ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮನ ಕಷ್ಟ ನೋಡಿ ಜನರಿಗೆ ಮೊಬೈಲ್ ಟಾಯ್ಲೆಟ್ ಕಟ್ಟಿಕೊಟ್ಟ ಪಿಎಸ್ಐ

|
Google Oneindia Kannada News

ಬೆಂಗಳೂರು, ಜೂ. 16: ಬಡತನದ ಹಿನ್ನೆಲೆಯಿಂದ ಬಂದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ತನ್ನ ಮಾನವೀಯ ಕೆಲಸಗಳಿಂದ ಬೆಂಗಳೂರಿನಲ್ಲಿ 'ಸಾಮಾಜಿಕ ಕಳಕಳಿಯ ಹೀರೋ' ಆಗಿ ಜನ ಮನ್ನಣೆ ಗಳಿಸುತ್ತಿದ್ದಾರೆ.

ಗೊರಗುಂಟೆ ಪಾಳ್ಯದಲ್ಲಿ ಶೌಚಾಲಯವಿಲ್ಲದೇ ಪರದಾಡುತ್ತಿದ್ದ ಜನರನ್ನು ನೋಡಿ "ಟಾಯ್ಲೆಟ್ ಕಟ್ಟುವ'' ಕ್ಯಾಂಪೇನ್ ಗೆ ಚಾಲನೆ ಕೊಟ್ಟು ಕೊನೆಗೆ ಅವರೇ ಮೊಬೈಲ್ ಟಾಯ್ಲೆಟ್ ಕಟ್ಟಿಕೊಟ್ಟು ಸುದ್ದಿಯಾಗಿದ್ದಾರೆ. ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಶಾಂತಪ್ಪ ಜಡೆಮ್ಮನವರ್ ಅವರ ಈ ಮಾನವೀಯ ಪುಟ್ಟ ಸೇವೆ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಮಾತ್ರವಲ್ಲ, ಜನ ಪ್ರತಿನಿಧಿಗಳು, ಬಿಬಿಎಂಪಿ ಅಧಿಕಾರಿಗಳೇ ತಲೆ ಭಾಗುವಂತೆ ಮಾಡಿದೆ.

ಪಿಎಸ್ಐ ನೇಮಕಾತಿ ಅಕ್ರಮ: ಬೆಂಗಳೂರಲ್ಲಿ ಮತ್ತಿಬ್ಬರು PSI ಅಭ್ಯರ್ಥಿಗಳು ಲಾಕ್! ಪಿಎಸ್ಐ ನೇಮಕಾತಿ ಅಕ್ರಮ: ಬೆಂಗಳೂರಲ್ಲಿ ಮತ್ತಿಬ್ಬರು PSI ಅಭ್ಯರ್ಥಿಗಳು ಲಾಕ್!

ಶಾಂತಪ್ಪ ಜಡೆಮ್ಮನವರು ಪೊಲೀಸ್ ಇಲಾಖೆಯಲ್ಲಿಯೇ ಇದ್ದು ಮಾಡುತ್ತಿರುವ ಸಮಾಜ ಸೇವೆಗೆ ಪೊಲೀಸ್ ಇಲಾಖೆಯಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಸದ್ಯ ವಿಧಾನಸೌಧ ಭದ್ರತಾ ವಿಭಾಗದಲ್ಲಿ ಪಿಎಸ್ಐ ಆಗಿ ಶಾಂತಪ್ಪ ಜಡೆಮ್ಮನವರ್ ಕುಟುಂಬದ ಹಿನ್ನೆಲೆ, ಜನ ಸಾಮಾನ್ಯರ ಸಮಸ್ಯೆಗಳಿಗೆ ಮಿಡಿಯುವ ಅವರ ಅಂತಃಕರಣದ ಪಯಣ ಇಲ್ಲಿದೆ.

ಗೊರಗುಂಟೆಪಾಳ್ಯದಲ್ಲಿ ಮೊಬೈಲ್ ಟಾಯ್ಲೆಟ್

ಗೊರಗುಂಟೆಪಾಳ್ಯದಲ್ಲಿ ಮೊಬೈಲ್ ಟಾಯ್ಲೆಟ್

ಪಿಎಸ್ಐ ಶಾಂತಪ್ಪ ಅವರ ತಾಯಿ ಬೆಂಗಳೂರಿಗೆ ಬಂದಿದ್ದರಂತೆ. ಗೊರಗುಂಟೆ ಪಾಳ್ಯದಲ್ಲಿ ಬಸ್ ಇಳಿದಾಗ ಮೂತ್ರ ಹೋಗಬೇಕೆಂದು ಕೇಳಿದ್ದಾರೆ. ಅಲ್ಲಿ ಮೂತ್ರ ವಿರ್ಸಜನೆಗೆ ಜಾಗ ನೋಡಿದಾಗ ಶಾಂತಪ್ಪನಿಗೆ ಎಲ್ಲೂ ಕಾಣಲಿಲ್ಲ. ಬಳಿಕ ಸಮೀಪದ ಖಾಸಗಿ ಆಸ್ಪತ್ರೆಯ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಬಂದಿದ್ದಾರೆ. ಸದಾ ಪ್ರಯಾಣಿಕರಿಂದ ಗಿಜಿಗುಡುವ ಗೊರಗುಂಟೆ ಪಾಳ್ಯದಲ್ಲಿ ಒಂದು ಶೌಚಾಲಯ ಇಲ್ಲವಲ್ಲ ಎಂದು ಬೇಸರಗೊಂಡಿದ್ದ ಶಾಂತಪ್ಪ ಜಡೆಮ್ಮನವರ್, ಗೊರಗುಂಟೆ ಪಾಳಯದಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಿಕೊಡಿ ಎಂದು ಆನ್‌ಲೈನ್ ಅಭಿಯಾನ ಆರಂಭಿಸಿದ್ದರು. ನೂರು ದಿನ ಅಭಿಯಾನ ನಡೆದರೂ ಬಿಬಿಎಂಪಿಯಾಗಲೀ, ಸ್ಥಳೀಯ ಜನಪ್ರತಿನಿಧಿಗಳಾಗಲೀ ತಲೆ ಕೆಡಿಸಿಕೊಳ್ಳಲಿಲ್ಲ. ಅಂತಿಮವಾಗಿ ತನ್ನ ಅಭಿಯಾನಕ್ಕೆ ಬೆಂಬಲ ನೀಡಿದವರ ನೆರವುನಿಂದಲೇ ಅಭಿಯಾನದ ನೂರನೇ ದಿನಕ್ಕೆ ಶಾಂತಪ್ಪ ಅವರೇ ಸ್ವತಃ ಮೊಬೈಲ್ ಟಾಯ್ಲೆಟ್ ಕಟ್ಟಿಸಿ ಮಾನವೀಯತೆ ಮೆರೆದಿದ್ದಾರೆ. ಶಾಂತಪ್ಪ ಅವರು ಸಾರ್ವಜನಿಕರಿಗೆ ಕಲ್ಪಿಸಿರುವ ಮೊಬೈಲ್ ಟಾಯ್ಲೆಟ್ , ಅವರ ಸಾಮಾಜಿಕ ಕಳಕಳಿ ಇದೀಗ ಬೆಂಗಳೂರಿನಲ್ಲಿ ಸದ್ದು ಮಾಡುತ್ತಿದೆ.

ಮೊಬೈಲ್ ಟಾಯ್ಲೆಟ್ ಕಟ್ಟಿದ ಮೂಲ ಕಾರಣ:

ಮೊಬೈಲ್ ಟಾಯ್ಲೆಟ್ ಕಟ್ಟಿದ ಮೂಲ ಕಾರಣ:

"ನನ್ನ ತಾಯಿ ಒಂದು ದಿನ ಮೂತ್ರ ವಿಸರ್ಜನೆ ಮಾಡಲು ಕಷ್ಟ ಪಟ್ಟರು. ನಾನು ಪೊಲೀಸ್ ಆಗಿದ್ದರಿಂದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಅಮಾಯಕರು ಬಯಲಿನಲ್ಲೇ ಮಾಡಬೇಕು. ಹೆಣ್ಣು ಮಕ್ಕಳು ಪ್ರತಿ ಕ್ಷಣವೂ ಕಷ್ಟಪಡುವುದನ್ನು ನಾನು ನೋಡಿದೆ. ಜನರು ಪರದಾಟ ಕಂಡು ಅಭಿಯಾನ ಶುರು ಮಾಡಿದೆ. ವಿನಯ ಪೂರ್ವಕವಾಗಿ ಬಿಬಿಎಂಪಿ ಅಧಿಕಾರಿಗಳಲ್ಲಿ ಮನವಿ ಮಾಡಿದೆ. ಯಾರೂ ಸ್ಪಂದಿಸಲಿಲ್ಲ. ನನ್ನ ಅಭಿಯಾನ ಮೆಚ್ಚಿ ಕೆಲವರು ಸಹಾಯ ಮಾಡಿ ಇದೀಗ ಸಾರ್ವಜನಿಕರಿಂದಲೇ ಮೊಬೈಲ್ ಟಾಯ್ಲೆಟ್ ಕಲ್ಪಿಸಿದ್ದೇವೆ. ಸದ್ಯಕ್ಕೆ ಮೊಬೈಲ್ ಟಾಯ್ಲೆಟ್ ನಿರ್ವಹಣೆ ವಿಚಾರ ಬಂದಾಗ ಸಣ್ಣ ಪುಟ್ಟ ಸಮಸ್ಯೆಗಳಿವೆ. 250 ಲೀಟರ್ ಕೆಪಾಸಿಟಿ ಮೊಬೈಲ್ ಟಾಯ್ಲೆಟ್ ತುಂಬೋಕೆ ನಾಲ್ಕು ದಿನ ಬೇಕು ಎಂದು ಕಂಪನಿ ಹೇಳಿದ್ದರು. ಆದರೆ ಒಂದೂವರೆ ದಿನಕ್ಕೆ ಅದು ಭರ್ತಿಯಾಗಿದೆ. ಇಲ್ಲಿ ಶೌಚಾಲಯದ ಅಗತ್ಯತೆ ಎಷ್ಟಿತ್ತು ಅನ್ನೋದನ್ನು ಇದು ತೋರಿಸುತ್ತದೆ. ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡೇ ನನ್ನ ಚೌಕಟ್ಟಿನಲ್ಲಿ ನಾನು ಈ ಪುಟ್ಟ ಪ್ರಯತ್ನ ಮಾಡಿದ್ದೇನೆ. ಬಡತನದ ಹಿನ್ನೆಲೆಯಿಂದ ಬಂದವನು ನಾನು, ಹೆಂಗರಳು ಮನಸು. ಸಮಸ್ಯೆ ನೋಡಿದಾಗ ಸ್ಪಂದಿಸಬೇಕು ಎಂದು ಮನಸು ಹೇಳುತ್ತದೆ. ಹೀಗಾಗಿ ಪುಟ್ಟ ಕೆಲಸ ಮಾಡಿದ್ದೇನೆ," ಎಂದು ಶಾಂತಪ್ಪ ಜಡೆಮ್ಮನವರ್ ಮೊಬೈಲ್ ಟಾಯ್ಲೆಟ್ ಕಟ್ಟಿದನ್ನು 'ಒನ್‌ಇಂಡಿಯಾ ಕನ್ನಡ'ಕ್ಕೆ ತಿಳಿಸಿದರು.

 ಯಾರೂ ಈ ಶಾಂತಪ್ಪ ಜಡೆಮ್ಮನವರ್ :

ಯಾರೂ ಈ ಶಾಂತಪ್ಪ ಜಡೆಮ್ಮನವರ್ :

ಬಳ್ಳಾರಿ ಜಿಲ್ಲೆ ಕುರಗೋಡು ತಾಲೂಕಿನ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಶಾಂತಪ್ಪ, ಹುಟ್ಟಿದ ವರ್ಷದೊಳಗೆ ತಂದೆಯನ್ನು ಕಳೆದುಕೊಂಡರು. ಅಮ್ಮ ಇದ್ದ ಸ್ವಲ್ಪ ಹೊಲದಲ್ಲಿ ಕೆಲಸ ಮಾಡುವ ಜತೆಗೆ ಕೂಲಿ ಮಾಡುತ್ತಿದ್ದರು. ಸರ್ಕಾರಿ ಶಾಲೆಗಳಲ್ಲಿ ಓದಿಕೊಂಡು ಬಂದ ಶಾಂತಪ್ಪ ಸರ್ಕಾರಿ ಸೇವೆಗೆ ಸೇರುವ ಪ್ರಯತ್ನ ಮಾಡಿದ್ದರು. ಪದವಿ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಮನಸು ಮಾಡಿದ್ದರು.

ಆರು ಕೆಲಸ ಸಿಕ್ಕಿದ್ರೂ ಆಯ್ಕೆ ಮಾಡಿಕೊಂಡಿದ್ದು ಪಿಎಸ್ಐ

ಆರು ಕೆಲಸ ಸಿಕ್ಕಿದ್ರೂ ಆಯ್ಕೆ ಮಾಡಿಕೊಂಡಿದ್ದು ಪಿಎಸ್ಐ

ಇನ್ನು ಶಾಂತಪ್ಪ ಈವರೆಗೂ ಸುಮಾರು ಐದಾರು ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಅವರಿಗೆ ಮೊದಲು ಸಿಕ್ಕಿದ್ದು ಕೆನರಾ ಬ್ಯಾಂಕ್‌ನಲ್ಲಿ ಕೆಲಸ. ಆದರೆ, ಬ್ಯಾಂಕ್ ಉದ್ಯೋಗ ಇಷ್ಟವಿಲ್ಲದಿದ್ದರಿಂದ ಆ ಕೆಲಸಕ್ಕೆ ಹೋಗಲಿಲ್ಲ. ಆ ನಂತರ ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂದರ್ಶನಕ್ಕೆ ಹೋಗಿ ಬಂದಿದ್ದರಂತೆ. ಅದೇ ರೀತಿ ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಎರಡು ಬಾರಿ ಸಂದರ್ಶನಕ್ಕೆ ಹೋಗಿ ಬಂದಿದ್ದರು. ಜನರ ಕಷ್ಟಕ್ಕೆ ನೇರವಾಗಿ ಸ್ಪಂದಿಸುವ ಸಲುವಾಗಿ ಪಿಎಸ್ಐ ಹುದ್ದೆ ಅಯ್ಕೆ ಮಾಡಿಕೊಂಡಿದ್ದಾರೆ. 2016 ರಲ್ಲಿ ಪಿಎಸ್ಐ ಆಗಿ ಶಾಂತಪ್ಪ ಪೊಲೀಸ್ ಇಲಾಖೆ ಸೇರಿದ್ದರು. ಅಶೋಕ್ ನಗರ, ಅನ್ನಪೂಣೇಶ್ವರಿ ನಗರ ಠಾಣೆಯಲ್ಲಿ ಕೆಲಸ ಮಾಡಿದ ಶಾಂತಪ್ಪ ಕೊರೊನಾ ಕಾಲದಲ್ಲೂ ತನ್ನ ಮಾನವೀಯ ಸೇವೆ ಮೂಲಕ ಸುದ್ದಿಯಾಗಿದ್ದರು.

ಜನರ ಕಷ್ಟಕ್ಕೆ ಸ್ಪಂದಿಸಲು ಇಷ್ಟ ಶಾಂತಪ್ಪನಿಗೆ!

ಜನರ ಕಷ್ಟಕ್ಕೆ ಸ್ಪಂದಿಸಲು ಇಷ್ಟ ಶಾಂತಪ್ಪನಿಗೆ!

ಕೊರೊನಾ ಮೊದಲ ಅಲೆಯಲ್ಲಿ ತನ್ನ ಅಪ್ತರು, ಪರಿಚಿತರ ಮೂಲಕ ಸುಮಾರು ಸಾವಿರಾರು ಜನರಿಗೆ ಆಹಾರ ಕಿಟ್ ಗಳನ್ನು ವಿತರಣೆ ಮಾಡಿಸಿದ್ದರು. ಅದರಲ್ಲೂ ಮುಖ್ಯವಾಗಿ ವಲಸೆ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಿ ಶಾಂತಮ್ಮ ಜಡೆಮ್ಮನವರ್ ಸುದ್ದಿಯಾಗಿದ್ದರು. ಆನಂತರ ಕೊರೊನಾ ಕಾಲದಲ್ಲಿ ವಲಸೆ ಕಾರ್ಮಿಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಅತ್ತ ಆನ್‌ಲೈನ್ ಪಾಠವೂ ಇಲ್ಲ, ಆಫ್‌ಲೈನ್ ಪಾಠವೂ ಇರಲಿಲ್ಲ. ಪಿಎಸ್ಐ ಆಗಿ ಠಾಣೆ ಕರ್ತವ್ಯ ಮುಗಿಸಿದ ಬಳಿಕ ಬಿಡುವಿನ ವೇಳೆಯಲ್ಲಿ ವಲಸೆ ಕಾರ್ಮಿಕ ಮಕ್ಕಳಿಗೆ ಉಚಿತ ಪಾಠ ಮಾಡಿದ್ದರು. ಈ ಮೂಲಕ ಸುದ್ದಿಯಾಗಿದ್ದರು. ನನ್ನ ಭಾವ ವಲಸೆ ಕಾರ್ಮಿಕರಾಗಿದ್ದರು. ಅವರ ಕಷ್ಟಗಳನ್ನು ಹತ್ತಿರದಿಂದ ನೋಡಿ ಅನುಭವಿಸಿದ್ದೇನೆ. ವಲಸೆ ಕಾರ್ಮಿಕರ ಮಕ್ಕಳು ವಲಸೆ ಕಾರ್ಮಿಕರು ಆಗಬಾರದು ಎನ್ನುವುದು ನನ್ನ ಭಾವನೆ. ಕೆಲಸ ಮಾಡುವ ಜಾಗದಲ್ಲಿ ವಲಸೆ ಮಕ್ಕಳನ್ನು ನೋಡಿದ್ರೆ ನನ್ನಲ್ಲಿನ ಅಂತಃಕರಣ ಟ್ರಿಗರ್ ಆಗುತ್ತೆ. ಹೀಗಾಗಿ ಅವರಿಗೆ ಬಿಡುವಿನ ವೇಳೆಯಲ್ಲಿ ನಾನು ಪಾಠ ಮಾಡಿದೆ ಎಂದು ತನ್ನ ಬಾಲ್ಯದ ದಿನಗಳನ್ನು ನೆಪಿಸಿಕೊಳ್ಳುತ್ತಾರೆ ಶಾಂತಪ್ಪ. ಇನ್ನು ಸರ್ಕಾರಿ ಸೇವೆಗೆ ಸೇರಲು ಆಸೆ ಪಡುವರಿಗೂ ಮಾರ್ಗದರ್ಶನ ನೀಡಿ ಸಹಾಯ ಮಾಡುತ್ತಿದ್ದಾರೆ.

ಪ್ರತಿಯೊಬ್ಬರಿಗೂ ಸಮಾನ ಆರೋಗ್ಯ, ಶಿಕ್ಷಣ, ಮನೆ, ಊಟ ಅಗತ್ಯ. ಈ ಮೂಲ ಸೌಲಭ್ಯ ಇಲ್ಲದವರನ್ನು ನೋಡಿದಾಗ ಮನಸು ಮಿಡಿಯುತ್ತದೆ. ನಾನು ಯಾವುದೇ ಎನ್‌ಜಿಓ ಮಾಡಲ್ಲ, ಚಾರಿಟಿ ಮಾಡುವ ವೇತನವೂ ನನಗೆ ಬರಲ್ಲ. ನನ್ನ ಕರ್ತವ್ಯದ ಇತಿಮಿತಿಯಲ್ಲಿ ಯಾರಾದ್ರೂ ಸಹಾಯ ಮಾಡಲು ಮುಂದೆ ಬರುವರಿಗೆ ಅಗತ್ಯ ವಸ್ತುವನ್ನು ಅಗತ್ಯ ಇರುವರಿಗೆ ತಲುಪಿಸುವ ವ್ಯಕ್ತಿಯಾಗಿ ಸಣ್ಣ ಅಳಿಲು ಸೇವೆ ಮಾಡುತ್ತೇನೆ. ಬಿಡುವಿನ ಸಮಯವನ್ನು ಇದಕ್ಕೆ ಮೀಸಲಿಟ್ಟಿದ್ದೇನೆ. ಇದೇ ನನಗೆ ಮನರಂಜನೆ, ಇದೇ ನನಗೆ ಖುಷಿ ಎಂದು ಮನದಾಳದ ಮಾತು ಹಂಚಿಕೊಂಡರು ಶಾಂತಪ್ಪ ಜಡೆಮ್ಮನವರ್.

English summary
BENGALURU: A police sub-inspector Shantappa Jadammanavar four-month campaign on social media seeking a public toilet at Goraguntepalya junction succeed in setting up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X