ರಾಜ್ಯದ ಮತ್ತೊಬ್ಬ ಪ್ರಭಾವಿ ಸಚಿವನ ಪುತ್ರ ರಾಜಕೀಯಕ್ಕೆ ಎಂಟ್ರಿ
ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿರುವ ಹಲವು ನಾಯಕರ ಮಕ್ಕಳು ಕೂಡ ರಾಜಕೀಯ ಪ್ರವೇಶಿಸಿ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಇದರಲ್ಲಿ ಕೆಲವರಿಗೆ ಗೆಲುವು ಸಿಕ್ಕಿದ್ದರೆ, ಹಲವರಿಗೆ ಸೋಲಿನ ಹೊಡೆತ ಅವರ ದಿಕ್ಕನ್ನೇ ಬದಲಿಸಿದೆ. ಕಳೆದ ಲೋಕಸಭೆ ಚುನಾವಣೆಯಲ್ಲೂ ಪ್ರಭಾವಿ ನಾಯಕರ ಮಕ್ಕಳು ಸ್ಪರ್ಧಿಸಿ, ಗೆದ್ದುಬೀಗಿದ್ದಾರೆ. ಈಗ ಇದೇ ಸಾಲಿಗೆ ಮತ್ತೊಬ್ಬ ಪ್ರಭಾವಿ ಸಚಿವನ ಪುತ್ರ ಕೂಡ ಸೇರ್ಪಡೆಯಾಗುತ್ತಿದ್ದಾರೆ. ವಂಶ ರಾಜಕಾರಣದಲ್ಲಿ ಕೇಳಿಬಂದಿರುವ ಹೊಸ ಹೆಸರು ಯಾರದ್ದು? ಎಂಬ ವಿವರ ಇಲ್ಲಿದೆ ನೋಡಿ..
ಸಕ್ಕರೆ ನಾಡು ಮಂಡ್ಯ ಜಿಲ್ಲೆಯು ರಾಜಕಾರಣದಲ್ಲಿ ತನ್ನದೇ ಛಾಪು ಮೂಡಿಸಿದೆ. ಹಲವು ನಾಯಕರು, ಶಾಸಕರು, ಸಚಿವರು, ಸಂಸದರು, ಮುಖ್ಯಮಂತ್ರಿಯನ್ನೂ ಕೊಡುಗೆಯಾಗಿ ನೀಡಿದೆ. ಸದ್ಯ ಮಂಡ್ಯ ರಾಜಕಾರಣಕ್ಕೆ ಮತ್ತೊಬ್ಬ ನಾಯಕನ ಪುತ್ರನ ಎಂಟ್ರಿ ಸನಿಹದಲ್ಲೇ ಇದೆ. ಕಾಂಗ್ರೆಸ್‌ನ ಸಚಿವರಾಗಿರುವ ಎನ್.ಚಲುವರಾಯಸ್ವಾಮಿ ಅವರ ಪುತ್ರ ಸಚಿನ್ ಇದೀಗ ರಾಜಕೀಯ ಪ್ರವೇಶಿಸಲು ಮುಂದಾಗಿದ್ದಾರೆ. ಈಗಾಗಲೇ ಚಲುವರಾಯಸ್ವಾಮಿ ಅವರು ರಾಜಕಾರಣದಲ್ಲಿ ಹೆಮ್ಮರವಾಗಿ ಬೆಳೆದಿದ್ದು, ಇದೀಗ ಪುತ್ರನಿಗೂ ರಾಜಕೀಯದಲ್ಲಿ ಭವಿಷ್ಯ ಕಟ್ಟಿಕೊಡಲು ಪಣ ತೊಟ್ಟಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದ ಸಚಿನ್ ಚಲುವರಾಯಸ್ವಾಮಿ ಅವರು ಈಗಾಗಲೇ ಕ್ಷೇತ್ರದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ. ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸಚಿನ್ ಫುಲ್ ಬ್ಯುಸಿಯಾಗಿದ್ದು, ಇಲ್ಲೇ ಬೀಡುಬಿಟ್ಟಿದ್ದಾರೆ. ನಾಗಮಂಗಲದ ಸ್ಥಳೀಯ ಸಂಸ್ಥೆಗಳ ಚುನಾವಣೆ, ಕಾರ್ಯಕ್ರಮಗಳು, ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೆ, ನಾಗಮಂಗಲ ತಾಲ್ಲೂಕಿನ ಬ್ರಹ್ಮದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೂ ನಿಂತಿದ್ದಾರೆ ಎನ್ನಲಾಗಿದೆ.
ಮುಂಬರುವ ವಿಧಾನಸಭಾ ಕ್ಷೇತ್ರ, ಲೋಕಸಭಾ ಕ್ಷೇತ್ರದ ಚುನಾವಣೆ ವೇಳೆಗೆ ಪುತ್ರ ಸಚಿನ್ ಅವರನ್ನ ರಾಜಕೀಯವಾಗಿ ಬೆಳೆಸುವ ಮುಂದಾಲೋಚನೆಯಲ್ಲಿದ್ದಾರಂತೆ ಚಲುವರಾಯಸ್ವಾಮಿ. ಮುಂದೆ ಹೇಗಾದರೂ ಮಾಡಿ ಮಗನನ್ನು ಶಾಸಕ ಅಥವಾ ಸಂಸದರನ್ನಾಗಿ ಮಾಡುವ ಆಸೆ ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ಈಗಿನಿಂದಲೇ ಭಾರಿ ತಯಾರಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯದಲ್ಲಿ ಈ ಹಿಂದೆ ಹೆಚ್‌ಡಿ ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಅವರನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸಿದ್ದರಿಂದ ಸೋಲು ಕಂಡಿದ್ದರು. ಬಳಿಕ ಎರಡನೇ ಅವಧಿಗೆ ಹೆಚ್‌ಡಿ ಕುಮಾರಸ್ವಾಮಿ ಅವರೇ ಅಖಾಡಕ್ಕಿಳಿದು, ಗೆದ್ದು ಈಗ ಕೇಂದ್ರ ಸಚಿವರಾಗಿದ್ದಾರೆ. ಹೀಗಾಗಿ ನಿಖಿಲ್‌ಗೆ ಎದುರಾದ ಪರಿಸ್ಥಿತಿ ತನ್ನ ಪುತ್ರನಿಗೂ ಆಗಬಾರದು ಎಂದ ಉದ್ದೇಶದೊಂದಿಗೆ ಈಗಿನಿಂದಲೇ ರಾಜಕೀಯವಾಗಿ ಮಗನನ್ನ ಬೆಳೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಜಿಲ್ಲೆಯಲ್ಲಿ ಪರವಿರೋಧದ ಚರ್ಚೆ ಕೂಡ ನಡೆಯುತ್ತಿದೆ. ಈವರೆಗೆ ಜೆಡಿಎಸ್ ಮೇಲೆ ಕುಟುಂಬ ರಾಜಕಾರಣದ ಪಟ್ಟ ಕಟ್ಟುತ್ತಿತ್ತು ಕಾಂಗ್ರೆಸ್. ಈಗ ಇದೇ ವಿಚಾರವಾಗಿ ತಿರುಗೇಟು ನೀಡಿರುವ ಜೆಡಿಎಸ್, ಇದು ಕುಟುಂಬ ರಾಜಕಾರಣ ಅಲ್ವಾ? ಎಂದು ಪ್ರಶ್ನೆ ಮುಂದಿಟ್ಟಿದೆ. ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಕೂಡ ಜೆಡಿಎಸ್‌ನಲ್ಲಿ ಇಡೀ ಕುಟುಂಬವೇ ರಾಜಕಾರಣದಲ್ಲಿದೆ. ಹೀಗಿರುವಾಗ ಚಲುವರಾಯಸ್ವಾಮಿ ಪುತ್ರ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಏನು ತಪ್ಪು? ಎಂದು ತಿರುಗೇಟು ಕೊಡುತ್ತಿದ್ದಾರೆ.












Click it and Unblock the Notifications