"ಕರಾವಳಿ ಕೋಮುವಾದದ ಪ್ರಯೋಗ ಶಾಲೆಯ ಬ್ರಾಂಚ್ ಹಳೆ ಮೈಸೂರಿಗೆ!"
ಕರ್ನಾಟಕವು ಮತ್ತೊಮ್ಮೆ ಕೋಮುವಾದದ ಕೆನ್ನಾಲಿಗೆಗೆ ತುತ್ತಾಗಿದೆ. ಕಳೆದ ಒಂದು ವರ್ಷದಿಂದಲೂ ಕೋಮುವಾದದ ಕೆನ್ನಾಲಿಗೆಗೆ ಬೀಳದಂತೆ ಕರ್ನಾಟಕ ಸುರಕ್ಷಿತವಾಗಿತ್ತು. ಆದರೆ ಇದೀಗ ಗಣೇಶೋತ್ಸವದ ಸಂದರ್ಭದಲ್ಲಿ ಕರ್ನಾಟಕಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ಕರ್ನಾಟಕದ ಮಂಡ್ಯದ ಮದ್ದೂರಿನಲ್ಲಿ ಕೋಮುಗಲಭೆ ನಡೆದಿದ್ದು. ದೇಶದಾದ್ಯಂತ ಕರ್ನಾಟಕದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಇಷ್ಟು ವರ್ಷಗಳ ಕಾಲ ಕರಾವಳಿಗೆ ಸಂಬಂಧಿಸಿದ್ದ ಕೋಮುಗಲಭೆ ವಿಷಯವು ಇದೀಗ ಮಂಡ್ಯ - ಹಳೆಯ ಮೈಸೂರು ಭಾಗಕ್ಕೂ ವ್ಯಾಪಿಸಿದೆಯೇ ಎನ್ನುವ ಚರ್ಚೆ ಶುರುವಾಗಿದೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿಯವರು ಕರಾವಳಿಯಲ್ಲಿದ್ದ ತಮ್ಮ ಕೋಮುವಾದದ ಪ್ರಯೋಗ ಶಾಲೆಯ ಬ್ರಾಂಚನ್ನು ಹಳೆ ಮೈಸೂರು ಭಾಗದಲ್ಲೂ ಓಪನ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

- ಉರಿಗೌಡ ನಂಜೇಗೌಡ ಪಾತ್ರಗಳ ಸೃಷ್ಟಿ.
- ಶ್ರೀರಂಗಪಟ್ಟಣದ ಕೋಮು ಸಂಘರ್ಷ,
- ಕೆರೆಗೋಡು ಧ್ವಜ ಗಲಾಟೆ,
- ನಾಗಮಂಗಲ ಗಲಾಟೆ
- ಮದ್ದೂರು ಗಲಾಟೆ.
ಈ ಎಲ್ಲಾ ಘಟನೆಗಳ ಹಿಂದೆ ಬಿಜೆಪಿಯ ರಾಜಕೀಯ ಕಾರ್ಯಸೂಚಿ ಇದೆ, ಕರಾವಳಿಯಲ್ಲಿ ಹಾಕಿದ ವಿಷವನ್ನೇ ಹಳೆ ಮೈಸೂರು ಭಾಗಕ್ಕೂ ಹಾಕಲಾಗುತ್ತಿದೆ. ಬಿಜೆಪಿಯೊಂದಿಗೆ ಜೆಡಿಎಸ್ ಸೈದ್ದಂತಿಕ ಮೈತ್ರಿ ಮಾಡಿಕೊಂಡ ನಂತರ ಕೋಮು ಸಾಮರಸ್ಯಕ್ಕೆ ಹೆಸರಾಗಿದ್ದ ಮಂಡ್ಯ ಸುತ್ತಾ ಮುತ್ತ ಗಲಾಟೆಗಳು ಶುರುವಾಗಿವೆ. ಇದೆಲ್ಲದಕ್ಕೆ ಕಡಿವಾಣ ಹಾಕಲು ನಮ್ಮ ಸರ್ಕಾರ ಶಕ್ತಿಮೀರಿ ಪ್ರಯತ್ನಿಸುತ್ತದೆ. ಸಾಮರಸ್ಯ, ಸಹಬಾಳ್ವೆಯನ್ನು ಸ್ಥಾಪಿಸಲು ಸದಾ ಬದ್ದವಾಗಿದೆ ಎಂದು ಅವರು ಹೇಳಿದ್ದಾರೆ.
ಕೋಮು ಸಂಘರ್ಷಕ್ಕೆ ನಲುಗಿರುವ ಕರಾವಳಿ: ಇನ್ನು ಕೋಮು ಸಂಘರ್ಷಕ್ಕೆ ಕರಾವಳಿಯ ಮೂರು ಜಿಲ್ಲೆಗಳು ಸಹ ನರಳಿವೆ. ಕಳೆದ ಮೂರು ದಶಕದ ಅವಧಿಯಲ್ಲೇ ಕರಾವಳಿಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಂಘರ್ಷ ತಾರಕಕ್ಕೇರಿದೆ. ಈ ಭಾಗದಲ್ಲಿ ಪದೇ ಪದೇ ಕೋಮುಸಂಘರ್ಷ ಸಂಭವಿಸುತ್ತಿದ್ದು ಹಿಂದೂ - ಮುಸ್ಲಿಂ ಸಮುದಾಯದ ನಡುವೆ ವೈಮನಸ್ಸು ಮಾಡುತ್ತಿದೆ.
ಇದೀಗ ಮಂಡ್ಯ - ಹಳೆಯ ಮೈಸೂರು ಭಾಗದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬಿಹಾರ ಮತ್ತು ಉತ್ತರ ಪ್ರದೇಶದ ಪರಿಸ್ಥಿತಿ ಇಲ್ಲೂ ನಿರ್ಮಾಣವಾಗುತ್ತಿದೆ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಈ ರೀತಿಯ ಘಟನೆಗಳು ನಡೆಯುವುದಕ್ಕೆ ಕಾಂಗ್ರೆಸ್ ಸರ್ಕಾರದ ಓಲೈಕೆಯ ರಾಜಕಾರಣವೂ ಕಾರಣ ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಈಚೆಗೆ ಮುಸ್ಲಿಂ ಸಮುದಾಯದ ಬಗ್ಗೆ ಮಾತನಾಡಿದ್ದು ಹಾಗೂ ಬೆಂಗಳೂರಿನ ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೈಂಟ್ ಮೇರಿ ಹೆಸರಿಡಲು ಮನವಿ ಸಲ್ಲಿಸಿರುವುದು ವಿವಾದ ಕಾವನ್ನು ಹೆಚ್ಚಿಸಿವೆ. ಅಲ್ಲದೇ ಮೈಸೂರಿನ ಚಾಮುಂಡೇಶ್ವರಿ ದೇವಿಯ ಬಗ್ಗೆ / ಮೈಸೂರು ಚಾಮುಂಡಿ ಬೆಟ್ಟ ಎಲ್ಲರಿಗೂ ಸೇರಿದ್ದು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದು ಸಹ ವಿವಾದಕ್ಕೆ ಕಾರಣವಾಗಿತ್ತು.












Click it and Unblock the Notifications