ವಿಧಾನ ಪರಿಷತ್ ಉಪ ಚುನಾವಣೆ; ಕಾಂಗ್ರೆಸ್ ಸ್ಪರ್ಧೆ ಇಲ್ಲ!
ಬೆಂಗಳೂರು, ಜನವರಿ 29 : ವಿಧಾನ ಪರಿಷತ್‌ನ ಒಂದು ಸ್ಥಾನ ಭರ್ತಿ ಮಾಡಲು ನಡೆಯುವ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ತೀರ್ಮಾನಿಸಿದೆ. ಫೆಬ್ರವರಿ 17ರಂದು ಉಪ ಚುನಾವಣೆ ನಡೆಯಲಿದೆ.
ವಿಧಾನ ಪರಿಷತ್ ಸದಸ್ಯರಾಗಿದ್ದ ರಿಜ್ವಾನ್ ಅರ್ಷದ್ ಶಿವಾಜಿನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದಾರೆ. ಆದ್ದರಿಂದ, ಅವರ ಪರಿಷತ್ ಸ್ಥಾನ ತೆರವಾಗಿದೆ. ಸದಸ್ಯತ್ವದ ಅವಧಿ 2022ರ ಜೂನ್ ತನಕವಿದ್ದು, ಉಪ ಚುನಾವಣೆ ಘೋಷಣೆಯಾಗಿದೆ.
ವಿಧಾನ ಪರಿಷತ್ ಸದಸ್ಯರ ಆಯ್ಕೆಗೆ ಕರ್ನಾಟಕ ವಿಧಾನಸಭೆಯ ಶಾಸಕರು ಮತದಾನ ಮಾಡಲಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿಯ ಶಾಸಕ ಬಲ ಹೆಚ್ಚಿದೆ. ಆದ್ದರಿಂದ, ಬಿಜೆಪಿ ಸುಲಭವಾಗಿ ಉಪ ಚುನಾವಣೆಯಲ್ಲಿ ಜಯಗಳಿಸಲಿದೆ.
ವಿಧಾನ ಪರಿಷತ್ ಸದಸ್ಯರಾಗಲು ಬಿಜೆಪಿಯಲ್ಲಿ ಭಾರಿ ಪೈಪೋಟಿ ಇದೆ. ಉಪ ಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿ, ರಾಣೆಬೆನ್ನೂರು ಕ್ಷೇತ್ರದ ಮಾಜಿ ಶಾಸಕ ಆರ್. ಶಂಕರ್ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದಾರೆ. ಜೆಡಿಎಸ್ ಸಹ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಯಾವುದೇ ಹೇಳಿಕೆ ನೀಡಿಲ್ಲ.

ದಿನೇಶ್ ಗುಂಡೂರಾವ್ ಹೇಳಿದ್ದೇನು?
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ವಿಧಾನ ಪರಿಷತ್ ಒಂದು ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಲಾಗಿದೆ. ನಮಗೆ ಬಹುಮತ ಇಲ್ಲದ ಕಾರಣ ನಾವು ಅಭ್ಯರ್ಥಿ ಹಾಕಲ್ಲ" ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಸ್ಥಾನ
ವಿಧಾನ ಪರಿಷತ್ ಸದಸ್ಯರಾಗಿದ್ದ ರಿಜ್ವಾನ್ ಅರ್ಷದ್ ಶಿವಾಜಿನಗರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ಎದುರಾಗಿದೆ. ಇದು ಕಾಂಗ್ರೆಸ್ ಪಕ್ಷದ ಸ್ಥಾನವೇ ಆಗಿದ್ದು, ಚುನಾವಣಾ ಕಣಕ್ಕಿಳಿಯದಿದ್ದರೆ ಪಕ್ಷದ ಬಲ ಪರಿಷತ್‌ನಲ್ಲಿ ಕಡಿಮೆಯಾಗಲಿದೆ.

ಲಕ್ಷ್ಮಣ ಸವದಿ ಆಕಾಂಕ್ಷಿ
ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ಸಾರಿಗೆ ಸಚಿವರಾಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ವಿಧಾನಸಭೆ, ಪರಿಷತ್ ಸದಸ್ಯರಲ್ಲದ ಅವರು ಫೆಬ್ರವರಿ 26ರೊಳಗೆ ಯಾವುದಾದರೂ ಸದನದ ಸದಸ್ಯರಾಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.

ಆರ್. ಶಂಕರ್ ಪೈಪೋಟಿ
ರಾಣೆಬೆನ್ನೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಆರ್. ಶಂಕರ್ ಬಿಜೆಪಿ ಟಿಕೆಟ್ ಅನ್ನು ಅರುಣ್ ಕುಮಾರ್ ಪೂಜಾರ್‌ಗೆ ಬಿಟ್ಟುಕೊಟ್ಟಿದ್ದರು. ಆದ್ದರಿಂದ, ಅವರು ವಿಧಾನ ಪರಿಷತ್ ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಉಪ ಚುನಾವಣೆಯಲ್ಲಿ ಆಯ್ಕೆಯಾಗಿ ಯಡಿಯೂರಪ್ಪ ಸಂಪುಟ ಸೇರುವ ಉತ್ಸಾಹದಲ್ಲಿದ್ದಾರೆ.












Click it and Unblock the Notifications