ಕೈ ಹಿಡಿದು ಅಸಭ್ಯವಾಗಿ ವರ್ತಿಸಿದಳು: ಅಂದು ಸಚಿವ ರಾಜಣ್ಣ ಕ್ಯಾಬಿನ್‌ನಲ್ಲಿ ಹನಿಟ್ರ್ಯಾಪ್ ನಡೆದಿದ್ದೇಗೆ?
ಸದನದಲ್ಲೇ ಸದ್ದು ಮಾಡಿದ್ದ ಹನಿಟ್ರ್ಯಾಪ್ ವಿಚಾರವಾಗಿ ಕಾಂಗ್ರೆಸ್ ಸಚಿವ ಕೆ.ಎನ್.ರಾಜಣ್ಣ ಅವರು ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿತ್ತು ಎನ್ನುವ ಮೂಲಕ ರಾಜಣ್ಣ ಸಂಚಲನ ಸೃಷ್ಟಿಸಿದ್ದರು. ಬೆಂಗಳೂರಿನ ತಮ್ಮ ಸರ್ಕಾರಿ ಬಂಗಲೆಯಲ್ಲೇ ಈ ಕೃತ್ಯ ನಡೆದಿದ್ದು, ಆ ಯುವತಿ ಯಾವ ಬಟ್ಟೆ ಧರಿಸಿದ್ದಳು ಎಂದೂ ಸುಳಿವು ನೀಡಿದ್ದರು. ಇದೀಗ ಈ ಹನಿಟ್ರ್ಯಾಪ್ ಯತ್ನದ ಬಗ್ಗೆ ಅವರು ಮತ್ತಷ್ಟು ಸ್ಫೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್ ಅವರ ಸೂಚನೆ ಮೇರೆಗೆ ಸಿಐಡಿ ಅಧಿಕಾರಿಗಳು ಹನಿಟ್ರ್ಯಾಪ್ ಕೇಸ್ ವಿಚಾರಣೆ ನಡೆಸುತ್ತಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೇ ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ರಾಜಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು. ಈ ವೇಳೆ ತನಿಖಾಧಿಕಾರಿಗಳ ಮುಂದೆ ಸಚಿವ ರಾಜಣ್ಣ ಅವರು ಹಲವು ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.

ಯುವತಿಯೊಬ್ಬಳು ಏನೋ ಪ್ರಮುಖ ವಿಚಾರ ಮಾತನಾಡಬೇಕು ಎಂದು ಸರ್ಕಾರಿ ನಿವಾಸಕ್ಕೆ ಬಂದಿದ್ದಳು. ಆಕೆ ಪ್ರಮುಖ ವಿಚಾರ ಎಂದಿದ್ದಕ್ಕೆ ಕ್ಯಾಬಿನ್ ಒಳಗೆ ಕರೆಸಿ ಮಾತನಾಡಿಸಿದೆ. ಆಗ ಇದ್ದಕ್ಕಿದ್ದಂತೆ ಆ ಯುವತಿ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದಳು. ನನ್ನ ಕೈಯನ್ನು ಹಿಡಿದು ಎಳೆಯಲು ಪ್ರಯತ್ನಿಸಿದಳು. ಆಗ ನಾನು ಕೂಡಲೇ ಆ ಯುವತಿ ಕೆನ್ನೆಗೆ ಬಾರಿಸಿ ಕಳುಹಿಸಿದೆ. ಅಸಭ್ಯವಾಗಿ ವರ್ತಿಸಿದ ಯುವತಿ ಅಂದು ನೀಲಿ ಬಣ್ಣ ಬಟ್ಟೆ ಧರಿಸಿದ್ದಳು. ಯುವತಿಯ ಮುಖ ಪರಿಚಯ ನನಗೆ ಇಲ್ಲ, ಸಿಐಡಿ ಹುಡುಕಿದರೆ ಆಕೆ ಸಿಗಬಹುದು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಜಯಮಹಲ್‌ನಲ್ಲಿರುವ ಸಚಿವರ ಸರ್ಕಾರಿ ನಿವಾಸಕ್ಕೆ ಎರಡು ಬಾರಿ ಬೇರೆ ಬೇರೆ ಯುವತಿಯರು ಬಂದಿದ್ರು, ಅವರಿಬ್ಬರ ಪರಿಚಯ ನನಗಿಲ್ಲ, ಅವರೊಂದಿಗೆ ಒಬ್ಬ ಗಡ್ಡಧಾರಿ ವ್ಯಕ್ತಿ ಕೂಡ ಬಂದಿದ್ದ. ಈ ಘಟನೆ ನಡೆದ ದಿನದಂದು ನಿವಾಸದಲ್ಲಿ ಕಾರ್ಯಕರ್ತರು ಕೂಡ ಇದ್ದರು. ಆದರೆ ಆ ಘಟನೆ ನಡೆದ ನಿಖರ ದಿನ ಯಾವಾಗ ಎಂದು ತಿಳಿಯುತ್ತಿಲ್ಲ ಎಂದು ರಾಜಣ್ಣ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಸದನದಲ್ಲೇ ಹನಿಟ್ರ್ಯಾಪ್ ಬಾಂಬ್ ಸಿಡಿಸಿದ್ದ ಕೆ.ಎನ್.ರಾಜಣ್ಣ ಇನ್ನೂ ಹಲವರ ಹನಿಟ್ರ್ಯಾಪ್ ಆಗಿದೆ ಎಂದೂ ಆರೋಪಿಸಿದ್ದರು. ಬಳಿಕ ರಾಜ್ಯ ರಾಜಕಾರಣದಲ್ಲಿ ಇದು ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಇದರ ಬಗ್ಗೆ ತನಿಖೆ ನಡೆಸುವಂತೆ ರಾಜಣ್ಣ ಸರ್ಕಾರಕ್ಕೆ ಕೇಳಿಕೊಂಡಿದ್ದರು. ಸದನದಲ್ಲೇ ಈ ವಿಚಾರ ಹೇಳಿದ್ದರಿಂದ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಹ ರಾಜಣ್ಣ ಮೇಲೆ ಕೋಪಗೊಂಡಿದ್ದರು. ಪಕ್ಷದ ಆಂತರಿಕ ವಿಚಾರವನ್ನು ಈ ರೀತಿ ಸಾರ್ವಜನಿಕವಾಗಿ ಹೇಳಿದ್ದು ಸರಿಯಲ್ಲ ಎಂದು ದೂರಿದ್ದರು.

ಇನ್ನು ರಾಜಣ್ಣ ಅವರು ರಾಜಕೀಯ ಉದ್ದೇಶದಿಂದ ನನ್ನ ಚಾರಿತ್ರ್ಯ ಹರಣ ಮಾಡಲು ನನ್ನ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದಿದ್ದರು. ಹನಿಟ್ರ್ಯಾಪ್ ಮಾಡಲು ಬಂದಿದ್ದ ಯುವತಿ ನೀಲಿ ಜೀನ್ಸ್ ಧರಿಸಿದ್ದಳು. ಮೊದಲ ಸಲ ಭೇಟಿಯಾದಾಗ ಯಾರು ಏನೆಂದು ಹೇಳಲಿಲ್ಲ, ನಿಮ್ಮ ಹತ್ರ ಪರ್ಸನಲ್ ಆಗಿ ಮಾತನಾಡಬೇಕು ಸರ್ ಎಂದು ಕೇಳಿದ್ದಳು. ಬಳಿಕ ನಾನು ಹೈಕೋರ್ಟ್ ಲಾಯರ್ ಎಂದು ಹೇಳಿಕೊಂಡಿದ್ದಳು ಎಂದು ರಾಜಣ್ಣ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ್ದರು.












Click it and Unblock the Notifications