Copra: ಕೊಬ್ಬರಿ ಬೆಲೆಯಲ್ಲಿ ದಾಖಲೆಯ ಏರಿಕೆ.. ಕ್ವಿಂಟಾಲ್‌ಗೆ ಬರೋಬ್ಬರಿ 40,000 ರೂಪಾಯಿ..
Copra: ಕಲ್ಪತರು ನಾಡು ಅಂತಲೇ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ಇತ್ತೀಚೆಗಷ್ಟೇ ಕೊಬ್ಬರಿ ಧಾರಣೆ ದಾಖಲೆಯ ಏರಿಕೆ ಕಂಡಿತ್ತು. ಇದೀಗ ಶ್ರಾವಣ ಮಾಸದ ಆರಂಭದಲ್ಲೇ ಮತ್ತಷ್ಟು ದುಬಾರಿಯಾಗಿದೆ. ಇದರಿಂದ ಬೆಳೆಗಾರರ ಮುಖದಲ್ಲಿ ಸಂತಸ ಮೂಡಿದರೆ, ಇನ್ನೊಂದೆಡೆ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಹಾಗಾದ್ರೆ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಶ್ರಾವಣ ಮಾಸ ಎಂದರೆ ಹಬ್ಬ-ಹರಿದಿನಗಳ ಸರಣಿಯೇ ಆರಂಭ ಆಗುತ್ತದೆ. ವರಮಹಾಲಕ್ಷ್ಮಿ, ಗೌರಿ-ಗಣೇಶ ಹಬ್ಬಗಳು ಹಾಗೂ ಶ್ರಾವಣ ಶನಿವಾರ, ಸೋಮವಾರದ ಪೂಜೆಗಳ ಸಂಭ್ರಮದಲ್ಲಿ ಜನರು ಮುಳುಗಿರುತ್ತಾರೆ. ಈ ವೇಳೆ ಮನೆಗೆ ಬರುವ ಮುತ್ತೈದೆಯರು, ಸಂಬಂಧಿಕರಿಗೆ ಹಾಗೂ ಹೆಣ್ಣುಮಕ್ಕಳಿಗೆ ಅರಿಶಿನ-ಕುಂಕುಮದೊಂದಿಗೆ ಒಣ ಕೊಬ್ಬರಿ (ಬಟ್ಟಲು ಕೊಬ್ಬರಿ) ಕೊಟ್ಟು ಗೌರವಿಸುವುದು ನಮ್ಮ ನಾಡಿನ ಪರಂಪರಾಗತ ಸಂಪ್ರದಾಯ. ಆದರೆ ಈ ಬಾರಿ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಮಾರುಕಟ್ಟೆಯಲ್ಲಿ ಕೊಬ್ಬರಿಯ ಬೆಲೆ ಗಗನಕ್ಕೇರಿದೆ.

ಕೊಬ್ಬರಿ ಧಾರಣೆ ದಾಖಲೆಯ ಏರಿಕೆ
ಇತ್ತೀಚಿನ ದಿನಗಳಲ್ಲಿ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಸಾಮಾನ್ಯ ಜನರಿಗೆ ಇದೀಗ ಹಬ್ಬದ ಸಮಯದಲ್ಲಿ ಕೊಬ್ಬರಿ ಧಾರಣೆ ಏರಿಕೆಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಒಣ ಕೊಬ್ಬರಿಯ ಬೆಲೆ ಸಿಲ್ಲರೆ ಮಾರಾಟದಲ್ಲಿ ಪ್ರತಿ ಕಿಲೋ ಗ್ರಾಂಗೆ ಅಂದಾಜು 400 ರೂಪಾಯಿ ಆಸುಪಾಸಿನಲ್ಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಬೆಲೆ ಏರಿಕೆಗೆ ಮುಖ್ಯ ಕಾರಣಗಳು
ಕಳೆದ ಕೆಲವು ತಿಂಗಳುಗಳಿಂದ ಪ್ರಮುಖ ತೆಂಗು ಬೆಳೆಯುವ ಜಿಲ್ಲೆಗಳಾದ ತುಮಕೂರು, ಹಾಸನ, ಮಂಡ್ಯ ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ಹವಾಮಾನ ವೈಪರೀತ್ಯ ಮತ್ತು ರೋಗ ಬಾಧೆಯಿಂದಾಗಿ ತೆಂಗಿನ ಇಳುವರಿ ಕಡಿಮೆಯಾಗಿದೆ. ಇದರಿಂದಾಗಿ ಮಾರುಕಟ್ಟೆಗೆ ಬರುವ ಒಣ ಕೊಬ್ಬರಿಯ ಪ್ರಮಾಣದಲ್ಲಿ ಗಣನೀಯ ಕಡಿಮೆಯಾಗಿದೆ.
* ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯಗಳು, ಪೂಜೆ-ಪುನಸ್ಕಾರಗಳು ಹಾಗೂ ಮುತ್ತೈದೆಯರಿಗೆ ಬಾಗಿನ ನೀಡುವ ಸಂಪ್ರದಾಯ ಹೆಚ್ಚಿರುವುದರಿಂದ ಒಣ ಕೊಬ್ಬರಿಗೆ ದಿಢೀರ್ ಬೇಡಿಕೆ ಬಂದಿದೆ. ಪೂರೈಕೆ ಕಡಿಮೆ ಇದ್ದು ಬೇಡಿಕೆ ಹೆಚ್ಚಿರುವುದು ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ.
* ಹಸಿ ತೆಂಗಿನಕಾಯಿಯನ್ನು ಒಣ ಕೊಬ್ಬರಿಯಾಗಿ ಪರಿವರ್ತಿಸಲು ಸಂಸ್ಕರಣಾ ವೆಚ್ಚ ಹೆಚ್ಚಾಗಿದ್ದು, ಇಂಧನ ಬೆಲೆ ಏರಿಕೆಯಿಂದಾಗಿ ಸಾರಿಗೆ ವೆಚ್ಚವೂ ಹೆಚ್ಚಾಗಿದೆ. ಇದು ಕೊನೆಗೆ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಆದರೆ ಬೆಳೆಗಾರರಿಗೆ ಮಾತ್ರ ಬಂಪರ್ ಲಾಟರಿ ಹೊಡೆದಂತಾಗಿದೆ.
* ಶ್ರಾವಣದಲ್ಲಿ ಪೂಜಾ ಸಾಮಗ್ರಿಗಳ ಜೊತೆಗೆ ಕೊಬ್ಬರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಬೇಕಾಗುತ್ತದೆ. ಆದರೆ ಕೆ.ಜಿ.ಗೆ 400 ರೂಪಾಯಿವರೆಗೆ ದರ ತಲುಪಿರುವುದರಿಂದ ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳಿಗೆ ಹೊರೆಯಾದಂತಾಗಿದೆ.
ಗ್ರಾಹಕರು ಹೇಳುವುದೇನು?
'ಹಬ್ಬದ ಸಮಯದಲ್ಲಿ ಮುತ್ತೈದೆಯರಿಗೆ ಕೊಬ್ಬರಿ ಕೊಡುವುದು ಶುಭ ಶಕುನ ಹಾಗೂ ಸಂಪ್ರದಾಯ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಇಷ್ಟೊಂದು ದುಬಾರಿ ಆದರೆ ಬಾಗಿನ ನೀಡುವುದಾದರೂ ಹೇಗೆ? ಪ್ರತಿಯೊಂದು ವಸ್ತುವಿನ ಬೆಲೆಯೂ ಏರಿಕೆಯಾಗುತ್ತಿದ್ದು, ಹಬ್ಬ ಮಾಡುವುದೇ ಕಷ್ಟಕರವಾಗಿದೆ,' ಎಂದು ಗೃಹಿಣಿಯರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಸಂಪ್ರದಾಯವನ್ನು ಕೈಬಿಡಲಾಗದೆ, ಗ್ರಾಹಕರು ಚೌಕಾಸಿ ಮಾಡಿ ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ಮೊದಲು ಕೆಜಿಗಟ್ಟಲೆ ಕೊಬ್ಬರಿ ಖರೀದಿಸುತ್ತಿದ್ದವರು. ಆದರೆ ಈಗ ಅರ್ಧ ಕೆಜಿ ಅಥವಾ ಕಾಲು ಕೆಜಿಗೆ ತೃಪ್ತಿಪಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ತಜ್ಞರ ಪ್ರಕಾರ, ಶ್ರಾವಣ ಮಾಸ ಮುಗಿದು ಗಣೇಶ ಚತುರ್ಥಿ ಮುಕ್ತಾಯವಾಗುವವರೆಗೆ ಒಣ ಕೊಬ್ಬರಿ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆ ಕಂಡುಬರುವ ಸಾಧ್ಯತೆ ಕಡಿಮೆ. ಒಟ್ಟಿನಲ್ಲಿ ಹೇಳುವುದಾದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆಜಿ ಕೊಬ್ಬರಿಗೆ 400 ರೂಪಾಯಿ ಇದ್ದರೆ, ಒಂದು ಕ್ವಿಂಟಾಲ್‌ಗೆ 40,000 ರೂಪಾಯಿ ಆಗುತ್ತದೆ. ಇದು ತೆಂಗು ಬೆಳೆಗಾರರಿಗೆ ಸಂತಸದ ವಿಷಯವಾದರೆ, ಗ್ರಾಹಕರಿಗೆ ತಲೆನೋವಾಗಿದೆ ಎನ್ನಲಾಗುತ್ತಿದೆ.


Click it and Unblock the Notifications
