Congress 5 Guarantee: ಬೃಹತ್ ಸಮಾವೇಶದಲ್ಲಿ ಯೋಜನೆಗಳಿಗೆ ಚಾಲನೆ ಕೊಡಲು ಚಿಂತನೆ?
ಬೆಂಗಳೂರು ಮೇ 19: ದೀರ್ಘ ಪ್ರಯಾಸದ ನಂತರ ಅಂತಿಮಗೊಂಡ ಸಿದ್ದರಾಮಯ್ಯನವರು ಸಿಎಂ ಆಗಿ ಮತ್ತು ಡಿಕೆ ಶಿವಕುಮಾರ್ ಅವರು ಡಿಸಿಎಂ ಆಗಿ ನಾಳೆ ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಜೆಯೇ ಐದು ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಿ ಆದೇಶ ಹೊರಡಿಸುವ ಸಾಧ್ಯತೆಯೂ ಇದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತ ಪಡೆಯಲು ಭಾರತ್ ಜೋಡೋ ಯಾತ್ರೆ, ಅಬ್ಬರದ ಪ್ರಚಾರದ ಜೊತೆ ಜೊತೆಗೆ ಪ್ರಣಾಳಿಕೆಯಲ್ಲಿ ಘೋಷಣೆಯಾದ ಈ ಐದು ಪ್ರಮುಖ ಗ್ಯಾರಂಟಿಗಳು ಕಾರಣ ಎನ್ನಲಾಗಿದೆ. ಹೀಗಾಗಿ ಇವುಗಳ ಜಾರಿ ಬಗ್ಗೆ ರಾಜ್ಯದ ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಸದ್ಯ ಎಐಸಿಸಿಗೆ ಕಗ್ಗಂಟಾಗಿದ್ದ ಸಿಎಂ ಆಯ್ಕೆ ಬಗೆಹರಿದಿದೆ. ಶನಿವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆಯೇ ಸಚಿವ ಸಂಪುಟ ಸಭೆ ನಡೆದು, ಅದರಲ್ಲಿ ಈ ಐದು ಯೋಜನೆಗಳಿಗೆ ಅನುಮೋದನೆ ನೀಡಿ ಅಧಿಕೃತವಾಗಿ ಆದೇಶಿಸುವ ಉತ್ಸಾಹದಲ್ಲಿ ಕಾಂಗ್ರೆಸ್ ಇದೆ.
ಬಿಜೆಪಿ ಸೆದೆಬಡೆಯಲು ಕಾರಣವಾಗಿದ್ದ ಹಾಗೂ ಜನರ ಓಲೈಕೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ 'ಗ್ಯಾರಂಟಿ-5' ಯೋಜನೆಗಳಿಗೆ ಚಾಲನೆ ಕೊಡಲು ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಈ ಮೂಲಕ ಜನರ ಮನೆಬಾಗಿಲಿಗೆ ಉಚಿತ ಸೇವೆಗಳು ತಲುಪಿಸುವುದನ್ನು ಅಧಿಕೃತಗೊಳಿಸಲಿದೆ.
ಈ ಬೃಹತ್ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಯವರು ಮತ್ತು ಪ್ರಯಾಂಕಾ ಗಾಂಧಿ ವಾದ್ರಾ ಅವರು ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ.

ಜಾರಿ ಆಗಲಿರುವ 5 ಗ್ಯಾರಂಟಿಗಳು:
1. 'ಗೃಹ ಜ್ಯೋತಿ' ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್‌ಗಳಷ್ಟು ವಿದ್ಯುತ್ ಅನ್ನು ಉಚಿತವಾಗಿ ಒದಗಿಸುವ
2. 'ಗೃಹ ಲಕ್ಷ್ಮಿ' ಯೋಜನೆ ಅಡಿ ಪ್ರತಿ ಕುಟುಂಬದ ಪ್ರತಿ ಮಹಿಳೆಗೆ ₹ 2,000 ಸಹಾಯಧನ.
3.'ಅನ್ನ ಭಾಗ್ಯ' ಯೋಜನೆಯಡಿ ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ವಿತರಿಸಲು.
4.'ಯುವ ನಿಧಿ' ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ₹ 3,000 ಡೋಲ್ ಮತ್ತು ನಿರುದ್ಯೋಗಿ ಡಿಪ್ಲೊಮಾ ಹೊಂದಿರುವವರಿಗೆ ₹1,500 ಎರಡು ವರ್ಷಗಳವರೆಗೆ (18-25 ವರ್ಷ).
5.'ಶಕ್ತಿ'ಯೋಜನೆಯಡಿ ರಾಜ್ಯದ ಬಸ್ಸುಗಳಲ್ಲಿ ಕರ್ನಾಟಕದಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಸಕ್ರಿಯಗೊಳಿಸಲು.
ಯೋಜನೆ ಜಾರಿ ಹೇಗೆ?, ಕೆಲ ಕುತೂಹಲಗಳಿಗೆ ತೆರೆ
ಈಗಾಗಲೇ ರಾಜ್ಯದ ರಾಯಚೂರು ಸೇರಿದಂತೆ ವಿವಿಧೆಡೆ ವಿದ್ಯುತ್ ಬಿಲ್ ಕಟ್ಟಲು ಜನರು ನಿರಾಕರಿಸುತ್ತಿದ್ದಾರೆ. ಕಾಂಗ್ರೆಸ್ ಬಹುಮತ ಪಡೆಯುವುದಕ್ಕೂ ಮುನ್ನ ಪ್ರತಿ ಮನೆಗೆ 20ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದೆಂದು ಘೋಷಿಸಿದೆ. ಸದ್ಯ ಕಾಂಗ್ರೆಸ್ ಉಚಿತ ಯೋಜನೆಗಳಿಗೆ ಕೆಲವು ಮಾನದಂಡ ಹೇರಲು ಸಹ ಹೊರಟಿದೆ.
ಇಷ್ಟು ಯೋಜನೆಗಳನ್ನು ರಾಜ್ಯದ ಜನರಿಗೆ ಉಚಿತವಾಗಿ ನೀಡಲು ವಾರ್ಷಿಕವಾಗಿ ಸರ್ಕಾರ ಸುಮಾರು 50ಸಾವಿರ ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಅಷ್ಟು ಹಣಕ್ಕೆ ಕಾಂಗ್ರೆಸ್ ಸರ್ಕಾರ ಏನು ಮಾಡಲಿದೆ?. ಮತ್ತೆ ಜನರ ಮೇಲೆ ತೆರಿಗೆ ಬರೆ ಬೀಳಲಿದೆಯೇ? ಎಂದೆಲ್ಲ ಜನ ಮಾತನಾಡುತ್ತಿದ್ದಾರೆ. ಈ ಎಲ್ಲ ಕುತೂಹಲಗಳಿಗೆ ಶನಿವಾರ ಮೇ 20ರ ಸಂಜೆಯೇ ಉತ್ತರ ಸಿಗುವ ಸಾಧ್ಯತೆ ಇದೆ.












Click it and Unblock the Notifications