ಶರತ್ ಬಚ್ಚೇಗೌಡV/S ಎಂಟಿಬಿ : ಅನುದಾನಕ್ಕಾಗಿ ವಿಧಾನಸೌಧದಲ್ಲಿ ಶರತ್ ಬಚ್ಚೇಗೌಡ ಅಹೋರಾತ್ರಿ ಧರಣಿ
ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಂಟಿಬಿ ನಾಗರಾಜ್ ಹಾಗೂ ಶರತ್ ಬಚ್ಚೇಗೌಡ ನಡುವೆ ಟಾಕ್ ವಾರ್ ಶುರುವಾಗಿದೆ.
ಬೆಂಗಳೂರು,ಮಾರ್ಚ್ 3: ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಚಿವರಾಗಿರುವ ಎಂ.ಟಿ.ಬಿ ನಾಗರಾಜ್ ಹಾಗೂ ಶಾಸಕ ಶರತ್ ಬಚ್ಚೇಗೌಡ ನಡುವೆ ಕ್ಷೇತ್ರ ಅಭಿವೃದ್ದಿ ವಿಚಾರವಾಗಿ ಹಗ್ಗ ಜಗ್ಗಾಟ ನಡೆಯುತ್ತಿದೆ.
ಹೊಸಕೋಟೆ ಕ್ಷೇತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಜೂರು ಮಾಡಿದ್ದ 10 ಕೋಟಿ ಹಣವನ್ನು ಸಚಿವ ಎಂಟಿಬಿ ನಾಗರಾಜ್ ತಡೆಹಿಡಿದಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ಆರೋಪಿಸಿದ್ದು, ಅನುದಾನ ಬಿಡುಗಡೆ ಮಾಡಬೇಕು ಎಂದು ವಿಧಾನಸೌಧ ಗಾಂಧಿ ಪ್ರತಿಮೆ ಬಳಿ ಗುರುವಾರ ರಾತ್ರಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ.

ಹೊಸಕೋಟೆ ಕ್ಷೇತ್ರಕ್ಕೆ ವಿಶೇಷ ಅನುದಾನದಡಿಯಲ್ಲಿ10 ಕೋಟಿ ಹಣ ಬಿಡುಗಡೆಗೆ ಮುಖ್ಯಮಂತ್ರಿಗಳು ಸೂಚಿಸಿದ್ದರು. 2022-23ನೇ ಸಾಲಿನ ಜೂನ್ ತಿಂಗಳಲ್ಲಿಈ ಬಗ್ಗೆ ಆರ್ಥಿಕ ಇಲಾಖೆಯಿಂದ ಅನುಮೋದಿಸಿ ಪತ್ರ ಬರೆಯಲಾಗಿತ್ತು. ಅಂದಿನಿಂದ ಹಣ ಬಿಡುಗಡೆ ಮಾಡದಂತೆ ಸಚಿವ ಎನ್. ನಾಗರಾಜ್ ಮುಖ್ಯಮಂತ್ರಿಗಳ ಮೇಲೆ ಒತ್ತ ಹಾಕಿ ಹಣ ಬಿಡುಗಡೆಗೆ ಅಡ್ಡಗಾಲು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
10 ಕೋಟಿ ಹಣ ಬಿಡುಗಡೆಗೊಂಡರೆ ಶರತ್ ಬಚ್ಚೇಗೌಡರಿಗೆ ಕ್ಷೇತ್ರದಲ್ಲಿ ಜನಮುನ್ನಣೆ ಸಿಗುತ್ತೆ ಎಂದು ಸೇಡಿನ ರಾಜಕಾರಣಕ್ಕೆ ಸಚಿವರು ಇಳಿದಿದ್ದಾರೆ. ಸಚಿವರು ಬೇಕಾದಷ್ಟು ಅನುದಾನ ತಂದು ಕ್ಷೇತ್ರ ಅಭಿವೃಧಿದ್ಧಿ ಪಡಿಸಲಿ. ಇದಕ್ಕೆ ನಮ್ಮ ಅಭ್ಯಂತರ ಇಲ್ಲ. ವಿಶೇಷ ಅನುದಾನಕ್ಕೆ ಅಡ್ಡಗಾಲು ಹಾಕಿ ಕ್ಷೇತ್ರದ ಜನರಿಗೆ ಮೋಸ ಮಾಡುತ್ತಿದ್ದಾರೆ. ಸಚಿವರು ಹಣ ಬಿಡುಗಡೆ ಮಾಡದಂತೆ ತಡೆದಿಲ್ಲ ಎನ್ನುವುದಾದರೇ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲಕ್ಕೆ ಬಂದು ಆಣೆಮಾಡಿ ಪ್ರಮಾಣ ಮಾಡಲಿ ಎಂದು ಶರತ್ ಬಚ್ಚೇಗೌಡ ಸವಾಲು ಹಾಕಿದ್ದಾರೆ.

ವಿಷೇಶ ಅನುದಾನ ತಡೆದ ಬಗ್ಗೆ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತಂದು ನ್ಯಾಯ ಸಿಗುವರಿಗೂ ಅಹೋರಾತ್ರಿ ಧರಣಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿರುವ ಶರತ್ ಬಚ್ಚೇಗೌಡ ಅವರು ಗುರುವಾರ ರಾತ್ರಿಯಿಂದ ಸತ್ಯಾಗ್ರಹವನ್ನ ಆರಂಭಿಸಿದ್ದು, ಶರತ್ ಬಚ್ಚೇಗೌಡರ ಅಹೋರತ್ರಿ ಧರಣಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದ್ದಾರೆ.
ನಾನೇ ಅಭಿವೃದ್ದಿ ಹರಿಕಾರ ಎನ್ನುವ ಸಚಿವರು ತಮ್ಮ ಶಕ್ತಿ ಮೀರಿ ಅಭಿವೃದ್ದಿ ಮಾಡಲಿ. ಮತದಾರರು ಯಾರು ಅಭಿವೃದ್ದಿ ಮಾಡಿದ್ದಾರೆ ಎಂಬುದನ್ನ ಪರಿಗಣಿಸಿ ಮತ ನೀಡುತ್ತಾರೆ. ಪೌರಾಡಳಿತ ಮಂತ್ರಿಯಾಗಿ ರಾಜ್ಯದ ಎಷ್ಟು ಪುರಸಭೆಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ತಾಲೂಕಿನಲ್ಲಿ ಯಾವ ಇಲಾಖೆಗೆ ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದ್ದಾರೆ.

ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಇರುತ್ತಾರೆ ಎಂದವರು ನಂತರ ಯಡಿಯೂರಪ್ಪರಿಗೆ ಜಾಗ ನೀಡಿದರು. ಈಗ ಯಾರಿಗೆ ನೀಡುತ್ತಾರೆ ಗೊತ್ತಿಲ್ಲ. ಸಚಿವರ ಮಗ ಎಂಟಿಬಿ ರಾಜೇಶ್ ಬಿಜೆಪಿ ಆಕಾಂಕ್ಷಿ ಅಷ್ಟೇ. ಅಭ್ಯರ್ಥಿ ಅಲ್ಲ. ಆದರೂ, ತಾಲೂಕಿನ ಸಭೆ ಸಮಾರಂಭಗಳಲ್ಲಿ ತಾಲೂಕಿನ ಜನತೆಯಿಂದ ಆಯ್ಕೆಯಾಗಿರುವ ಒಬ್ಬ ಶಾಸಕನಿಗೆ ಏಕವಚನದಲ್ಲಿ ಮಾತನಾಡುವ ಅವರ ಸಂಸ್ಕೃತಿ ಜನ ನೋಡಿದ್ದಾರೆ ಎಂದು ಕಿಡಿಕಾರಿದರು.












Click it and Unblock the Notifications