ಮುಡಾ ಫೈಲ್ ಆ ಇಬ್ಬರ ಬಳಿ ಇರಬಹುದು: ಬೈರತಿ ಸುರೇಶ್ ಹೇಳಿದ್ದು ಯಾರ ಬಗ್ಗೆ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಕ್ರಮ ಸಂಬಂಧ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಮೇಲೆ ವಿಪಕ್ಷ ನಾಯಕರು ಮುಗಿಬಿದ್ದಿದ್ದಾರೆ. ಮುಡಾ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳು ಸುರೇಶ್ ಅವರ ಬಳಿ ಇದೆ ಎನ್ನುವ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಸಚಿವ ಸುರೇಶ್ ಅವರು ಓಪನ್ ಚಾಲೆಂಜ್ ಮಾಡಿದ್ದಾರೆ.
ನಾನು ಮುಡಾದ ದಾಖಲೆಗಳನ್ನು ತೆಗೆದುಕೊಂಡು ಬಂದಿಲ್ಲ. ನನ್ನ ಮೇಲೆ ಆರೋಪ ಮಾಡುತ್ತಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಚಾಮುಂಡೇಶ್ವರಿ ಸನ್ನಿಧಿಗೆ ಅಥವಾ ಧರ್ಮಸ್ಥಳ ಎಲ್ಲಿಗೆ ಬೇಕಾದರೂ ಬರಲಿ. ನಾನು ಅಲ್ಲೇ ಪ್ರಮಾಣ ಮಾಡಲು ಸಿದ್ಧ ಎಂದು ಸವಾಲ್ ಹಾಕಿದ್ದಾರೆ.

ನಾನು ಮುಡಾಗೆ ಸಂಬಂಧಿಸಿದ ಯಾವುದೇ ಫೈಲ್ ತಂದಿದ್ದರೆ ಸೂಕ್ತ ಶಿಕ್ಷೆಯಾಗಲಿ. ಬಹುಶಃ ಕುಮಾರಸ್ವಾಮಿ ಮನೆಯಲ್ಲಿ ಮುಡಾ ಫೈಲ್ ಇರಬಹುದು. ಇಲ್ಲವೇ ಛಲವಾದಿ ನಾರಾಯಣಸ್ವಾಮಿ ಅವರು ಮುಡಾ ಫೈಲ್ ಕದ್ದಿರಬಹುದು. ಆದರೆ, ನಾನು ಆ ಕೆಲಸ ಮಾಡಿಲ್ಲ ಎಂದು ಸಚಿವ ಸುರೇಶ್ ಕೌಂಟರ್ ನೀಡಿದ್ದಾರೆ.
ನಾನೇನಾದ್ರೂ ಮುಡಾಗೆ ಸಂಬಂಧಿಸಿದ ಒಂದು ಸಣ್ಣ ಪೇಪರ್ ತಂದಿದ್ದರೂ, ದೇವರು ನನಗೆ ಘೋರ ಶಿಕ್ಷೆ ನೀಡಲಿ. ಸುಳ್ಳು ಹೇಳಿದವರು ಹಾಳಾಗಿ ಹೋಗ್ತಾರೆ. ಕುಮಾರಸ್ವಾಮಿ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರು ಚಾಮುಂಡೇಶ್ವರಿ ಸನ್ನಿಧಿಗೆ ಅಥವಾ ಧರ್ಮಸ್ಥಳ ಎಲ್ಲಿಗಾದರೂ ಬರಲಿ. ಅವರೂ ಬರಲಿ, ನಾನೂ ಬರುತ್ತೇನೆ. ಅಲ್ಲಿ ಬಂದು ನಾನು ದೇವರ ಸಾಕ್ಷಿಯಾಗಿ ಪ್ರಮಾಣ ಮಾಡುತ್ತೇನೆ. ಅವರೂ ಮಾಡಲಿ ಎಂದು ಆಹ್ವಾನ ನೀಡಿದ್ದಾರೆ.
ಇನ್ನು ಇಂದು ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ ವಿಚಾರವಾಗಿ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ಇಡಿ) ಕೆಲವು ದಾಖಲೆಗಳನ್ನ ಕೇಳಿದ್ದಾರೆ. ಅವರು ಎಷ್ಟು ದಾಖಲೆ ಕೇಳ್ತಾರೋ, ಅಷ್ಟೂ ಕೊಡ್ತೀವಿ. ಇ.ಡಿ ನನಗೆ ನೋಟಿಸ್ ಕೊಟ್ರೆ ನಾನೂ ಉತ್ತರ ಕೊಡುವೆ ಎಂದಿದ್ದಾರೆ.

ಮುಡಾ ಹಗರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಇಂದು ಮೈಸೂರು ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಇಡಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದು, ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿತ್ತು.
ಮುಡಾ ಕೇಸ್‌ನಲ್ಲಿ ನಾಲ್ಕನೇ ಆರೋಪಿಯೂ ಆಗಿರುವ ದೇವರಾಜು ಎಂಬುವರ ಮನೆ ಮೇಲೂ ಇಡಿ ದಾಳಿ ನಡೆಸಿದೆ. ಮುಡಾದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ಹೆಸರೂ ಕೇಳಿಬಂದಿದೆ. ಈ ಕೇಸ್ ಕೋರ್ಟ್ ಮೆಟ್ಟಿಲೇರಿದರೂ ಸಿಎಂಗೆ ಮುಖಭಂಗವಾಗಿತ್ತು. ಕೊನೆಗೆ ಮುಡಾ ಸೈಟುಗಳನ್ನು ಸಿಎಂ ಪತ್ನಿ ವಾಪಸ್ ನೀಡುವುದಾಗಿ ಘೋಷಿಸಿದರು.
ಬಳಿಕ ಕೋರ್ಟ್ ನಿರ್ದೇಶನದ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆ ಈ ಪ್ರಕರಣಕ್ಕೆ ಜಾರಿ ನಿರ್ದೇಶನಾಲಯ ಎಂಟ್ರಿ ನೀಡಿದೆ. ಇಂದಿನ ಇಡಿ ದಾಳಿ ಬಗ್ಗೆ ಮಾತನಾಡಿರುವ ದೂರುದಾರ ಸ್ನೇಹಮಯಿ ಕೃಷ್ಣ, ಇದು ನನ್ನ ಹೋರಾಟಕ್ಕೆ ಸಿಕ್ಕ ಜಯ. ಇಡಿ ಅಧಿಕಾರಿಗಳು ಪ್ರಕರಣವನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಈ ಪ್ರಕರಣದ ತನಿಖೆಯ ಭಾಗವಾಗಿ ಇಡಿ ದಾಳಿ ನಡೆದಿದೆ. ಇದು ನಾನು ಮಾಡಿದ ಹೋರಾಟಕ್ಕೆ ಸಿಕ್ಕ ಜಯ ಎಂದು ಸಂತಸ ತೋಡಿಕೊಂಡಿದ್ದಾರೆ.












Click it and Unblock the Notifications