ಹೊಸ ಸಚಿವರಿಗೆ ಕಾಂಗ್ರೆಸ್ ಹಾಕಿದೆ ಷರತ್ತು, ಏನದು?
ಬೆಂಗಳೂರು, ಡಿಸೆಂಬರ್ 22: ಕಾಂಗ್ರೆಸ್ ಪಾಲಿಗೆ ಅಲುಗಿನ ಮೇಲಿನ ನಡಿಗೆ ಎಂಬತಾಗಿದ್ದ ಸಂಪುಟ ವಿಸ್ತರಣೆ ಕಸರತ್ತನ್ನು ಅಂತೂ ಕಾಂಗ್ರೆಸ್ ಮಾಡಿ ಮುಗಿಸುತ್ತಿದೆ. ಆದರೆ ಅಲುಗಿನ ನಡಿಗೆ ಈಗಲೇ ಕೊನೆ ಆಗಿಲ್ಲ.
ಇಬ್ಬರನ್ನು ಸಂಪುಟದಿಂದ ಹೊರ ಹಾಕಿ ಒಟ್ಟು ಎಂಟು ಜನ ಶಾಸಕರಿಗೆ ಮಂತ್ರಿಗಳಾಗಿ ಬಡ್ತಿ ನೀಡಿದೆ. ಆದರೆ ಇನ್ನೂ ಸಚಿವಾಕಾಂಕ್ಷಿಗಳು ಕಾಂಗ್ರೆಸ್‌ನಲ್ಲಿ ಕಡಿಮೆ ಏನಿಲ್ಲ. ಹಿರಿಯ ಶಾಸಕರುಗಳೇ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದು, ಸಚಿವ ಸ್ಥಾನದ ಅಂತಿಮ ಪಟ್ಟಿಯಿಂದ ಬಿಟ್ಟು ಹೋಗಿದ್ದಾರೆ.
ಆದರೆ ಈ ಬಾರಿ ಸಚಿವರಾಗಿರುವವರಿಗೆ ಕಾಂಗ್ರೆಸ್ ಷರತ್ತೊಂದನ್ನು ಹಾಕಿದ್ದು, ಕಾಂಗ್ರೆಸ್ ಹಾಕಿರುವ ಈ ಷರತ್ತು ಸಚಿವ ಸ್ಥಾನ ಸಿಗದೇ ಅತೃಪ್ತರಾದವರಿಗೆ ಸಣ್ಣ ಭರವಸೆಯೊಂದನ್ನು ಮೂಡಿಸಿದೆ.

ಈಗ ಸಚಿವರಾಗಿರುವವರು 20 ತಿಂಗಳು ಕಳೆದ ಮೇಲೆ ಕಡ್ಡಾಯವಾಗಿ ರಾಜೀನಾಮೆ ನೀಡಲೇ ಬೇಕು ಎಂಬುದೇ ಆ ಷರತ್ತಾಗಿದೆ. ಅದರಂತೆ ಈಗ ಸಚಿವರಾಗಿರುವವರು ಹಾಗೂ ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗಿದ್ದ ಸಚಿವರು ಸರ್ಕಾರಕ್ಕೆ 20 ತಿಂಗಳು ಆದ ನಂತರ ಕೆಪಿಸಿಸಿ ಕೇಳಿದವರು ಕಡ್ಡಾಯವಾಗಿ ರಾಜೀನಾಮೆ ಕೊಡಲೇಬೇಕಾಗುತ್ತದೆ.
ಈಗ ಸಚಿವರಾದವರು ಕೇವಲ ಒಂದು ವರ್ಷ ಎಂಟು ತಿಂಗಳು ಮಾತ್ರವೇ ಸಚಿವರಾಗಿರುತ್ತಾರೆ. ಆ ನಂತರ ಕಾಂಗ್ರೆಸ್ ಪಕ್ಷವು ಸೂಚಿಸಿದವರು ರಾಜೀನಾಮೆ ನೀಡಿ ಹೊಸ ಆಕಾಂಕ್ಷಿಗಳಿಗೆ ಸಚಿವ ಸ್ಥಾನ ನೀಡಬೇಕಾಗುತ್ತದೆ.












Click it and Unblock the Notifications