Bengaluru 2nd Airport: 2ನೇ ವಿಮಾನ ನಿಲ್ದಾಣ ನಿರ್ಮಾಣದ ಸ್ಥಳದ ಕುರಿತು ಅಪ್ಡೇಟ್ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಫೆಬ್ರವರಿ 12: ಬೆಂಗಳೂರು ಅಭಿವೃದ್ಧಿ ಸಚಿವನಾಗಿ ಹಲವಾರು ಮೂಲ ಸೌಕರ್ಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮುಂದಾಗಿದ್ದೇನೆ. ಟನಲ್ ರಸ್ತೆ ಯೋಜನೆ, ಡಬಲ್ ಡೆಕ್ಕರ್ ಮೆಟ್ರೋ, ಎಲಿವೇಟೆಡ್ ಕಾರಿಡಾರ್, ಬಫರ್ ರಸ್ತೆಗಳ ನಿರ್ಮಾಣ, ಪ್ರವಾಸೋದ್ಯಮ ಅಭಿವೃದ್ಧಿವೆ 500 ಕೋಟಿ ವೆಚ್ಚದಲ್ಲಿ ಸ್ಕೈ ಡೆಕ್, ಬೆಂಗಳೂರು ಬಿಜಿನೆಸ್ ಕಾರಿಡಾರ್ ನಿರ್ಮಾಣ. ಇನ್ನೇನು ಕೆಲವೇ ದಿನದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಜಾಗವನ್ನು ಘೋಷಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಕರ್ನಾಟಕದ ಹೊಸ ಕೈಗಾರಿಕಾ ನೀತಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಆಲೋಚನೆ ಸರ್ಕಾರದ ಮುಂದಿದೆ. ಸಂಶೋಧನಾ ಕೇಂದ್ರಗಳಿಗೆ ಉತ್ತೇಜನ, ಕರ್ನಾಟಕವನ್ನು ಜ್ಞಾನ ರಾಜಧಾನಿಯನ್ನಾಗಿ ಮಾಡುವುದು ನಮ್ಮ ಉದ್ದೇಶ. ನಾವು ಇಂದು ಏನು ಮಾಡುತ್ತೇವೆ ಎಂಬುದರ ಮೇಲೆ ಭವಿಷ್ಯವು ಅವಲಂಬಿತವಾಗಿದೆ" ಎಂದು ಮಹಾತ್ಮ ಗಾಂಧಿಯವರು ಹೇಳಿದ್ದರು. ಇಂದು ನಾವು ನಮ್ಮ ಭವಿಷ್ಯ ಮಾತ್ರವಲ್ಲದೆ ಭವಿಷ್ಯದ ಪೀಳಿಗೆಯನ್ನು ರೂಪಿಸುವುದಕ್ಕಾಗಿ ಸೇರಿದ್ದೇವೆ ಎಂದರು.

ಪ್ರಪಂಚದ ಹಲವಾರು ಭಾಗಗಳಿಂದ ಅನೇಕ ಕನಸುಗಳನ್ನು ಹೊತ್ತು ಜನರು ಬೆಂಗಳೂರಿಗೆ ಬರುತ್ತಾರೆ. ಸಾಂಸ್ಕೃತಿಕ, ಆಧ್ಯಾತ್ಮಿಕ, ಐತಿಹಾಸಿಕವಾಗಿ ನಮ್ಮ ರಾಜ್ಯ ರಾಜಧಾನಿ ಶ್ರೀಮಂತವಾಗಿದೆ. ಈ ಸಮಾವೇಶದ ಮೂಲಕ ಕರ್ನಾಟಕಕ್ಕೆ ಎಲ್ಲಾ ಹೂಡಿಕೆದಾರರನ್ನು ಸ್ವಾಗತ ಮಾಡುತ್ತೇನೆ ಮತ್ತು ಉತ್ತಮ ಭವಿಷ್ಯವನ್ನು ನನಸಾಗಿಸಲು ನಾವು ಹೆಜ್ಜೆ ಇಡೋಣ ಎಂದು ಹೇಳಿದರು. ಕರ್ನಾಟಕವು ವಿಶ್ವ ದರ್ಜೆಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಬೆಂಗಳೂರು ನಗರವು ಉತ್ತಮ ಮಾನವ ಸಂಪನ್ಮೂಲವನ್ನು ಹೊಂದಿದೆ. ಅಲ್ಲಿ ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳು, ಎಂಜಿನಿಯರಿಂಗ್ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು, ಪ್ಯಾರಾ ಮೆಡಿಕಲ್‌ಗಳು, ಎಂಬಿಎ ಮತ್ತು ಕಾನೂನು ಕಾಲೇಜುಗಳಿವೆ. ವಿಶ್ವದ ಯಾವುದೇ ನಗರದಲ್ಲೂ ಇಷ್ಟರ ಮಟ್ಟಿಗೆ ಶಿಕ್ಷಣ ಸಂಸ್ಥೆಗಳು ಕಂಡು ಬರುವುದಿಲ್ಲ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ -2 ವಿಶ್ವದ ಅತ್ಯುತ್ತಮ ಹೊಸ ಟರ್ಮಿನಲ್. ಇದರ ಮೂಲಕ ವರ್ಷಕ್ಕೆ 40 ಮಿಲಿಯನ್ ಗಿಂತಲೂ ಹೆಚ್ಚು ಪ್ರಯಾಣಿಕರನ್ನು ನಿಭಾಯಿಸಲಾಗುತ್ತಿದೆ. ವಸತಿ ಉದ್ದಿಮೆ ಮೇಲೆ ಹೆಚ್ಚು ಹೂಡಿಕೆ ಮಾಡಬಹುದಾದ ಪ್ರದೇಶ ಬೆಂಗಳೂರು. ಶೇ. 25 ರಷ್ಟು ಹೂಡಿಕೆ ಕಚೇರಿ ಸ್ಥಳಗಳಿಗೆ ಮೀಸಲಾಗಿದೆ ಎಂದು ಅಂಕಿಅಂಶಗಳು ಹೇಳುತ್ತವೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಇಂದು ಹಲವಾರು ಉದ್ದಿಮೆದಾರರು ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಒಡಂಬಡಿಕೆ ಮಾಡಿಕೊಂಡರು. ಈಗಾಗಲೇ ನಮ್ಮಲ್ಲಿ 20ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಶಾಲೆಗಳು, ಟೆಕ್ ಪಾರ್ಕ್ ಗಳು, 50ಕ್ಕೂ ಹೆಚ್ಚು ಫೈವ್ ಸ್ಟಾರ್ ಹೋಟೆಲ್‌ಗಳು, ಭಾರತದ ಪಬ್ ರಾಜಧಾನಿ ಎಂದು ಬೆಂಗಳೂರನ್ನು ಈ ಸಂದರ್ಭದಲ್ಲಿ ನಾನು ಕರೆಯುತ್ತೇನೆ. ನೀವು ನಿಮ್ಮ ಸಿಎಸ್ಆರ್ ನಿಧಿಯನ್ನು ಶಿಕ್ಷಣಕ್ಕೆ ನೀಡಿ. ಪ್ರಾರ್ಥಮಿಕ ಶಿಕ್ಷಣಕ್ಕಾಗಿ ನೀವು ಹಣ ನೀಡಿದರೆ ನಾವು ಭೂಮಿಯನ್ನು ನೀಡುತ್ತೇವೆ. ಅಲ್ಲಿ ಹೊಸದಾಗಿ ಶಾಲೆಗಳನ್ನು ನಿರ್ಮಾಣ ಮಾಡಬಹುದು. ಕರ್ನಾಟಕವನ್ನು ಇನ್ನಷ್ಟು ಶೈಕ್ಷಣಿಕವಾಗಿ ಸಬಲಗೊಳಿಸಲು ನಿಮ್ಮ ಸಹಕಾರ ಅಗತ್ಯ ಎಂದರು.
ಕೈಗಾರಿಕಾ ಸಚಿವರಾದ ಎಂ ಬಿ ಪಾಟೀಲ್, ಐಟಿ ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ, ಇಂಧನ ಸಚಿವರಾದ ಕೆಜೆ ಜಾರ್ಜ್ ಅವರು ಇಲ್ಲಿ ಉಪಸ್ಥಿತರಿದ್ದು ನನ್ನ ಪ್ರಕಾರ ಸುಮಾರು 10 ಲಕ್ಷ ಕೋಟಿ ಬಂಡವಾಳ ಹರಿವಿನ ನಿರೀಕ್ಷೆಯಿದೆ. ಹೆಚ್ಚಿನ ಮೌಲ್ಯದ ಉದ್ಯೋಗಗಳನ್ನು ಸೃಷ್ಟಿಸುವುದು, ಪೂರೈಕೆ ಸರಪಳಿಗಳನ್ನು ಬಲಪಡಿಸಿ, ತಂತ್ರಜ್ಞಾನ ಆಧಾರಿತ ಉದ್ಯಮಗಳನ್ನು ಸಕ್ರಿಯಗೊಳಿಸುವುದು ನಮ್ಮ ಸರ್ಕಾರದ ಮುಂದಿರುವ ಗುರಿ ಎಂದು ತಿಳಿಸಿದರು.
ಕೇಂದ್ರ ಸಚಿವರು ಇಂದು ನಮ್ಮ ರಾಜ್ಯಕ್ಕೆ ಈ ಹಿಂದೆ ನೀಡುತ್ತಿದ್ದಂತೆ ಹೆಚ್ಚಿನ ಸಹಕಾರ ನೀಡುವ ಭರವಸೆ ಕೊಟ್ಟು ಹೋಗಬೇಕು. ಸಚಿವರು ಬೆಂಗಳೂರಿನಲ್ಲಿ ಭಾರತ ಮಂಟಪ ಎಂಬ ಅತ್ಯುತ್ತಮ ಅಂತಾರಾಷ್ಟ್ರೀಯ ಕೇಂದ್ರ ಸ್ಥಾಪಿಸೋಣ ಅದಕ್ಕಾಗಿ ಒಳ್ಳೆಯ ಜಾಗ ನೋಡಿ ಎಂದು ನನ್ನ ಕಿವಿಯಲ್ಲಿ ಹೇಳುತ್ತಿದ್ದರು. ಈ ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು












Click it and Unblock the Notifications