ಕಾಂಗ್ರೆಸ್‌ನಲ್ಲಿ ಕುಟುಂಬಕ್ಕೊಂದೇ ಟಿಕೆಟ್ ಯಾರಿಗೆ ಅನ್ವಯ?: ಸುರ್ಜೇವಾಲಾ ಸ್ಪಷ್ಟನೆ
ಬೆಂಗಳೂರು, ಜೂ. 02: ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ಕುಟುಂಬಗಳು ಅಥವಾ ಸಂಬಂಧಿಗಳಿಗೆ ಟಿಕೆಟ್ ನೀಡುವ ವಿಚಾರವಾಗಿ ನಿರ್ಣಯ ಕೈಗೊಳ್ಳಲಾಗಿದ್ದು, ಒಂದು ಕುಟುಂಬಕ್ಕೆ ಒಂದು ಟಿಕೆಟ್ ಸೂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಹಾಗೆಂದ ಮಾತ್ರಕ್ಕೆ ಒಂದು ಕುಟುಂಬದಲ್ಲಿ ಮತ್ತೊಬ್ಬರನ್ನು ಸಂಪೂರ್ಣವಾಗಿ ನಿರಾಕರಿಸುವುದಿಲ್ಲ. ಕುಟುಂಬದಲ್ಲಿ ಮತ್ತೊಬ್ಬರು ಪಕ್ಷಕ್ಕಾಗಿ 5 ವರ್ಷಗಳ ಕಾಲ ದುಡಿದಿದ್ದರೆ ಅವರಿಗೆ ಅವಕಾಶ ನೀಡಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸ್ಪಷ್ಟಪಡಿಸಿದರು.
ಕೆಪಿಸಿಸಿ ವತಿಯಿಂದ ಬೆಂಗಳೂರು ಹೊರವಲಯದ ಕ್ಲಾರ್ಕ್ ಎಕ್ಸಾಟಿಕದಲ್ಲಿ ಇಂದು ಆರಂಭವಾದ ಎರಡು ದಿನಗಳ ನವ ಸಂಕಲ್ಪ ಶಿಬಿರದಲ್ಲಿ ಮಾತನಾಡಿದ ಸುರ್ಜೇವಾಲಾ, ಪಕ್ಷದ ನಾಯಕರ ಕುಟುಂಬ ಸದಸ್ಯರಿಗೆ ಏಕಾಏಕಿ ಕರೆತಂದು ಟಿಕೆಟ್ ನೀಡುವುದಿಲ್ಲ. ಮೊದಲು ಪಕ್ಷದ ಕೆಲಸದಲ್ಲಿ ತೊಡಗಿಸಿಕೊಂಡು ನಂತರ ಅವರು ಅವಕಾಶದ ಅರ್ಹತೆ ಪಡೆಯಬೇಕಿದೆ ಎಂದು ಹೇಳಿದರು.
ಪಕ್ಷದ ಸಂಘಟನೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಸಕ್ರಿಯವಾಗಿ ತೊಡಗಿಸಿದ್ದಾರೆ. ಆದರೂ, ಪಿಸಿಸಿ ಅಧಿವೇಶನಗಳು , ಡಿಸಿಸಿ ಸಭೆಗಳು ನಡೆಯುತ್ತಿಲ್ಲ. ಹೀಗಾಗಿ ಅಧ್ಯಕ್ಷರು ತಮ್ಮ ಕಾರ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ಜತೆಗೂಡಿ ಚರ್ಚೆ ಮಾಡಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ ನಡೆಯಬೇಕು. 6 ತಿಂಗಳಿಗೊಮ್ಮೆ ವರ್ಷಕ್ಕೆ ಎರಡು ಬಾರಿ ಪ್ರದೇಶ ಕಾಂಗ್ರೆಸ್ ಸಮಿತಿಯ ಸಭೆ ನಡೆಸಬೇಕು. ಇಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಬಹುದು. ಅದೇ ರೀತಿ ಪಿಸಿಸಿ ಹಾಗೂ ಡಿಸಿಸಿ ರಾಜಕೀಯ ವಿಚಾರ ಚರ್ಚೆ ಮಾಡುವುದರ ಜತೆಗೆ ಜನ ಸಾಮಾನ್ಯರು ಹಾಗೂ ನಿರ್ದಿಷ್ಟ ವರ್ಗದವರನ್ನು ಕಾಡುತ್ತಿರುವ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕು. ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರ ವಿಚಾರಗಳನ್ನು ಚರ್ಚೆ ಮಾಡಲು ಪ್ರತ್ಯೇಕ ಅಧಿವೇಶನ ನಡೆಸಬೇಕು ಎಂದು ಸಲಹೆ ನೀಡಿದರು.

ಕೆಲವೊಮ್ಮೆ ನಿರಾಸೆ ಸಹಜ
ವಿಧಾನ ಪರಿಷತ್ ಹಾಗೂ ರಾಜ್ಯ ಸಭೆ ಚುನಾವಣೆಯಲ್ಲಿ ಪಕ್ಷದಿಂದ ಆಯ್ಕೆಯಾಗುವ ಅವಕಾಶ ಕೇವಲ ಬೆರಳೆಣಿಕೆ ಸೀಟುಗಳು ಮಾತ್ರ ಇದ್ದವು. ಆದರೆ ಪಕ್ಷದಲ್ಲಿ 20ಕ್ಕೂ ಹೆಚ್ಚು ಮಂದಿ ಈ ಸ್ಥಾನಕ್ಕೆ ಆಯ್ಕೆಯಾಗುವ ಅರ್ಹತೆ ಇದ್ದ ನಾಯಕರಿದ್ದಾರೆ. 2 ಸ್ಥಾನಗಳ ವಿಧಾನಪರಿಷತ್ ಗೆ ನಾವು ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವೇ? ನಾನಾಗಲಿ, ಅಧ್ಯಕ್ಷರಾಗಲಿ, ಶಾಸಕಾಂಗ ಪಕ್ಷದ ನಾಯಕರಾಗಲಿ ಟಿಕೆಟ್ ನೀಡಲು ಸಾಧ್ಯವೇ? ಈ ಸಮಯದಲ್ಲಿ ನಿರಾಸೆಯಾಗುವುದು ಸಹಜ. ನಿಮ್ಮ ನಿರಾಸೆ ಪಕ್ಷಕ್ಕೆ ತೊಂದರೆಯಾಗುವಂತಹದ್ದಾದರೆ ಅದರಿಂದ ಪಕ್ಷ ಹಾಗೂ ನಿಮಗೆ ಇಬ್ಬರಿಗೂ ತೊಂದೆಯಾಗುತ್ತದೆ.

ಜಿಲ್ಲಾ, ಬ್ಲಾಕ್, ಇತರೆ ಘಟಕಗಳಲ್ಲಿ ಹುದ್ದೆ ಭರ್ತಿ
ಯಾವುದೇ ಪಕ್ಷದ ಶಕ್ತಿ ಎಂದರೆ ಆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಾಗಿದ್ದಾರೆ. ಕೇವಲ ಕೆಲವು ನಾಯಕರೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಹೀಗಾಗಿ ಪಕ್ಷದಲ್ಲಿ ಬ್ಲಾಕ್, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಮಿತಿಯಲ್ಲಿನ ಎಲ್ಲ ಹುದ್ದೆಗಳನ್ನು ಮುಂದಿನ 90-180 ದಿನಗಳಲ್ಲಿ ಭರ್ತಿ ಮಾಡುವುದಾಗಿದೆ. ಮುಂದಿನ 15 ದಿನಗಳಲ್ಲಿ ಕೆಪಿಸಿಸಿಯ ಪದಾಧಿಕಾರಿಗಳ ಪಟ್ಟಿಯನ್ನು ಪೂರ್ಣಗೊಳಿಸಬೇಕು ಎಂಬ ವಿಚಾರವಾಗಿ ಪಿಸಿಸಿ ಅಧ್ಯಕ್ಷರ ಜತೆ ಚರ್ಚೆ ಮಾಡಿದ್ದೇನೆ. ನಂತರ ಜಿಲ್ಲಾ ಹಾಗೂ ಬ್ಲಾಕ್ ಹಾಗೂ ಇತರೆ ಘಟಕಗಳಲ್ಲಿ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಕೆಪಿಸಿಸಿ ಪದಾಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಜಿಲ್ಲೆ ಹಾಗೂ ಕ್ಷೇತ್ರಗಳ ಉಸ್ತುವಾರಿ ನೀಡಲಾಗುವುದು. ಈ ಎಲ್ಲ ವಿಚಾರವಾಗಿ ನಾನು ಚರ್ಚೆ ಮಾಡಿ, ಮೇಲ್ವಿಚಾರಣೆ ಮಾಡುತ್ತೇನೆ. ಎಲ್ಲ ಘಟಕಗಳ ಮುಖ್ಯಸ್ಥರು ಇಲ್ಲಿದ್ದು, ಅವರು ಕೂಡ ತಮ್ಮ ಪದಾಧಿಕಾರಿಗಳ ಹುದ್ದೆಯನ್ನು ಪೂರ್ಣಗೊಳಿಸಬೇಕು. ಇದಕ್ಕಾಗಿ ಪ್ರತ್ಯೇಕ ಸಭೆ ನಡೆಸಲಾಗುವುದು. ಬ್ಲಾಕ್ ಹಾಗೂ ಗ್ರಾಮ ಸಮಿತಿ ನಡುವೆ ಮಂಡಲ ಸಮಿತಿ ಇರಬೇಕು. ನೀವೆಲ್ಲರೂ ಜಿಲ್ಲಾ ಕಚೇರಿಯಲ್ಲಿ ಸಭೆ ಮಾಡಿ ಈ ಸಮಿತಿಯ ವ್ಯಾಪ್ತಿ ನಿರ್ಧರಿಸಬೇಕು. ನಂತರ ವಾರ್ಡ್ ಹಾಗೂ ಗ್ರಾಮ ಸಮಿತಿಗಳನ್ನು ರಚಿಸಲಾಗುವುದು ಎಂದು ಸರ್ಜೇವಾಲ ಹೇಳಿದರು.

ರಾಜ್ಯ ಮಟ್ಟದ ವಾರ್ ರೂಮ್
ಮುಂದಿನ 20 ದಿನಗಳಲ್ಲಿ ರಾಜ್ಯ ಮಟ್ಟದ ವಾರ್ ರೂಮ್ ರಚಿಸಲಾಗುವುದು. ದಿನನಿತ್ಯದ ಅಜೆಂಡಾವನ್ನು ಎಲ್ಲರಿಗೂ ಕಳುಹಿಸಿಕೊಡಲಾಗುವುದು. ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದವರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳ ವಿಚಾರ ಚರ್ಚೆ ಮಾಡಬೇಕು. ನಾವು ಅನುಭವಕ್ಕೆ ಪ್ರಾಮುಖ್ಯತೆ ನೀಡುತ್ತೇವೆ. ಹೀಗಾಗಿ ಪಕ್ಷದ ಹಿರಿಯರನ್ನು ಕಡೆಗಣಿಸದೇ, ಗೌರವಿಸುತ್ತಾ ಅವರ ಮಾರ್ಗದರ್ಶನ ಪಡೆಯಲು ಅವರಿಗೆ ಸೂಕ್ತ ಸ್ಥಾನಮಾನ ನೀಡಿ ಹೊಸ ಮುಖಗಳಿಗೆ ಅವಕಾಶ ನೀಡಲು ಪಕ್ಷ ತೀರ್ಮಾನಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಶೇ.50ರಷ್ಟು ಅವಕಾಶವನ್ನು 50 ವರ್ಷದೊಳಗಿನವರಿಗೆ ನೀಡಲು ಉದಯಪುರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆಗ ಅನುಭವ ಹಾಗೂ ಯುವಕರ ಸಮತೋಲನ ಸಾಧಿಸಲು ನೆರವಾಗುತ್ತದೆ. ಇದೇ ಸೂತ್ರವನ್ನು ಎಲ್ಲ ಸಮಿತಿಗಳಲ್ಲಿ ಅನುಸರಿಸಬೇಕು. ನಾವು ಬಡವರು, ಶೋಷಿತರು, ದಲಿತರು, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರು, ಯುವಕರು ಹಾಗೂ ಪರಿಶಿಷ್ಟರ ಧ್ವನಿಯಾಗದೇ ನಾವು ಯಶಸ್ಸು ಸಾಧಿಸಲು ಸಾಧ್ಯವಿಲ್ಲ.ನಾವು ನಮ್ಮ ಎಲ್ಲ ಸಮಿತಿಗಳಲ್ಲಿ ಹಾಗೂ ಟಿಕೆಟ್ ಹಂಚಿಕೆಯಲ್ಲಿ ಈ ಎಲ್ಲ ವರ್ಗದವರಿಗೆ ಅವಕಾಶ ನೀಡಬೇಕು.

5 ವರ್ಷ ಪೂರ್ಣಗೊಳಿಸಿರುವವರು
ಉದಯಪುರ ಸಭೆಯ ಸಮಿತಿಯಲ್ಲಿ ನಾನು ಭಾಗವಾಗಿದ್ದೆ. ಎಲ್ಲ ವರ್ಗದವರಿಗೆ ನಾವು ಹೇಗೆ ಅವಕಾಶ ನೀಡಬಹುದು ಎಂಬ ಚರ್ಚೆ ಮಾಡಲಾಗಿತ್ತು. ನಾನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ತೆರವು ಮಾಡದಿದ್ದರೆ ನನ್ನ ನಂತರವಿರುವ ಪುರುಷ ಅಥವಾ ಮಹಿಳೆಗೆ ಹೇಗೆ ಅವಕಾಶ ಮಾಡಿಕೊಡಲು ಸಾಧ್ಯ? ಹೀಗಾಗಿ ಪಕ್ಷದಲ್ಲಿ ಯಾವುದೇ ಪದಾಧಿಕಾರಿಗಳ ಹುದ್ದೆಯ ಗರಿಷ್ಠ ಕಾಲಮಿತಿ 5 ವರ್ಷಗಳಿಗೆ ನಿಗದಿ ಮಾಡಲಾಗಿದೆ. ಈ ಅವಧಿ ಪೂರ್ಣಗೊಂಡ ನಂತರ ನೀವು ಸಂಘಟನೆಯಿಂದ ಹೊರ ನಡೆಯುವಂತಿಲ್ಲ. ನಿಮಗೆ ಪಕ್ಷ ಬೇರೆ ಜವಾಬ್ದಾರಿಗಳನ್ನು ಕಲ್ಪಿಸಿಕೊಡಲಿದೆ. ಈ ಮೂಲಕ ಮಾತ್ರ ನಾವು ಪಕ್ಷದಲ್ಲಿ ಬಹುತೇಕರಿಗೆ ಅವಕಾಶ ನೀಡಲು ಸಾಧ್ಯ. ಹೀಗಾಗಿ ಜಿಲ್ಲಾಧ್ಯಕ್ಷರಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ 5 ವರ್ಷ ಪೂರ್ಣಗೊಳಿಸಿರುವವರು ಬೇರೆಯವರಿಗೆ ಅವಕಾಶ ನೀಡುವತ್ತ ಗಮನಹರಿಸಬೇಕು. ಆ ಮೂಲಕ ಬೇರೆ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಾಗಬೇಕು.

ಜೂ.8ರಂದು ಸೋನಿಯಾ ಗಾಂಧಿ ಇಡಿ ಮುಂದೆ ಹಾಜರು
ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಳೆದ ಕೆಲವು ದಿನಗಳಿಂದ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಜತೆ ಸಂಪರ್ಕ ಹೊಂದಿದ್ದು, ಅವರಲ್ಲಿ ಒಬ್ಬರಿಗೆ ಕೋವಿಡ್ ಸೋಂಕು ತಗುಲಿದೆ. ಸೋನಿಯಾ ಗಾಂಧಿ ಅವರಿಗೂ ಸೋಂಕಿನ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿದಾಗ ಅವರು ಕೂಡ ಕೊವಿಡ್ ಸೋಂಕಿತರಾಗಿದ್ದು, ಅವರು ತಮ್ಮನ್ನು ತಾವೇ ಐಸೋಲೇಟ್ ಮಾಡಿಕೊಂಡಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ಜೂ.8ರಂದು ಸೋನಿಯಾ ಗಾಂಧಿ ಅವರು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಬೇಕಿದ್ದು, ಅಷ್ಟರಲ್ಲಿ ಅವರು ಗುಣಮುಖರಾಗುವ ನಿರೀಕ್ಷೆ ಇದೆ ಎಂದು ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ರಾಜ್ಯಸಭಾ ಚುನಾವಣೆ
ಈ ವಿಚಾರವಾಗಿ ನಾನು ಕಳೆದ 2 ದಿನಗಳಿಂದ ಪ್ರತಿಕ್ರಿಯೆ ನೀಡಿದ್ದು, ಇಂದು ನಾವು ಈ ನವ ಸಂಕಲ್ಪ ಶಿಬಿರದ ಬಗ್ಗೆ ಮಾತ್ರ ಗಮನಹರಿಸುತ್ತಿದ್ದೇವೆ. ಈ ಶಿಬಿರದ ಹೊಸ ನಿರ್ಣಯಗಳ ಮೂಲಕ ಪಕ್ಷ ಬಲಿಷ್ಠವಾಗಿ ಹೊರಹೊಮ್ಮಲಿದ್ದು, ರಾಜ್ಯ ಐಟಿ ಬಿಟಿ, ಅನ್ವೇಷಣೆ, ಶಿಕ್ಷಣ ಹಾಗೂ ಉದ್ಯೋಗ ತಾಣವಾಗಿ ಮತ್ತೆ ಹೊರಹೊಮ್ಮಲು ದಾರಿ ಮಾಡಿಕೊಡುವ ವಿಶ್ವಾಸವಿದೆ. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ಆರ್ ಎಸ್ಎಸ್ ರಾಜ್ಯದಲ್ಲಿನ ಶಾಂತಿ, ಸೌಹಾರ್ದತೆ, ಭಾತೃತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದ್ದು, ಈ ಸರ್ಕಾರದ 40% ಕಮಿಷನ್ ಭ್ರಷ್ಟಾಚಾರ ಹಾಗೂ ನೇಮಕಾತಿ ಅಕ್ರಮಕ್ಕೆ ಅಂತ್ಯವಾಡಿ ರಾಜ್ಯ ಶಾಂತಿ ಹಾಗೂ ಅಭಿವೃದ್ಧಿಯಲ್ಲಿ ಹೆಜ್ಜೆ ಇಡಲು ಈ ನವ ಸಂಕಲ್ಪ ಶಿಬಿರದಲ್ಲಿ ಚರ್ಚೆ ಮಾಡಲಾಗುವುದು. ಈ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಶಿವಕುಮಾರ್ ಅವರು ಆರು ಸಮಿತಿಗಳನ್ನು ರಚಿಸಿದ್ದಾರೆ. ಕೃಷಿ ಹಾಗೂ ರೈತರ ಸಮಿತಿ, ಆರ್ಥಿಕತೆ ಮತ್ತು ಬೆಲೆ ಏರಿಕೆ ಸಮಿತಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಮಿತಿ, ಪಕ್ಷದ ಸಂಘಟನೆ ಸಮಿತಿ, ಯುವಕರು, ಮಹಿಳೆಯರು, ಶಿಕ್ಷಣ ಹಾಗೂ ಉದ್ಯೋಗ, ಶೈಕ್ಷಣಿಕ ಸಮಿತಿ, ರಾಜಕೀಯ ವ್ಯವಹಾರಗಳ ಸಮಿತಿ ರಚಿಸಲಾಗಿದೆ. ಈ ಸಭೆಯ ನಿರ್ಣಯಗಳನ್ನು 'ಕರ್ನಾಟಕ ನವ ಸಂಕಲ್ಪ ನಿರ್ಣಯಗಳು' ಎಂದು ಘೋಷಿಸಿ ಇವುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುವುದು. ಇಲ್ಲಿಂದ ಪಕ್ಷ ಹೊಸ ರೂಪ ಪಡೆದು ರಾಜ್ಯದಲ್ಲಿ ಬದಲಾವಣೆ ತರುವ ವಿಶ್ವಾಸವಿದೆ' ಎಂದು ತಿಳಿಸಿದರು.












Click it and Unblock the Notifications