ತಡರಾತ್ರಿಯ ಸಂಚಾರಕ್ಕೆ ಯಾವುದೇ ಪಾಸು ನೀಡುವುದಿಲ್ಲ ಎಂದು ಪೊಲೀಸ್ ಇಲಾಖೆ ಹೇಳಿದೆ.
ಸರ್ಕಾರದ ಮಾರ್ಗಸೂಚಿ ಪ್ರಕಾರ ಕರ್ಫ್ಯೂ ಅವಧಿಯಲ್ಲಿ ಅತ್ಯವಶ್ಯಕ ಸೇವೆ ಒದಗಿಸುವಂತಹ ವಾಹನಗಳು/ ಸರಕು ಸಾಗಾಣಿಕೆ ವಾಹನಗಳು/ ಹೋಂ ಡೆಲಿವರಿ/ ಇ-ಕಾಮರ್ಸ್ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.












Click it and Unblock the Notifications