ಪೂರೈಕೆ ಕೊರತೆ; ಏರಿಕೆಯಾಗಲಿದೆ ಅಡುಗೆ ಎಣ್ಣೆ ದರ
ಬೆಂಗಳೂರು, ಏಪ್ರಿಲ್ 13 : ಕೊರೊನಾ ಹರಡದಂತೆ ತಡೆಯಲು 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಕೆಲವೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೆಲವು ವಸ್ತುಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ.
ಲಾಕ್ ಡೌನ್‌ನಿಂದಾಗಿ ಸರಕು ಸಾಗಣೆ ಮಾಡುವ ಲಾರಿಗಳು ಹೆದ್ದಾರಿಯಲ್ಲಿಯೇ ನಿಂತಿವೆ. ಇದರಿಂದಾಗಿ ಅಡುಗೆ ಎಣ್ಣೆಯ ಪೂರೈಕೆ ಕಡಿಮೆಯಾಗುತ್ತಿದೆ. ಮತ್ತೊಂದು ಕಡೆ ವಿದೇಶದಿಂದ ಆಮದು ಆಗಬೇಕಿದ್ದ ಖಾದ್ಯ ತೈಲಗಳ ಪೂರೈಕೆಯಲ್ಲಿಯೂ ವಿಳಂಬವಾಗುತ್ತಿದೆ.
ಸಗಟು ಮಾರಾಟಗಾರರು ಹೇಳುವ ಪ್ರಕಾರ ಕೆಲವು ದಿನಗಳಲ್ಲಿ ಅಡುಗೆ ಎಣ್ಣೆಯ ಬೆಲೆಗಳು ಹೆಚ್ಚಾಗಲಿವೆ. ಈಗಾಗಲೇ ಕೊಬ್ಬರಿ ಎಣ್ಣೆಯ ಕೊರತೆ ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ಅನುಭವಕ್ಕೆ ಬರುತ್ತಿದೆ. ಅಡುಗೆಗೆ ಬಳಕೆ ಮಾಡುವ ಕೊಬ್ಬರಿ ಎಣ್ಣೆ ದೊರೆಯುತ್ತಿಲ್ಲ.

"ಲಾಕ್ ಡೌನ್ ಘೋಷಣೆಯಾದ ಬಳಿಕ ಅಡುಗೆ ಎಣ್ಣೆ ಪೂರೈಕೆಯಾಗಿಲ್ಲ. ಸ್ಟಾಕ್ ಖಾಲಿ ಆಗುವ ತನಕ ಮಾರಾಟ ಮಾಡಬಹುದು. ಒಂದು ವಾರದಿಂದ ಕೊಬ್ಬರಿ ಎಣ್ಣೆ ಸಿಗುತ್ತಿಲ್ಲ" ಎನ್ನುತ್ತಾರೆ ಬೆಂಗಳೂರಿನ ಹನುಮಂತನಗರದಲ್ಲಿ ದಿನಸಿ ಅಂಗಡಿ ಮಾಲೀಕ ರಾಧಾಕೃಷ್ಣ.
ಒಂದು ಅಂದಾಜಿನ ಪ್ರಕಾರ ದೇಶದ ಒಟ್ಟು ಬೇಡಿಕೆಯಲ್ಲಿ ಶೇ 75ರಷ್ಟು ಖಾದ್ಯತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ. ಆದರೆ, ಈಗ ಬೇರೆ-ಬೇರೆ ದೇಶಗಳಲ್ಲಿಯೂ ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಮೊರೆ ಹೋಗಲಾಗಿದೆ.
ಕಳೆದ ಎರಡು ತಿಂಗಳಿನಿಂದ ಅಡುಗೆ ಎಣ್ಣೆಯ ಬೆಲೆಗಳು ಏರಿಕೆಯಾಗುತ್ತಿತ್ತು. ಈಗ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಪೂರೈಕೆಯಾಗುತ್ತಿಲ್ಲ. ಕರ್ನಾಟಕಕ್ಕೆ ಗುಜರಾತ್ ಮತ್ತು ಆಂಧ್ರಪ್ರದೇಶದಿಂದ ಸೂರ್ಯಕಾಂತಿ ಮತ್ತು ಶೇಂಗಾ ಎಣ್ಣೆ ಪೂರೈಕೆಯಾಗುತ್ತದೆ. ಆದರೆ ಅವುಗಳ ಪ್ರಮಾಣ ಕಡಿಮೆ.
ರಾಜ್ಯದಲ್ಲಿ ಲಾಕ್ ಡೌನ್ ಬಳಿಕ ಹಲವು ಹೋಟೆಲ್, ರೆಸ್ಟೋರೆಂಟ್ ಬಂದ್ ಆಗಿವೆ. ಆದ್ದರಿಂದ, ಬೇಡಿಕೆ ಕಡಿಮೆಯಾಗಿದೆ. ತೈಲ ಪೂರೈಕೆ ಮತ್ತಷ್ಟು ವಿಳಂಬವಾದರೆ ದರ ಹೆಚ್ಚಾಗುವುದು ಖಚಿತವಾಗಿದೆ.












Click it and Unblock the Notifications