ಖರ್ಗೆ, ಶ್ರೀನಿವಾಸ, ಸಂತೋಷ, ತೇಜಸ್ವಿ ಸೂರ್ಯ: ರಾಷ್ಟ್ರ ರಾಜಕಾರಣದಲ್ಲಿ ಕನ್ನಡಿಗರ ಹವಾ
ಬೆಂಗಳೂರು, ಅಕ್ಟೋಬರ್ 19: ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ಖರ್ಗೆಯವರು ಕರ್ನಾಟಕದಿಂದ ನೇಮಕಗೊಂಡಿರುವ ಕಾಂಗ್ರೆಸ್‌ನ ಎರಡನೇ ಅಧ್ಯಕ್ಷರು. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು 1968ರಲ್ಲಿ ಅಧ್ಯಕ್ಷರಾಗಿದ್ದರು.
ಅಕ್ಟೋಬರ್ 17ರಂದು ನಡೆದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಖರ್ಗೆ ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಶಶಿ ತರೂರ್ ಅವರನ್ನು ಆರು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಅವರು ಆಯ್ಕೆಯಾಗುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಕನ್ನಡಿಗರ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನ ಉನ್ನತ ಹುದ್ದೆಗಳಲ್ಲಿ ಕನ್ನಡಗರು ಮಿಂಚುತ್ತಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಕರ್ನಾಟಕದವರ ಪ್ರಭಾವ ದಟ್ಟವಾಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆ ಎಂದೇ ಹೇಳಬಹುದು.

ಕರ್ನಾಟಕದ ಬೀದರ್‌ನಲ್ಲಿ ಹುಟ್ಟಿದ ದಲಿತ ನಾಯಕ ಖರ್ಗೆ
ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಹೈದರಾಬಾದ್ ಕರ್ನಾಟಕದವರು. ಬೀದರ್‌ನಲ್ಲಿ ಹುಟ್ಟಿದ ಅವರು ಸೋಲಿಲ್ಲದ ಸರದಾರರೆಂದೇ ಖ್ಯಾತಿ ಗಳಿಸಿದವರು. ಕಾಂಗ್ರೆಸ್‌ನ ಕಟ್ಟಾಳುವೆಂದೇ ಹೆಸರಾಗಿರುವ ಖರ್ಗೆ, ಗಾಂಧಿ ಕುಟುಂಬದ ನಿಷ್ಠರು. ಈ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಖರ್ಗೆ ಅವರ ಗೆಲುವನ್ನು ಕನ್ನಡಿಗರ ಹೆಮ್ಮೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಬಣ್ಣಿಸಿದ್ದಾರೆ.

ಕನ್ನಡಿಗ ಬಿ.ವಿ.ಶ್ರೀನಿವಾಸ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ
ಕರ್ನಾಟಕದ ಶಿವಮೊಗ್ಗ ಮೂಲದವರಾದ ಬಿ.ವಿ.ಶ್ರೀನಿವಾಸ ಅವರು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಶ್ರೀನಿವಾಸ ಅವರು ಮಾಡಿದ ಜನೋಪಕಾರಿ ಕೆಲಸಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದವು. ಕಾಂಗ್ರೆಸ್‌ನ ಉನ್ನತ ಹುದ್ದೆಯಲ್ಲಿರುವ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿದವರು. ವಿದ್ಯಾರ್ಥಿ ಇರುವಾಗಲೇ ರಾಜಕೀಯಕ್ಕೆ ಆಕರ್ಷಿತರಾದವರು. ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿರದ ಶ್ರೀನಿವಾಸ ಅವರು ಉನ್ನತ ಹುದ್ದೆಯಲ್ಲಿರುವುದು ಕನ್ನಡಿಗರಿಗೆ ಹೆಮ್ಮೆ ಎಂದೇ ಹೇಳಬಹುದು.

ಕರ್ನಾಟಕದ ಬಿ.ಎಲ್.ಸಂತೋಷ್‌ಗೆ ಬಿಜೆಪಿಯಲ್ಲಿ ಉನ್ನತ ಹುದ್ದೆ
ಬೊಮ್ಮರಬೆಟ್ಟು ಲಕ್ಷ್ಮೀಜನಾರ್ಧನ ಸಂತೋಷ್ ಅವರು ಉಡುಪಿ ಜಿಲ್ಲೆಯವರು. ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಓದಿದ್ದಾರೆ. 1993ರಲ್ಲಿ ಆರ್‌ಎಸ್‌ಎಸ್‌ನ ಪ್ರಚಾರಕರಾಗಿ ನೇಮಕಗೊಂಡರು. ಮೈಸೂರು, ಬೆಂಗಳೂರು ಹಾಗೂ ಶಿವಮೊಗ್ಗದಲ್ಲಿ ಆರ್‌ಎಸ್‌ಎಸ್ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 2006ರಲ್ಲಿ ಸಂತೋಷ್ ಅವರು ಕರ್ನಾಟಕ ಬಿಜೆಪಿ ಘಟಕದ ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಪ್ರಸ್ತುತ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ
ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಬೆಂಗಳೂರಿನಲ್ಲಿ ಜನಿಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸಕ್ರಿಯ ಕಾರ್ಯಕರ್ತರಾಗಿದ್ದ ತೇಜಸ್ವಿ ಸೂರ್ಯ, ಆರ್‌ಎಸ್‌ಎಸ್ ಸ್ವಯಂಸೇವಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ತೇಜಸ್ವಿ ಸೂರ್ಯ ಅಭೂತಪೂರ್ವ ಗೆಲುವು ಸಾಧಿಸಿದ್ದರು. ಈಗ ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಉನ್ನತ ಹುದ್ದೆಗೆ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ
ಕರ್ನಾಟಕದ ಚಿಕ್ಕಮಗಳೂರು ಶಾಸಕರಾದ ಸಿ.ಟಿ.ರವಿ ಅವರು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿರುವ ಅವರು ಹಿಂದುತ್ವದ ಫೈರ್ ಬ್ರ್ಯಾಂಡ್ ಎಂದೇ ಹೆಸರಾಗಿದ್ದಾರೆ. ಕನ್ನಡಿಗರಾದ ಸಿ.ಟಿ.ರವಿ ಸಂಘಟನಾ ಚತುರರು ಹೌದು. ಆರ್‌ಎಸ್ಎಸ್ ಜೊತೆ ನಿಕಟ ಸಂಪರ್ಕ ಹೊಂದಿರುವ ಅವರು, ನಾಲ್ಕು ಬಾರಿ ಚಿಕ್ಕಮಗಳೂರಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.












Click it and Unblock the Notifications