ನಾನು ವೇಟಿಂಗ್ ಲಿಸ್ಟ್‌ನಲ್ಲಿದ್ದೇನೆ: ದೆಹಲಿ ಭೇಟಿಯ ರಹಸ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ
ಸಿಎಂ ರೇಸ್‌ನಲ್ಲಿರುವ ಕಾಂಗ್ರೆಸ್ ಸಚಿವ ಸತೀಶ್ ಜಾರಕಿಹೊಳಿ ಅವರು ಇತ್ತೀಚೆಗೆ ದೆಹಲಿಗೆ ಭೇಟಿ ನೀಡುವ ಮೂಲಕ ತೀವ್ರ ಕುತೂಹಲ ಮೂಡಿಸಿದ್ದರು. ಅಲ್ಲದೆ ದೆಹಲಿಯಲ್ಲಿ ಜೆಡಿಎಸ್ ಪಕ್ಷದ ಹೆಚ್‌ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಿ ಅಚ್ಚರಿ ನಡೆ ಪ್ರದರ್ಶಿಸಿದ್ದರು. ಇದರ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೂ ಕೂಡ ಕಾರಣವಾಗಿದ್ದರು. ಈ ಎಲ್ಲದರ ಬಗ್ಗೆ ಸ್ಪಷ್ಟನೆ ನೀಡುವ ಜೊತೆಗೆ ದೆಹಲಿ ಭೇಟಿ, ಸಿಎಂ ಸ್ಥಾನದ ಬಗ್ಗೆ ಶಾಕಿಂಗ್ ವಿಚಾರಗಳನ್ನು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕೇಂದ್ರ ಸಚಿವರನ್ನು ನಾನು ಭೇಟಿಯಾದಂತೆ ನಮ್ಮ ಪಕ್ಷದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಇತರ ನಾಯಕರನ್ನೂ ಭೇಟಿಯಾಗಿದ್ದೇನೆ. ಎಂದಿನಂತೆ ದೆಹಲಿಗೆ ಹೋದ ಮೇಲೆ ವರಿಷ್ಠರನ್ನು ಭೇಟಿಯಾಗಿ, ಅವರೊಂದಿಗೆ ಸಮಾಲೋಚನೆ ನಡೆಸುವುದು ಕಾಮನ್. ಇದರಲ್ಲಿ ಏನೂ ವಿಶೇಷತೆ ಇಲ್ಲ. ಪರಿಶಿಷ್ಟ ಸಮುದಾಯಗಳ ಶಾಸಕರು ಮತ್ತು ಮುಖಂಡರ ಸಭೆ ಸಂಬಂಧ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಆಗಮಿಸಲಿದ್ದು, ಆಗ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.

ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ. ಈಗಾಗಲೇ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಲ್ಲಿದ್ದಾರೆ. ನಮ್ಮ ಸರದಿ ಬಹುಶಃ 2028ಕ್ಕೆ. ಮೆಜೆಸ್ಟಿಕ್‌ನ ಟ್ರಾಫಿಕ್ ಜಾಮಲ್ಲಿ ನಮಗೆ ಅವಕಾಶ ಸಿಕ್ಕರೂ ಸಿಗಬಹುದು ಎಂದು ಪರೋಕ್ಷವಾಗಿ ಅವರು ಸಿಎಂ ಹುದ್ದೆಯ ಬಗ್ಗೆ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ನೂರಾರು ಮಂದಿ ಶಾಸಕರಿದ್ದಾರೆ. ನಾನು ಇಲ್ಲಿಯೇ ಇದ್ದು ಅಧ್ಯಕ್ಷ ಆಗಬೇಕು, ಇಲ್ಲಿಯೇ ಸಿಎಂ ಕೂಡ ಆಗಬೇಕು. ಸದ್ಯಕ್ಕೆ ವೇಟಿಂಗ್ ಲಿಸ್ಟ್‌ನಲ್ಲಿದ್ದೇವೆ, ಇಲ್ಲೇ ಕಾಯುತ್ತೇವೆ. ನಾನು ಕೂಡ ಕಾಂಗ್ರೆಸ್ ಪಕ್ಷದಲ್ಲಿಯೇ ಕಾಯುತ್ತೇನೆ. ಯಾರಾದರೂ ಮೆಜೆಸ್ಟಿಕ್‌ನ ಜಾಮ್‌ನಲ್ಲಿ ಸಿಲುಕಿ ಬರೋದು ತಡವಾದ್ರೆ ನಮಗೆ ಅವಕಾಶ ಸಿಗಬಹುದು. ಎಲ್ಲರೂ ಆರ್‌ಎಸಿ ಟಿಕೆಟ್ ಇಟ್ಟುಕೊಂಡೇ ಕಾಯುತ್ತಿದ್ದಾರೆ ಎಂದೂ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ದೆಹಲಿ ಭೇಟಿಯ ವೇಳೆ ಹನಿಟ್ರ್ಯಾಪ್ ಸಂಬಂಧ ಯಾವುದೇ ಚರ್ಚೆಗಳು ನಡೆದಿಲ್ಲ. ದೆಹಲಿಗೆ ಹೋಗಿ ನಾನು ರಾಜಕೀಯದ ದೂರುಗಳನ್ನು ನೀಡುವ ಅಗತ್ಯವೂ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ 138 ಮಂದಿ ಶಾಸಕರಿದ್ದಾರೆ. ನಮ್ಮ ಗಾಡಿ ಫುಲ್ ತುಂಬಿದೆ. ಹೀಗಿರುವಾಗ ಜೆಡಿಎಸ್‌ನ ಕುಮಾರಸ್ವಾಮಿ ಅವರ ಸಹಕಾರದ ಪ್ರಶ್ನೆಯೇ ಬರುವುದಿಲ್ಲ ಎಂದಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ ಸೇರಿದಂತೆ ಇತರೆ ಕೇಂದ್ರ ಸಚಿವರ ಭೇಟಿಯು ಪೂರ್ವ ನಿಗದಿಯಾಗಿತ್ತು. ಆದರೆ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಭೇಟಿ ಆಕಸ್ಮಿಕವಾಗಿ ನಡೆಯಿತು. ಸಂಸತ್‌ಗೆ ತೆರಳುವ ಮಾರ್ಗದಲ್ಲೇ ಅವರ ಕಚೇರಿ ಇತ್ತು. ಹಾಗಾಗಿ ಅವರನ್ನು ಭೇಟಿ ಮಾಡಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಸಚಿವ ಕೆ.ಎನ್.ರಾಜಣ್ಣ ಅವರ ಹನಿಟ್ರ್ಯಾಪ್ ಕೇಸ್ ಬೇರೆಯಾದರೆ, ರಾಜೇಂದ್ರ ಕೇಸ್ ಕೂಡ ಬೇರೆಯಾಗಿದೆ. ಈ ಎರಡೂ ಒಂದಕ್ಕೊಂದು ಸಂಬಂಧವೇ ಇಲ್ಲ. ರಾಜೇಂದ್ರ ಕೇಸ್ ಸ್ವಲ್ಪ ಹಳೇದು, ಅವರಿಗೆ ಯಾರೋ ಫೋನ್ ಮಾಡಿ ಬೆದರಿಕೆ ಹಾಕುತ್ತಿದ್ರು ಅನ್ನೋದು ಹಳೇ ವಿಚಾರ. ಹಾಗಾಗಿ ಹನಿಟ್ರ್ಯಾಪ್‌ಗೂ ಇದಕ್ಕೂ ಸಂಬಂಧವೇ ಇಲ್ಲ. ಅಧಿವೇಶನ ಮುಗಿದ ನಂತರ ನಾನು ರಾಜಣ್ಣ ಅವರನ್ನ ಭೇಟಿಯೇ ಆಗಲಿಲ್ಲ. ರಾಜಣ್ಣ ಯಾಕೆ ಸೈಲೆಂಟ್ ಆದರು ಎಂಬ ಬಗ್ಗೆಯೂ ಚರ್ಚೆ ಮಾಡುತ್ತೇನೆ. ಎಲ್ಲದಕ್ಕೂ ಬ್ರೇಕ್ ಹಾಕದಿದ್ದರೆ ಮತ್ತೆ ಹನಿಟ್ರ್ಯಾಪ್ ಬಗ್ಗೆಯೇ ಚರ್ಚೆಯಾಗುತ್ತೆ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications