ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುತ್ತಿಗೆದಾರರ ವಾರ್: ಲೋಕಾಯುಕ್ತಕ್ಕೆ ದೂರು ಕೊಡಿ ಎಂದ ಸಿಎಂ- ಅಧಿವೇಶನಕ್ಕೆ ಸಿದ್ದು ಆಗ್ರಹ

|
Google Oneindia Kannada News

ಬೆಂಗಳೂರು, ಆಗಸ್ಟ್ 25 : ಯಾವುದೇ ವಿಷಯದಲ್ಲಿ ನಿರ್ದಿಷ್ಟವಾದ ವಿವರಗಳಿದ್ದಲ್ಲಿ ಗುತ್ತಿಗೆದಾರರು ಲೋಕಾಯುಕ್ತಕ್ಕೆ ದೂರು ಸಲ್ಲಿಸಬಹುದು. ಪುರಾವೆಗಳಿಲ್ಲದ ಆಧಾರರಹಿತವಾದ ಹೇಳಿಕೆಗಳು ಉದ್ದೇಶಪೂರ್ವಕ ಹೇಳಿಕೆಗಳಾಗುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗುತ್ತಿಗೆದಾರರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಂತರ ಆರೋಪ ಮಾಡಿರುವುದನ್ನು ಇಲ್ಲಿ ಗಮನಿಸಬಹುದು. ಕಳೆದ ಬಾರಿ ಸಂಘದವರು ಹೇಳಿದಂತೆ ಆದೇಶಗಳನ್ನು ಮಾಡಲಾಗಿತ್ತು. ನಿವೃತ್ತ ನ್ಯಾಯಾಧೀಶರ ನೇತೃತ್ವದ ಟೆಂಡರ್ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ. ಅವರು ಕೇವಲ ಸಾಮಾನ್ಯ ಹೇಳಿಕೆ ನೀಡುವುದು ಜವಾಬ್ದಾರಿಯುತ ಹೇಳಿಕೆಯಾಗುವುದಿಲ್ಲ. ನಿರ್ದಿಷ್ಟವಾದ ವಿವರಗಳಿದ್ದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲು ಸಲಹೆ ನೀಡಿದ ಮುಖ್ಯಮಂತ್ರಿಗಳು ಲೋಕಾಯುಕ್ತಕ್ಕೆ ಸಂಪೂರ್ಣ ಸ್ವಾತಂತ್ರ್ಯವಿದ್ದು, ತನಿಖೆ ನಡೆಸುತ್ತದೆ. ಯಾರೇ ತಪ್ಪು ಎಸಗಿದ್ದರೂ ಅವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದರು.

ಗುತ್ತಿಗೆದಾರರು ಈ ಬಗ್ಗೆ ಪ್ರಧಾನಮಂತ್ರಿಗಳಿಗೆ ದೂರು ಸಲ್ಲಿಸಲಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಈ ದೇಶದ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯುವ ಅಧಿಕಾರ ಎಲ್ಲರಿಗೂ ಇದೆ. ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹಿಸುವ ವ್ಯವಸ್ಥೆಯಿದೆ. ಕೋರ್ಟಿನ ಆದೇಶದ ನಂತರ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರವಿದ್ದು, ನಿರ್ದಿಷ್ಟ ದೂರು ನೀಡಿದ್ದಲ್ಲಿ ತನಿಖೆಯಾಗುತ್ತದೆ ಎಂದರು.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ನೇತೃತ್ವದ ತಂಡ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಭೇಟಿ ಮಾಡಿ ಚರ್ಚಿಸಿತ್ತು. ಬಳಿಕ ಸಿದ್ದರಾಮಯ್ಯ ಅವರು ಮಾಧ್ಯಮ ಗೋಷ್ಠಿ ನಡೆಸಿದ್ದರು.

ಅನುಮೋದನೆಗೆ ಮೊದಲೇ 30 ರಿಂದ 40% ಲಂಚ ಕೊಡಬೇಕು

ಅನುಮೋದನೆಗೆ ಮೊದಲೇ 30 ರಿಂದ 40% ಲಂಚ ಕೊಡಬೇಕು

ನಾನು ವಿರೋಧ ಪಕ್ಷದ ನಾಯಕನಾದ ನಂತರ ಮೊದಲ ಬಾರಿಗೆ ಇಂದು ಕೆಂಪಣ್ಣನವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಅವರು ಪ್ರಧಾನಿಗಳಿಗೆ ಬರೆದ ಪತ್ರವನ್ನು ನೋಡಿದ್ದೆ, ಒಮ್ಮೆ ರಾಜ್ಯ ಗುತ್ತಿಗೆದಾರರ ಸಂಘದ 20-25 ಜನ ಪದಾಧಿಕಾರಿಗಳು ಬಂದು ನನ್ನನ್ನು ಭೇಟಿಯಾಗಿ ಮನವಿ ಪತ್ರ ನೀಡಿದ್ದರು. ಅರಣ್ಯ ಗುತ್ತಿಗೆದಾರರ ಸಂಘದವರು ಬಂದು ಮನವಿ ಪತ್ರ ನೀಡಿದ್ದಾರೆ. ಅವರ ಆಗ್ರಹ ಏನೆಂದರೆ ಸರ್ಕಾರ ಏಪ್ರಿಲ್‌ ತಿಂಗಳಿನಲ್ಲಿ ನಮ್ಮನ್ನು ಮಾತುಕತೆಗೆ ಕರೆದಿತ್ತು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಇಷ್ಟು ಸಮಯ ಆದರೂ ಈ ವರೆಗೆ ಯಾವ ಕ್ರಮ ಕೈಗೊಂಡಿಲ್ಲ. ಈ ವಿಚಾರವನ್ನು ತಾವು ವಿಧಾನಸಭೆಯಲ್ಲಿ ಒತ್ತಾಯ ಮಾಡಬೇಕು ಎಂದು ನನಗೆ ಮನವಿ ಮಾಡಿದ್ದರು. ಟೆಂಡರ್‌ ಅನುಮೋದನೆಗೆ ಮೊದಲೇ 30 ರಿಂದ 40% ಲಂಚ ಕೊಡಬೇಕಾಗಿದೆ. ಪ್ರಧಾನಿಗಳಿಗೆ ಪತ್ರ ಬರೆದು ಒಂದು ವರ್ಷ ಆದರೂ ಅವರೂ ಯಾವ ಕ್ರಮ ಕೈಗೊಂಡಿಲ್ಲ. ನಾವು ನ್ಯಾಯಾಂಗ ತನಿಖೆ ನಡೆಸುವುದಾದರೆ ದಾಖಲಾತಿ ಕೊಡಲು ತಯಾರಾಗಿದ್ದೇವೆ, ಒಂದು ವೇಳೆ ನಮ್ಮಿಂದ ಇದನ್ನು ಸಾಬೀತು ಮಾಡಲು ಆಗದೆ ಹೋದರೆ ಯಾವುದೇ ರೀತಿಯ ಕಾನೂನು ಕ್ರಮ ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ನಾನು ಕೂಡ ಹೈಕೋರ್ಟ್‌ ನ ಹಾಲಿ ನ್ಯಾಯಾಧೀಶ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ಮಾಡಿ ಎಂದು ಒತ್ತಾಯ ಮಾಡಿದ್ದೆ. ಸರ್ಕಾರ ಇದಕ್ಕೆ ಒಪ್ಪುತ್ತಾ ಇಲ್ಲ.

ಬಿಬಿಎಂಪಿಯಿಂದ 22,000 ಕೋಟಿಗೂ ಅಧಿಕ ಹಣ ಬಿಡುಗಡೆಯಾಗಬೇಕಿದೆ

ಬಿಬಿಎಂಪಿಯಿಂದ 22,000 ಕೋಟಿಗೂ ಅಧಿಕ ಹಣ ಬಿಡುಗಡೆಯಾಗಬೇಕಿದೆ

ಭ್ರಷ್ಟಾಚಾರ ಎಲ್ಲಾ ಕಾಲದಲ್ಲೂ ಆಮೆ ವೇಗದಲ್ಲಿ ಇತ್ತು, ಈಗ ಶರವೇಗದಲ್ಲಿ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದವರು ಹೇಳಿದ್ದಾರೆ. ಗುತ್ತಿಗೆದಾರರಿಗೆ ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ಬಿಬಿಎಂಪಿ ಇಂದ ಸುಮಾರು 22,000 ಕೋಟಿಗೂ ಅಧಿಕ ಹಣ ಬಿಡುಗಡೆಯಾಗಬೇಕಿದೆಯಂತೆ. ಈ ಬೃಹತ್‌ ಬಾಕಿ ಮೊತ್ತವನ್ನು ಆದ್ಯತೆ ಮೇಲೆ ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಇನ್ನೊಂದು ವಿಚಾರವೆಂದರೆ ಅನುದಾನ ಮೀಸಲಿಡದೆ ಟೆಂಡರ್‌ ಕರೆಯುತ್ತಾರೆ, ಇದರಿಂದ ಕಾಮಗಾರಿ ಹಣ ಬಿಡುಗಡೆ ಆಗುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಒಟ್ಟಾರೆ ಗುತ್ತಿಗೆದಾರರು ಸಾಕಷ್ಟು ಬೇಸರಗೊಂಡಿದ್ದಾರೆ. ಇಂಥಾ ಭ್ರಷ್ಟ ಸರ್ಕಾರ ಯಾವ ಕಾಲದಲ್ಲೂ ಇರಲಿಲ್ಲ ಎಂಬುದು ಅವರ ಅಳಲು. ನ್ಯಾಯಾಂಗ ತನಿಖೆಗೆ ನಡೆಸಿದರೆ ಸೂಕ್ತ ದಾಖಲೆ ತನಿಖೆಗೆ ನೀಡುವುದಾಗಿ ಹೇಳಿದ್ದಾರೆ. ಸರ್ಕಾರ ನ್ಯಾಯಾಂಗ ತನಿಖೆ ಮಾಡಲಿ. ಆದರೆ ಇದನ್ನು ಸರ್ಕಾರ ಮಾಡಲು ಒಪ್ಪುತ್ತಿಲ್ಲ, ಇದರರ್ಥ ಭ್ರಷ್ಟಾಚಾರ ಮಾಡಿರುವುದನ್ನು ಒಪ್ಪಿಕೊಂಡಂತೆ ಅಲ್ಲವಾ? ಸರ್ಕಾರ ಪ್ರಾಮಾಣಿಕವಾಗಿದ್ದರೆ ನ್ಯಾಯಾಂಗ ತನಿಖೆ ನಡೆಸಲಿ.

ನಾವು ಸರ್ಕಾರದ ಮೇಲೆ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಡ ಹಾಕುತ್ತೇವೆ. ಒಂದು ವೇಳೆ ಸರ್ಕಾರ ನಮ್ಮ ಆಗ್ರಹಕ್ಕೆ ಬೆಲೆ ಕೊಡದೆ ಹೋದರೆ ಈ ವಿಚಾರವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ.

ನ್ಯಾಯಾಂಗ ತನಿಖೆ ನಡೆಸಬೇಕು

ನ್ಯಾಯಾಂಗ ತನಿಖೆ ನಡೆಸಬೇಕು

ಸರ್ಕಾರ ಯಾವ ಭ್ರಷ್ಟಾಚಾರ ಮಾಡಿಲ್ಲ ಎಂದು ಹೇಳುತ್ತಿದೆ. ಗುತ್ತಿಗೆದಾರರ ಸಂಘದವರು ಸರ್ಕಾರದ ಭ್ರಷ್ಟಾಚಾರವನ್ನು ಸಾಬೀತು ಮಾಡುತ್ತೇವೆ, ಒಂದು ವೇಳೆ ನಾವು ಸಾಬೀತು ಮಾಡಲು ಆಗಿಲ್ಲ ಎಂದರೆ ನಮ್ಮ ಮೇಲೆ ಕಾನೂನು ಕ್ರಮ ಜರುಗಿಸಿ, ನಾವು ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಇರುವ ಸಮಸ್ಯೆಯೇನು?

ವಿರೋಧ ಪಕ್ಷದ ನಾಯಕನಾಗಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ, ಸರ್ಕಾರ ನಮ್ಮ ಮಾತನ್ನು ಕೇಳದೆ ಇದೇ ರೀತಿ ಭಂಡತನ ಪ್ರದರ್ಶಿಸುವುದಾದರೆ ಜನ ತೀರ್ಮಾನ ಮಾಡುತ್ತಾರೆ. ಕೆಂಪಣ್ಣನವರು ಪ್ರಧಾನಿಗೆ ಮತ್ತೊಮ್ಮೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

ಮುನಿರತ್ನ ಅವರ ಹೆಸರು ಪ್ರಸ್ತಾಪ ಮಾಡಿದ್ದಾರೆ, ಇದರ ಜೊತೆಗೆ ನೀರಾವರಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆ,, ಬೆಂಗಳೂರು ನಗರಾಭಿವೃದ್ಧಿ ಇಲಾಖೆಗಳಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ನರೇಂದ್ರ ಮೋದಿ ಅವರು ಚುನಾವಣಾ ಭಾಷಣದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ 10% ಕಮಿಷನ್‌ ಸರ್ಕಾರ ಎಂದು ಆರೋಪ ಮಾಡಿದಾಗ ಎಲ್ಲರೂ ಅದಕ್ಕೆ ಪ್ರಚಾರ ನೀಡಿದರು, ಯಾರು ಅವರ ಬಳಿ ದಾಖಲೆ ಕೇಳಿಲ್ಲ. ಈಗ ಗುತ್ತಿಗೆದಾರರ ಸಂಘದವರು ಸರ್ಕಾರದ ಭ್ರಷ್ಟಾಚಾರವನ್ನು ಸಾಬೀತು ಮಾಡಲು ಸಿದ್ಧರಿದ್ದಾರೆ. ತನಿಖೆ ಆಗಬೇಕೋ ಬೇಡವೋ?

ಈ ಸರ್ಕಾರದ 40% ಕಮಿಷನ್‌ ವಿಚಾರವನ್ನು ಮಾತ್ರ ಚುನಾವಣೆಯಲ್ಲಿ ಜನರ ಬಳಿ ತೆಗೆದುಕೊಂಡು ಹೋಗುವುದಲ್ಲ, ರಾಜ್ಯದಲ್ಲಿ ಇದರ ಜೊತೆಗೆ ಇನ್ನೂ ಹಲವು ಗಂಭೀರ ಸಮಸ್ಯೆಗಳಿವೆ. ಮಹಿಳೆಯರು, ಮಕ್ಕಳು, ರೈತರು, ಯುವಜನರು ಎದುರಿಸುತ್ತಿರುವ ಹಲವು ಸಮಸ್ಯೆಗಳು ಇವೆ ಅವೆಲ್ಲವನ್ನೂ ಜನರ ಮುಂದಿಡುತ್ತೇವೆ.

ಸರ್ಕಾರಕ್ಕೆ ಅಧಿವೇಶನ ಕರೆಯದೆ ಬೇರೆ ದಾರಿ ಇಲ್ಲ

ಸರ್ಕಾರಕ್ಕೆ ಅಧಿವೇಶನ ಕರೆಯದೆ ಬೇರೆ ದಾರಿ ಇಲ್ಲ

ಬಿಜೆಪಿ ನಾಯಕರು ತಮ್ಮ ಭ್ರಷ್ಟಾಚಾರವನ್ನು ಯಾವ ರೀತಿ ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂಬುದು ಮುಖ್ಯವಲ್ಲ. ಬಿಜೆಪಿ ಆರೋಪಿ ಸ್ಥಾನದಲ್ಲಿರುವ ಪಕ್ಷ. ಅವರ ಹೇಳಿಕೆಗಳಿಗೆ ಬೆಲೆ ಕೊಡುವ ಅಗತ್ಯವಿಲ್ಲ.

ಮುಖ್ಯಮಂತ್ರಿಗಳು ಗುತ್ತಿಗೆದಾರರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು, ಆದರೆ ಅವರು ಮಾತಿಗೆ ತಪ್ಪಿದ್ದಾರೆ ಅಧಿಕಾರಿಗಳು ಮುಖ್ಯಮಂತ್ರಿಗಳ ಮಾತು ಕೇಳುತ್ತಿಲ್ಲ ಎಂದು ಕೆಂಪಣ್ಣನವರು ಹೇಳಿದ್ದಾರೆ.

ಸೆಪ್ಟಂಬರ್‌ ತಿಂಗಳಲ್ಲಿ ಅಧಿವೇಶನವನ್ನು ಕರೆಯಲೇಬೇಕು. ಸದನ ನಡೆದು 6 ತಿಂಗಳು ಭರ್ತಿ ಆಗುತ್ತದೆ. ಹಾಗಾಗಿ ಸರ್ಕಾರಕ್ಕೆ ಅಧಿವೇಶನ ಕರೆಯದೆ ಬೇರೆ ದಾರಿ ಇಲ್ಲ.

ಬಿಬಿಎಂಪಿ ಗುತ್ತಿಗೆದಾರರು ನಿನ್ನೆ ಪತ್ರಿಕಾಗೋಷ್ಠಿ ಮಾಡಿ ಕಮಿಷನ್‌ 40% ಇಂದ 50% ಗೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ. ಕೆಲವೆಡೆ 100% ಕಮಿಷನ್‌ ವ್ಯವಹಾರ ಕೂಡ ನಡೆಯುತ್ತಿದೆ.

ಲಿಂಗಸೂರು, ದೇವದುರ್ಗದಲ್ಲಿ ಕಾಮಗಾರಿಯನ್ನೇ ಮಾಡದೆ ಬಿಲ್‌ ತೆಗೆದುಕೊಂಡಿದ್ದಾರೆ ಎಂಬ ಆರೋಪ ಇದೆ. ನ್ಯಾಯಾಂಗ ತನಿಖೆ ನಡೆದರೆ ಈ ಎಲ್ಲಾ ವಿಚಾರಗಳು ಹೊರಬರುತ್ತದೆ.

ಅನ್ನಭಾಗ್ಯ ಅಕ್ಕಿ ವಿತರಣೆ ಬಗ್ಗೆ ಉಮೇಶ ಕತ್ತಿ ಅವರು ನೀಡಿರುವ ಹೇಳಿಕೆ ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಕೇಂದ್ರ ಸರ್ಕಾರ ಹೇಳಿದರೆ ಅಕ್ಕಿ ಕೊಡುವುದನ್ನು ನಿಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ, ಅಂದರೆ ಇವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲವೇ?

ಅಪರಾಧಿ ಸ್ಥಾನದಲ್ಲಿರುವವರಿಂದ ಸಲಹೆ ಪಡೆಯಬೇಕೋ ಅಥವಾ ದೂರುದಾರರಿಂದ ಸಲಹೆ ಪಡೆಯಬೇಕೋ? ಸರ್ಕಾರ ಭ್ರಷ್ಟಾಚಾರ ಆರೋಪ ಎದುರಿಸುತ್ತಿದೆ, ಹಾಗಾಗಿ ಸರ್ಕಾರದ ವಿರುದ್ಧ ದೂರು ನೀಡಿದವರು ಏನು ಒತ್ತಾಯ ಮಾಡುತ್ತಿದ್ದಾರೆ ಅದನ್ನು ಮಾಡಿ. ತಪ್ಪಿಸಿಕೊಳ್ಳೋಕೆ ಯಾಕೆ ನೋಡುತ್ತೀರಾ?

ನಿತೀಶ್‌ ಕುಮಾರ್‌ ಬಿಜೆಪಿ ಇಂದ ದೂರಾದ ಮೇಲೆ ಅವರ ಪಕ್ಷದವರ ಮೇಲೆ ಇಡಿ, ಐಟಿ, ಸಿಬಿಐ ದಾಳಿಗಳು ನಡೆಯುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ ಅವರು, ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ, ರಾಜ್ಯದಲ್ಲಿ ಇಷ್ಟೆಲ್ಲಾ ಭ್ರಷ್ಟಾಚಾರ ನಡೆಯುತ್ತಿದ್ದರೂ ಯಾವುದಾದರೂ ಬಿಜೆಪಿ ಮಂತ್ರಿ, ಶಾಸಕರ ಮನೆ ಮೇಲೆ ರೇಡ್‌ ಆಗಿದೆಯಾ? ಎಂದು ಪ್ರಶ್ನಸಿದರು.

English summary
The contractor can file a complaint with the Lokayukta if there are specific details in the matter. Baseless statements without evidence would be deliberate statements. Chief Minister Basavaraja Bommai said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X