ಡಿಕೆ ಶಿವಕುಮಾರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ನಮ್ಮ ಶಾಸಕರ ಬಗ್ಗೆ ಒಂದಿಷ್ಟು
Recommended Video
ಬೆಂಗಳೂರು, ಸೆ 5: ರಾಜಕೀಯವಾಗಿ ಮತ್ತು ಪಕ್ಷದಲ್ಲಿ ತಮ್ಮ ಪ್ರಭಾವನ್ನು ಡಿ ಕೆ ಶಿವಕುಮಾರ್ ಬೆಳೆಸಿಕೊಂಡ ಬಂದ ರೀತಿ, ಅವರ ರಾಜಕೀಯ ವಿರೋಧಿಗಳೂ ಆಶ್ಚರ್ಯ ಪಡುವಂತದ್ದು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡುವ ವಿಚಾರದಲ್ಲೂ, ತಮ್ಮ ರಾಜಕೀಯ ಪ್ರಭಾವನ್ನು ತೋರಿ, ತಮ್ಮ ಅತ್ಯಂತ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದರು.
ಯಾಕೆಂದರೆ, ಇದು ಸಾಧ್ಯವಾಗಿದ್ದು, ಹೈಕಮಾಂಡ್ ಮಟ್ಟದಲ್ಲಿ ಅವರಿಗಿದ್ದ ಪ್ರಭಾವ ಮತ್ತು ವರ್ಚಸ್ಸು. 2018ರ ಅಸೆಂಬ್ಲಿ ಚುನಾವಣೆಯಲ್ಲಿ ಡಿಕೆಶಿ, ತಮ್ಮ ಕುಟುಂಬದ ಸದಸ್ಯರೊಬ್ಬರಿಗೆ ಟಿಕೆಟ್ ಕೊಡಿಸುವಲ್ಲಿ ಮತ್ತು ತಾನೇ ಮುತುವರ್ಜಿ ವಹಿಸಿ, ಅವರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.
ಅವರೇ, ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್. ಇವರು, ಡಿಕೆಶಿ ನಾದಿನಿಯ ಪತಿ. ವೃತ್ತಿಯಲ್ಲಿ ಇವರು ವೈದರು. ಇಡಿ, ಬೇಲ್ ವಿಚಾರಣೆಯ ವೇಳೆ, ತಮಗೆ ಪರ್ಸನಲ್ ಡಾಕ್ಟರ್ ಅನ್ನು ನೀಡಬೇಕು ಎನ್ನುವ ಮನವಿಗೆ, ಕೋರ್ಟ್ ಅಸ್ತು ಅಂದಿರುವುದರಿಂದ, ಡಿಕೆಶಿ, ಆರೋಗ್ಯ ವಿಚಾರಿಸಿಕೊಳ್ಳಲು ರಂಗನಾಥ್, ದೆಹಲಿಗೆ ತೆರಳುವ ಸಾಧ್ಯತೆಯಿದೆ.

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಡಿ ಕೆ ಶಿವಕುಮಾರ್ ಅವರ ವಿಶೇಷ ಒತ್ತಡದಿಂದ ಮತ್ತು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ ಎನ್ನುವ ಕಮಿಟ್ಮೆಂಟ್ ನೀಡಿದ ನಂತರ, ಹೈಕಮಾಂಡ್, ಡಿಕೆಶಿ ಕುಟುಂಬದ ಡಾ. ಎಚ್ ಡಿ ರಂಗನಾಥ್ ಅವರಿಗೆ ಟಿಕೆಟ್ ಅನ್ನು ನೀಡಿತ್ತು.
ಬಿಜೆಪಿ ಜೊತೆಗಿನ ಜಿದ್ದಾಜಿದ್ದಿನ ಸ್ಪರ್ಧೆಯ ನಂತರ, ರಂಗನಾಥ್, ಸಮೀಪದ ಪ್ರತಿಸ್ಪರ್ಧಿ ಡಿ ಕೃಷ್ಣಕುಮಾರ್ ವಿರುದ್ದ 5,600 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ರಂಗನಾಥ್, ಪ್ರಮಾಣವಚನವನ್ನು ಡಿ ಕೆ ಶಿವಕುಮಾರ್ ಹೆಸರಿನಲ್ಲಿ ತೆಗೆದುಕೊಂಡಿದ್ದರು, ಎನ್ನುವುದು ಇಲ್ಲಿ ಗಮನಿಸಬೇಕಾದ ವಿಚಾರ.
ಮೈಸೂರಿನ ಜೆಎಸ್ಎಸ್ ಮೆಡಿಕಲ್ ಕಾಲೇಜಿನಲ್ಲಿ ಎಂಎಸ್ ಪದವೀಧರರಾಗಿರುವ ಡಾ. ರಂಗನಾಥ್, ಮೂವತ್ತು ಕೋಟಿಗೂ ಅಧಿಕ ಆಸ್ತಿ ಮತ್ತು ಏಳು ಕೋಟಿಗೂ ಅಧಿಕ ಸಾಲ ಇದೆ ಎಂದು ಚುನಾವಣಾ ಅಫಿಡವಿಟ್ ನಲ್ಲಿ ತೋರಿಸಿದ್ದರು.
ಕುಟುಂಬಸ್ಥರು ಮತ್ತು ಇತರರ ಭೇಟಿಗೆ ಅವಕಾಶ ನೀಡಬೇಕು, ಜೊತೆಗೆ, ಖಾಸಗಿ ವೈದ್ಯರು ಬೇಕು ಎನ್ನುವ ಡಿ ಕೆ ಶಿವಕುಮಾರ್ ಮನವಿಗೆ ಕೋರ್ಟ್ ಒಪ್ಪಿಗೆ ನೀಡಿರುವುದರಿಂದ, ಡಾ. ರಂಗನಾಥ್, ಮುಂದಿನ ಕೆಲವು ದಿನಗಳಲ್ಲಿ ಡಿಕೆಶಿ ಆರೋಗ್ಯವನ್ನು ನೋಡಿಕೊಳ್ಳಲಿದ್ದಾರೆ.












Click it and Unblock the Notifications