ರಾಜ್ಯ ರಾಜಕಾರಣದಲ್ಲಿ ಮತ್ತೆ C.D ಸದ್ದು; ಯಾರದ್ದು?
ಕರ್ನಾಟಕದಲ್ಲಿ ರಾಜಕಾರಣಕ್ಕೂ ಸಿ.ಡಿಗೂ ಒಂದು ರೀತಿಯ ಅವಿನಾಭಾವ ಸಂಬಂಧ ಇದೆಯೇನೋ ಗೊತ್ತಿಲ್ಲ. ಇತ್ತೀಚೆಗೆ ರಾಜ್ಯದ ಅಭಿವೃದ್ಧಿಗಿಂತ ರಾಜಕಾರಣಿಗಳ ಸಿ.ಡಿ ವಿಚಾರಗಳೇ ಹೆಚ್ಚು ಸದ್ದು ಮಾಡುತ್ತಿವೆ. ವಿವಿಧ ಪಕ್ಷಗಳ ನಾಯಕರು ನಮ್ಮ ಬಳಿ ಅವರ ಸಿ.ಡಿ ಇದೆ, ಇವರ ಸಿ.ಡಿ ಇದೆ ಎಂದೆಲ್ಲ ಹೇಳುತ್ತಾ ರಾಜ್ಯದ ಗಮನ ಸೆಳೆಯುತ್ತಲೇ ಇದ್ದಾರೆ.
ಇಂದು ಕೂಡ ಸಿ.ಡಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಮಾತನಾಡಿರುವುದು ಐಟಿ ಮತ್ತು ಬಿಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ. ಹೌದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಆರೋಪಕ್ಕೆ ತಿರುಗೇಟು ನೀಡುವ ಭರದಲ್ಲಿ ಪ್ರಿಯಾಂಕ್ ಸಿ.ಡಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದರ ಬೆನ್ನಲ್ಲೇ ಸಿ.ಡಿ ವಿಚಾರ ಮತ್ತೆ ಸದ್ದು ಮಾಡಲಾರಂಭಿಸಿದೆ.

ಆಗಿದ್ದೇನು?: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣಗಳನ್ನು ಡೈವರ್ಟ್ ಮಾಡುವ ಉದ್ದೇಶದಿಂದಲೇ ನಟ ದರ್ಶನ್ ಜೈಲಿನಲ್ಲಿ ಜಾಲಿಯಾಗಿದ್ದ ಫೋಟೋ ಅನ್ನು ಸರ್ಕಾರವೇ ಲೀಕ್ ಮಾಡಿದೆ ಎಂದು ಆರೋಪ ಮಾಡಿದ್ದರು.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ನ ಪರಪ್ಪನ ಅಗ್ರಹಾರದಲ್ಲಿನ ರಾಜಾತಿಥ್ಯದ ಫೋಟೋ ವೈರಲ್ ಆಗಿದ್ದೇಗೆ ಹಾಗೂ ಇದಕ್ಕೆ ಪ್ರಮುಖ ಸೂತ್ರದಾರರು ಯಾರು ಎಂದು ಪ್ರಹ್ಲಾದ್ ಜೋಶಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದರು.
ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣ ಆರೋಪದಿಂದ ತಪ್ಪಿಸಿಕೊಳ್ಳುವ ದುರಾಲೋಚನೆಯಿಂದ ನಟ ದರ್ಶನ್ ಪೋಟೋ ವೈರಲ್ ಮಾಡುವ ನಾಟಕವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಪರಪ್ಪನ ಅಗ್ರಹಾರದ ದರ್ಶನ್ ಪೋಟೋ ಹೊರಗಡೆ ಬಿಟ್ಟಿರುವುದು ಕೂಡ ರಾಜ್ಯ ಸರ್ಕಾರವೇ ಎಂದು ದೂರಿದ್ದರು.

ದರ್ಶನ್ ಪ್ರಕರಣ ಸಾಕಷ್ಟು ಚರ್ಚೆಗೆ ಬಂದಿದ್ದ ವಿಷಯವಾಗಿತ್ತು. ಆದರೆ, ಮುಡಾ ವಾಲ್ಮೀಕಿ ಪ್ರಕರಣ ಮುನ್ನೆಲೆಗೆ ಬಂದಾಗ ಎಲ್ಲ ಮಾಧ್ಯಮದಲ್ಲಿಯೂ ಸಾಕಷ್ಟು ಚರ್ಚೆಗೆ ಬಂದಿತ್ತು. ಇದನ್ನು ಡೈವರ್ಟ್ ಮಾಡಲು ಇಂತದ್ದೊಂದು ಪೋಟೋ ವೈರಲ್ ಮಾಡುವ ಕೆಲಸವನ್ನು ಸರ್ಕಾರ ಮಾಡಿದೆ. ದರ್ಶನ ಪ್ರಕರಣದಲ್ಲಿ ನ್ಯಾಯಾಲಯ ಕೊಟ್ಟಿರುವ ದಾಖಲೆಯನ್ನು ಬಹಿರಂಗ ಪಡಿಸುವ ಕಾರ್ಯವನ್ನು ಸರ್ಕಾರ ಮಾಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಖಂಡಿಸಿದ್ದರು.
ಇನ್ನು ಜೋಶಿ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ, ಡೈವರ್ಟ್ ಮಾಡುವ ಅಗತ್ಯ ನಮಗೇನಿತ್ತು. ʼಹಾಗೇನಾದ್ರೂ ಸರ್ಕಾರ ಡೈವರ್ಟ್ ಮಾಡಬೇಕು ಎಂದಿಕೊಂಡಿದ್ದರೆ, ಅವರದ್ದೇ ನಾಯಕರ ಸಿ.ಡಿ. ಇತ್ತಲ್ಲಾ?ʼ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಆ ಸಿ.ಡಿಯನ್ನು ಜೋಶಿ ಅವರೇ ಮಾಡಿಸಿದ್ದಾರೆ ಎಂದು ಜನ ಹೇಳ್ತಿದ್ದಾರೆ. ಇದು ನಿಜಾನಾ? ಈ ಬಗ್ಗೆ ಅವರು ಏನು ಹೇಳುತ್ತಾರೆ?ʼ ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ.
ʼಜೋಶಿ ಅವರು ಇಂತಹ ಹೇಳಿಕೆಗಳನ್ನು ಹೇಳುವುದು ಬಿಟ್ಟು ಅವರು ಅಭಿವೃದ್ಧಿ ಕೆಲಸಗಳ ಕಡೆಗೆ ಗಮನ ಕೊಡಲಿ. ಅವರು ರಾಜ್ಯದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದನ್ನೇ ನಾನು ನೋಡಿಲ್ಲ. ದರ್ಶನ್ ಅವರ ಫೋಟೋ ವೈರಲ್ ಆಗಿರುವುದರಲ್ಲಿ ರಾಜ್ಯ ಸರ್ಕಾರದ ಪಾತ್ರವೇನೂ ಇಲ್ಲʼ ಎಂದು ಪ್ರಿಯಾಂಕ್ ಸ್ಪಷ್ಟನೆ ನೀಡಿದ್ದಾರೆ. ಪ್ರಿಯಾಂಕ್ ಅವರ ಸಿ.ಡಿ ಹೇಳಿಕೆ ಬೆನ್ನಲ್ಲೇ ಬಿಜೆಪಿ ನಾಯಕರಿಗೆ ಸೇರಿದೆ ಎನ್ನಲಾದ ಸಿ.ಡಿಗಳು ಬಹಳಷ್ಟು ಇದ್ದಂತಿದೆ ಎನ್ನುವ ಚರ್ಚೆಯೂ ಎಲ್ಲೆಡೆ ಶುರುವಾಗಿದೆ.












Click it and Unblock the Notifications