ಬಡವರಿಗೆ ದ್ರೋಹ ಮಾಡಿದ್ರೆ ನಾವು ಕೈ ಕಟ್ಟಿ ಕೂರಲ್ಲ: ಜನೌಷಧಿ ಕೇಂದ್ರ ಅನುಮತಿ ರದ್ದಿಗೆ ವಿಜಯೇಂದ್ರ ಕಿಡಿ
ಬೆಂಗಳೂರು, ಆಗಸ್ಟ್ 14: ಇನ್ನುಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ನೂತನವಾಗಿ ಜನೌಷಧಿ ಕೇಂದ್ರ ಆರಂಭಿಸಲು ಅನುಮತಿ ನೀಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ನೀಡಿರುವ ಹೇಳಿಕೆ ಸದ್ಯ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿಕಾರಿದ್ದು, ಬಡವರಿಗೆ ದ್ರೋಹ ಬಗೆಯಲು ಹೊರಟರೆ ಕರ್ನಾಟಕ ಬಿಜೆಪಿ ಕೈ ಕಟ್ಟಿ ಕೂರದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿ.ವೈ ವಿಜಯೇಂದ್ರ, ದುಬಾರಿ ಔಷದಿಗಳು ಬಡಜನರ ಆರೋಗ್ಯದ ಹಕ್ಕು ಕಸಿಯಬಾರದು, ಜನಸಾಮಾನ್ಯರಿಗೂ ಗುಣಮಟ್ಟದ ಔಷಧಿಗಳು ಕಡಿಮೆ ದರದಲ್ಲಿ ದೊರಕಬೇಕೆಂಬ ಮಹತ್ವದ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋಸಿ ಅವರು ಜನೌಷಧಿ ಕೇಂದ್ರ ಸ್ಥಾಪಿಸಿದರು. ಸದ್ಯ 8,900 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಿಂದ ಪ್ರತಿದಿನ 20 ಲಕ್ಷ ಕ್ಕೂ ಹೆಚ್ಚು ಬಡ ಕುಟುಂಬಗಳು ಪ್ರಯೋಜನ ಪಡೆದುಕೊಳ್ಳುತ್ತಿವೆ.

ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊಸ ಜನೌಷಧಿ ಕೇಂದ್ರಗಳಿಗೆ ಅನುಮತಿ ನೀಡುವುದಿಲ್ಲವೆಂಬ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರ ಹೇಳಿಕೆ ಬಡವರ ಆರೋಗ್ಯದಲ್ಲೂ ರಾಜಕಾರಣದ ಚೆಲ್ಲಾಟವಾಡುವಂತಿದೆ.
ಅನ್ನ, ಅಕ್ಷರ ಆರೋಗ್ಯದ ವಿಷಯದಲ್ಲೂ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿಯುತ್ತಿರುವ ರಾಜ್ಯದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಡೆ ಮಾನವೀಯ ಮೌಲ್ಯವಿಲ್ಲದ ಜನವಿರೋಧಿಯಲ್ಲದೇ ಬೇರೇನೂ ಅಲ್ಲ.
ಖಾಸಗಿ ಲಾಭಿಗಳ ಒತ್ತಡ ಹಾಗೂ ಪ್ರಭಾವಗಳಿಗೆ ಮಣಿದು ಬಡವರಿಗೆ ದ್ರೋಹ ಬಗೆಯಲು ಹೊರಟರೆ ಕರ್ನಾಟಕ ಬಿಜೆಪಿ ಕೈ ಕಟ್ಟಿ ಕೂರದು, ತಕ್ಷಣ ಸಚಿವರು ಹೇಳಿಕೆ ಹಿಂಪಡೆದು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನೌಷಧಿ ಕೇಂದ್ರಗಳಿಗೆ ಅಡ್ಡಿಪಡಿಸುವ ನಿಲುವನ್ನು ಬದಲಿಸಿಕೊಳ್ಳುವಂತೆ ಆಗ್ರಹಿಸುತ್ತೇನೆ ಎಂದು ಬಿ.ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವರ ತರ್ಕವೇನು..?
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳು ಉಚಿತವಾಗಿ ಸಿಗುವಾಗ ಜನೌಷಧಿ ಕೇಂದ್ರ ಯಾಕೆ ಬೇಕು? ಹಿಂದೆ ಯಾರು ಅನುಮತಿ ಕೊಟ್ಟಿದ್ದಾರೋ ಗೊತ್ತಿಲ್ಲ. ಇನ್ನುಮುಂದೆ ಹೊಸ ಜನೌಷಧಿ ಕೇಂದ್ರ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಸಚಿವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ವಿಪಕ್ಷದ ನಾಯಕರು ಸೇರಿದಂತೆ ಜನರು ಕೂಡ ಸಚಿವರ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರದಿಂದ ಔಷಧಿಗಳು, ಮಾತ್ರೆಗಳು ಉಚಿತ ಬರುತ್ತದೆ. ಆದರೆ ಎಲ್ಲಾ ಮಾತ್ರೆಗಳು ಸಿಗುವುದಿಲ್ಲ. ಇಂತಹ ಸಮಯದಲ್ಲಿ ಜನೌಷಧಿ ಕೇಂದ್ರ ನೆರವಾಗುತ್ತದೆ ಎನ್ನುವುದು ಜನರ ಅಭಿಪ್ರಾಯವಾಗಿದೆ.












Click it and Unblock the Notifications