ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬರುತ್ತಾರೆಯೇ ಹೊರತು ಕಾಂಗ್ರೆಸ್‌ನಿಂದ ಯಾರೂ ಹೋಗಲ್ಲ: ಸಿದ್ದರಾಮಯ್ಯ

|
Google Oneindia Kannada News

ಬೆಳಗಾವಿ, ನವೆಂಬರ್ 8: ಸಿಎಂ ಇಬ್ರಾಹಿಂ ಅವರು ಬರೀ ಸುಳ್ಳು ಹೇಳುತ್ತಾರೆ, ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬರುತ್ತಾರೆಯೇ ಹೊರತು ಕಾಂಗ್ರೆಸ್‌ನಿಂದ ಯಾರೂ ಜೆಡಿಎಸ್‌ಗೆ ಹೋಗಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಬೆಳಗಾವಿಯಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಯಾರಾದ್ರೂ ರಾತ್ರಿ ಕಂಡ ಬಾವಿಗೆ ಹಗಲು ಹೊತ್ತು ಹೋಗಿ ಬೀಳುತ್ತಾರಾ? ಎಂದಾದರೂ ಜೆಡಿಎಸ್‌ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದೆಯಾ? ನಾನು ಜೆಡಿಎಸ್‌ ಪಕ್ಷದ ಅಧ್ಯಕ್ಷನಾಗಿದ್ದಾಗ ಮೊದಲ ಬಾರಿ 59 ಸೀಟುಗಳನ್ನು ಗೆದ್ದಿತ್ತು. ಅದಾದ ನಂತರ ಇದಕ್ಕಿಂತ ಕಡಿಮೆ ಸೀಟುಗಳನ್ನು ಅವರು ಗೆದ್ದಿದ್ದಾರೆಯೇ ಹೊರತು ಹೆಚ್ಚಾಗಿಲ್ಲ.

ಕಳೆದ ಬಾರಿ 37 ಸ್ಥಾನ ಗೆದ್ದರು, ಇದೇ ಬಹುಮತ ಪಡೆಯಲು ಬೇಕಾದ 113 ಸ್ಥಾನಗಳನ್ನು ಗೆದ್ದಂತೆಯಾ? ಜನರನ್ನು ತಾವು ಅಧಿಕಾರಕ್ಕೆ ಬರುತ್ತೇವೆ ಎಂದು ನಂಬಿಸಲು ಜೆಡಿಎಸ್‌ನವರು ಸುಳ್ಳು ಸುಳ್ಳು ಹೇಳುತ್ತಾರೆ, ಮುಂದಿನ ಚುನಾವಣೆಯಲ್ಲಿ ನಾವು 130 ರಿಂದ 150 ಸ್ಥಾನಗಳನ್ನು ಗೆಲ್ಲುತ್ತೇವೆ, ಹೀಗಿದ್ದಾಗ ಮೈತ್ರಿ ಮಾಡಿಕೊಳ್ಳುವ ಅವಶ್ಯಕತೆ ಎಲ್ಲಿ ಬರುತ್ತೆ ಎಂದು ಪ್ರಶ್ನಿಸಿದರು.

 ಬಿಜೆಪಿ ಅವರದ್ದು ಸುಳ್ಳು ಹೇಳುವುದೇ ಸಾಧನೆ

ಬಿಜೆಪಿ ಅವರದ್ದು ಸುಳ್ಳು ಹೇಳುವುದೇ ಸಾಧನೆ

ಈಗಿನ ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಅವರು. ಚುನಾವಣೆ ಮೂಲಕ ಅವರು ಆಯ್ಕೆಯಾದದ್ದು. ಬಿಜೆಪಿಯಲ್ಲಿ ಎಂದಾದರೂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ಯಾ? ಅವರಿಂದ ನಾವು ಪಾಠ ಹೇಳಿಸಿಕೊಳ್ಳಬೇಕಾ? ಬಿಜೆಪಿ ಅವರದ್ದು ಸುಳ್ಳು ಹೇಳುವುದೇ ಸಾಧನೆ. ಅಮಿತ್‌ ಶಾ, ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ಎಲ್ಲರೂ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಬಸವರಾಜ ಬೊಮ್ಮಾಯಿ ಅವರು ಸಂಗೊಳ್ಳಿ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ತಾವೆ, ಕಾಗಿನೆಲೆ ಅಭಿವೃದ್ಧಿ ಮಾಡಿದ್ದು ತಾವೆ ಎಂದು ಸುಳ್ಳು ಹೇಳಲಿಲ್ವಾ? ಶಿಗ್ಗಾವಿ ಕ್ಷೇತ್ರದಲ್ಲಿ ಅದು ಬರುತ್ತದೆ ಅಷ್ಟೆ, ಹಾಗಂತ ಎಲ್ಲವನ್ನೂ ನಾನೇ ಮಾಡಿದೆ ಅಂದ್ರೆ ಆಗುತ್ತಾ? ಎಂದರು.

 ರಾಕ್‌ ಗಾರ್ಡನ್‌ ಮಾಡಲು ಯೋಜನೆ

ರಾಕ್‌ ಗಾರ್ಡನ್‌ ಮಾಡಲು ಯೋಜನೆ

ಸಂಗೊಳ್ಳಿಯಲ್ಲಿ 70 ರಿಂದ 75% ಅಭಿವೃದ್ಧಿ ಕೆಲಸಗಳು ಮುಗಿದಿದೆ, 2016-17ರಲ್ಲಿ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ರಚನೆ ಮಾಡಲಾಯಿತು, ಅದರ ಅಧ್ಯಕ್ಷರಾಗಿ ಮುಖ್ಯಮಂತ್ರಿಗಳೇ ಇರುತ್ತಾರೆ. ಅಂದು ನಾನು ಈ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ 267 ಕೋಟಿ 93 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದೆ. ಅಂದಾಜು ಸುಮಾರು 100 ಎಕರೆ ಜಮೀನನ್ನು ಪ್ರಾಧಿಕಾರಕ್ಕೆ ನೀಡಿದ್ದೆ, ಇದರ ಜೊತೆಗೆ ರಾಕ್‌ ಗಾರ್ಡನ್‌ ಮಾಡಲು ಯೋಜನೆ ರೂಪಿಸಲಾಗಿತ್ತು. 2018ರ ಮೇ ತಿಂಗಳಿನಲ್ಲಿ ನಮ್ಮ ಅಧಿಕಾರಾವಧಿ ಕೊನೆಗೊಳ್ಳುವ ಮೊದಲು ಟೆಂಡರ್‌ ಕರೆದು, ಆಡಳಿತಾತ್ಮಕ ಮತ್ತು ಆರ್ಥಿಕ ಅನುಮೋದನೆಯನ್ನು ನೀಡಲಾಗಿತ್ತು.

ಇದರಡಿ ಒಂದು ಸೈನಿಕ ಶಾಲೆ ಮತ್ತು ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಗಳು, ರಾಯಣ್ಣನನ್ನು ನೇಣಿಗೇರಿಸಿದ ಜಾಗ ಮತ್ತು ಕೆರೆ ಅಭಿವೃದ್ಧಿ ಮುಂತಾದವುಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು ನಮ್ಮ ಸರ್ಕಾರ. ಇದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು ಕೂಡ ನಾನು. ಆ ನಂತರ ಮತ್ತೆ ನಮ್ಮ ಸರ್ಕಾರ ಬರಲಿಲ್ಲ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಬಿಜೆಪಿಯವರು ಕಾಲಕ್ಕೆ ತಕ್ಕಂತೆ ಹಣ ಬಿಡುಗಡೆ ಮಾಡಿದ್ದರೆ ಕಾಮಗಾರಿ ಇಷ್ಟು ವಿಳಂಬವಾಗುತ್ತಿರಲಿಲ್ಲ.

ಎರಡು ವರ್ಷದಲ್ಲಿ ಮುಗಿಯಬೇಕಾದ ಕೆಲಸ ಇಷ್ಟು ವಿಳಂಬವಾಗಲು ಬಿಜೆಪಿಯವರ ನಿರಾಸಕ್ತಿ ಕಾರಣ. ಬಸವರಾಜ ಬೊಮ್ಮಾಯಿ ಅವರು ಸಂಗೊಳ್ಳಿ ಅಭಿವೃದ್ಧಿ ಮಾಡಿದ್ದು ತಾವೇ ಎಂದು ಹೇಳುವುದು ಶುದ್ಧ ಸುಳ್ಳು. ಇವೆಲ್ಲವುಗಳಿಗೆ ಅನುಮೋದನೆ ನೀಡಿ, ಕೆಲಸ ಆರಂಭ ಆಗಿದ್ದು ನಮ್ಮ ಸರ್ಕಾರದ ಅವಧಿಯಲ್ಲಿ. ಪ್ರಾಧಿಕಾರಕ್ಕೆ ನೂರು ಎಕರೆ ಜಮೀನು ನೀಡಿದ್ದು, ರಾಕ್‌ ಗಾರ್ಡನ್‌ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದು ನಮ್ಮ ಸರ್ಕಾರ.

 ಒಟ್ಟು 55 ಕೋಟಿ ಹಣ ಬಿಡುಗಡೆಯಾಗಬೇಕಿದೆ

ಒಟ್ಟು 55 ಕೋಟಿ ಹಣ ಬಿಡುಗಡೆಯಾಗಬೇಕಿದೆ

ಸೆಪ್ಟಂಬರ್‌ ತಿಂಗಳಿನಿಂದಲೇ ಸೈನಿಕ ಶಾಲೆ ಆರಂಭವಾಗಿ ಮೊದಲ ಬ್ಯಾಚ್‌ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೆ ಸುಮಾರು ಇನ್ನು ಹೆಚ್ಚುವರಿ ಮತ್ತು ಖರ್ಚಾಗದ ಹಣ ಸೇರಿದಂತೆ ಒಟ್ಟು 55 ಕೋಟಿ ಹಣ ಬಿಡುಗಡೆಯಾಗಬೇಕಿದೆ. ಈ ಹೆಚ್ಚುವರಿ ಮೊತ್ತಕ್ಕೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ ಬಿಡುಗಡೆ ಮಾಡುವಂತೆ ಹೇಳಿದ್ದೆ, ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ, ಇದರ ಜೊತೆಗೆ ಆರ್ಥಿಕ ಇಲಾಖೆಯು ಸಮ್ಮತಿ ನೀಡಿದೆ. ಈ ಎಲ್ಲಾ ಕಟ್ಟಡಗಳು 2023ರ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಮುಕ್ತಾಯವಾಗುತ್ತದೆ.

ಸಂಗೊಳ್ಳಿ ರಾಯಣ್ಣ ಒಬ್ಬ ಮಹಾನ್‌ ದೇಶಭಕ್ತ. ಕಿತ್ತೂರು ಸಂಸ್ಥಾನದವರು ಮೊದಲ ಯುದ್ಧದಲ್ಲಿ ಬ್ರಿಟಿಷರನ್ನು ಸೋಲಿಸಿದರೂ, ಎರಡನೇ ಯುದ್ಧದಲ್ಲಿ ರಾಯಣ್ಣ ಮತ್ತು ಚೆನ್ನಮ್ಮನನ್ನು ಸೆರೆಹಿಡಿಯಲಾಗುತ್ತದೆ. ಆ ನಂತರ ರಾಯಣ್ಣ ಸೆರೆಮನೆಯಿಂದ ತಪ್ಪಿಸಿಕೊಂಡು ಬಂದು ಚೆನ್ನಮ್ಮನನ್ನು ಬಂಧಮುಕ್ತವಾಗಿಸಲು ಸ್ವಂತ ಸೈನ್ಯ ಕಟ್ಟಿ ಮತ್ತೆ ಯುದ್ಧ ಮಾಡುತ್ತಾರೆ, ಆದರೆ ನಮ್ಮವರೇ ರಾಯಣ್ಣನನ್ನು ಹಿಡಿದುಕೊಡಲು ಬ್ರಿಟೀಷರಿಗೆ ಸಹಾಯ ಮಾಡುತ್ತಾರೆ, ಇದರಿಂದ ಸೆರೆಸಿಕ್ಕ ರಾಯಣ್ಣನನ್ನು ಧಾರವಾಡ ಜೈಲಿನಲ್ಲಿ ಇಟ್ಟಿರುತ್ತಾರೆ, ಬ್ರಿಟಿಷರ ಕೋರ್ಟ್‌ನಲ್ಲಿ ತನಿಖೆಯಾಗಿ ರಾಯಣ್ಣನಿಗೆ ಮರಣ ದಂಡನೆ ಶಿಕ್ಷೆಯಾಗಿ ನಂದಗಡದಲ್ಲಿ ನೇಣಿಗೇರಿಸಲಾಗುತ್ತದೆ. ಇಂಥಾ ಒಬ್ಬ ಮಹಾನ್ ವ್ಯಕ್ತಿಯ ಸ್ಮರಣಾರ್ಥವಾಗಿ ಒಂದು ಅಭಿವೃದ್ಧಿ ಪ್ರಾಧಿಕಾರದ ರಚನೆ, ಅದರಡಿ 179 ಕೋಟಿ ವೆಚ್ಚದಲ್ಲಿ ಒಂದು ಸೈನಿಕ ಶಾಲೆ, ರಾಯಣ್ಣ ಅವರ ಬಂಧನವಾದ ಸಮೀಪದ ಕೆರೆಯನ್ನು ಅಭಿವೃದ್ಧಿ ಮಾಡಲು 2 ಕೋಟಿ, 77 ಕೋಟಿ ವೆಚ್ಚದಲ್ಲಿ ಒಂದು ವಸ್ತು ಸಂಗ್ರಹಾಲಯ, 2 ಕೋಟಿ ವೆಚ್ಚದಲ್ಲಿ ಒಂದು ಕಲ್ಯಾಣ ಮಂಟಪ ನಿರ್ಮಾಣ ಮಾಡಬೇಕು ಎಂದು ನಮ್ಮ ಸರ್ಕಾರ ಈ ಎಲ್ಲಾ ಕಾಮಗಾರಿಗಳನ್ನು ಆರಂಭ ಮಾಡಿತ್ತು.

 ರಕ್ಷಣಾ ಇಲಾಖೆ ಕೂಡ ಇದಕ್ಕೆ ಅನುದಾನ ನೀಡಬೇಕು

ರಕ್ಷಣಾ ಇಲಾಖೆ ಕೂಡ ಇದಕ್ಕೆ ಅನುದಾನ ನೀಡಬೇಕು

ರಾಜ್ಯ ಸರ್ಕಾರ ಅನುದಾನ ನೀಡಿಲ್ಲ ಎಂದು ಹೇಳಲ್ಲ, ಅವರು ಹಣ ನೀಡಿದ್ದಾರೆ ಆದರೆ ಇದೊಂದು ನಿರಂತರವಾದ ಕಾಮಗಾರಿ, ಕಾಮಗಾರಿ ಮುಗಿಯುವವರೆಗೆ ಯಾವುದೇ ಸರ್ಕಾರ ಇದ್ದರೂ ಹಣ ಬಿಡುಗಡೆ ಮಾಡಬೇಕು. ಈ ಯೋಜನೆಯನ್ನು ಆರಂಭ ಮಾಡಿದ್ದು ನಮ್ಮ ಸರ್ಕಾರ. ನಾನು ರಾಜನಾಥ್‌ ಸಿಂಗ್‌ ಮತ್ತು ಬಸವರಾಜ ಬೊಮ್ಮಾಯಿ ಅವರ ಬಳಿ ಮಾತನಾಡುತ್ತೇನೆ, ಕಾರಣ ರಕ್ಷಣಾ ಇಲಾಖೆ ಕೂಡ ಇದಕ್ಕೆ ಅನುದಾನ ನೀಡಬೇಕು. ಪ್ರತೀ ವರ್ಷ 12 ಕೋಟಿಗೂ ಅಧಿಕ ಹಣ ಖರ್ಚಾಗುತ್ತದೆ, ಇವುಗಳ ಕೆಲಸ ಗುಣಮಟ್ಟದಿಂದ ಆಗಬೇಕು.

ನಾನು ಈ ಹಿಂದೆ ಆರ್ಥಿಕ ಸಚಿವನಾಗಿದ್ದಾಗ ಕೊಡಗಿನಲ್ಲಿ ಒಂದು ಸೈನಿಕ ಶಾಲೆ ಆರಂಭ ಮಾಡಿದ್ದೆ, ಕೊಡಗಿನ ಕಾರ್ಯಪ್ಪ, ತಿಮ್ಮಯ್ಯ ಅವರು ಬ್ರಿಟೀಷರ ಕಾಲದಿಂದಲೇ ಸೈನ್ಯದಲ್ಲಿ ಇದ್ದರು. ಕೊಡಗಿನಲ್ಲಿ ಹೆಚ್ಚು ಜನ ಸೈನ್ಯಕ್ಕೆ ಸೇರುವುದರಿಂದ ಅಲ್ಲಿನ ಜನರಿಗೆ ಅನುಕೂಲ ಆಗಲಿ ಎಂದು ನಾನೇ ಬಜೆಟ್‌ ನಲ್ಲಿ ಸೈನಿಕ ಶಾಲೆ ಘೋಷಣೆ ಮಾಡಿ, ಆರಂಭ ಮಾಡಿದ್ದೆ. ಬಿಜಾಪುರದಲ್ಲಿ ಒಂದು ಸೈನಿಕ ಶಾಲೆ ಇದೆ, ಸಂಗೊಳ್ಳಿಯದು ಮೂರನೆಯದು.

 ಕೇಂದ್ರ ಸರ್ಕಾರದ ಜೊತೆ ಮಾತನಾಡುತ್ತೇವೆ

ಕೇಂದ್ರ ಸರ್ಕಾರದ ಜೊತೆ ಮಾತನಾಡುತ್ತೇವೆ

ಸಂಗೊಳ್ಳಿ ರಾಯಣ್ಣ ಹುಟ್ಟಿದ ಗ್ರಾಮವನ್ನು ಕೂಡ ಸರ್ವತೋಮುಖವಾಗಿ ಅಭಿವೃದ್ಧಿ ಮಾಡುವ ಕೆಲಸ ಆಗಬೇಕು. ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿ ಆರಂಭ ಮಾಡಿದ್ದು ನಮ್ಮ ಸರ್ಕಾರ. ಬೈಲಹೊಂಗಲದಲ್ಲಿರುವ ಚೆನ್ನಮ್ಮನವರ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಮಾತನಾಡುತ್ತೇವೆ. ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ಸಿಕ್ಕಿದ್ದು ಕಿತ್ತೂರಿನಿಂದ, ಟಿಪ್ಪು ಸುಲ್ತಾನ್‌, ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿ ಬಾಯಿ, ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ ಇವ್ರೆಲ್ಲ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದವರು. ಕಿತ್ತೂರು ಕೋಟೆಯನ್ನು ಅಭಿವೃದ್ಧಿಪಡಿಸಲಿ, ಅದನ್ನು ಬೇರೆಕಡೆ ಸ್ಥಳಾಂತರ ಮಾಡುವ ಅಗತ್ಯ ಇಲ್ಲ. ಸರ್ಕಾರಕ್ಕೆ ಇದರ ಮರುನಿರ್ಮಾಣ ಮಾಡುವ ಆಲೋಚನೆ ಇದ್ದರೆ ಅಂಥದನ್ನು ಮಾಡಬೇಡಿ ಎಂದು ನಾನೇ ಹೇಳುತ್ತೇನೆ. ಸ್ಥಳಾಂತರ ಮಾಡಿದ ಮೇಲೆ ಅದು ಚೆನ್ನಮ್ಮ ಕಟ್ಟಿದ ಕೋಟೆ ಎಂದು ಹೇಗೆ ಕರೆಯೋಕೆ ಆಗುತ್ತೆ? ಹಾಗಾಗಿ ಮುಂದೆ ನಾವೆ ಅಧಿಕಾರಕ್ಕೆ ಬರುತ್ತೇವೆ ಆಗ ಅಭಿವೃದ್ಧಿಪಡಿಸುವ ಕೆಲಸ ಖಂಡಿತಾ ಮಾಡುತ್ತೇವೆ ಎಂದರು.

English summary
Congress will win 150 seats in Karnataka in the upcoming election said Former CM Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X