ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಹತ್ಯೆ; ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆ
ಶಿವಮೊಗ್ಗ, ಫೆಬ್ರವರಿ 21: ಶಿವಮೊಗ್ಗ ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ ಮಾಡಲಾಗಿದ್ದು, ಇದರಿಂದ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಯು.ಟಿ. ಖಾದರ್ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.
ತಪ್ಪಿತಸ್ಥರನ್ನು ಬಂಧಿಸಬೇಕೆಂದು ಕೆಪಿಸಿಸಿ ಅಧ್ಯಕ್ಷರ ಒತ್ತಾಯ
ಶಿವಮೊಗ್ಗದಲ್ಲಿ ಯುವಕನ ಕೊಲೆಗೆ ಸಂಬಂಧಿಸಿದಂತೆ ಯಾರೇ ತಪ್ಪು ಮಾಡಿದ್ದರೂ ಅವರಿಗೆ ರಕ್ಷಣೆ ನೀಡದೇ ಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಯಾವುದಕ್ಕೆ ಆಗಿದೆ ಎನ್ನುವುದರ ಬಗ್ಗೆ ನಮಗೆ ಮಾಹಿತಿಯಿಲ್ಲ. ಆದರೆ ಘಟನೆ ಕುರಿತು ತನಿಖೆ ಆಗಬೇಕು. ಈಗಾಗಲೇ ಭದ್ರಾವತಿ ಶಾಸಕ ಸಂಗಮೇಶ್ ಬಳಿ ಮಾಹಿತಿ ಪಡೆಯುತ್ತಿದ್ದೇನೆ. ಎಲ್ಲರೂ ಶಾಂತಿ ಕಾಪಾಡಬೇಕು. ಯಾರೂ ಈ ಘಟನೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.

ಕುವೆಂಪು ಶಾಂತಿಯ ತೋಟ ಎಂದಿದ್ದಾರೆ. ಶಿವಮೊಗ್ಗ ಶಾಂತಿಯಿಂದಿರಬೇಕು, ರಾಜ್ಯ ಶಾಂತಿಯಿಂದ ಇರಬೇಕು ಎಂದು ಹೇಳಿದ್ದರು. ಆದರೆ ಇಲ್ಲಿಂದಲೇ ಶಾಂತಿ ಕದಡುತ್ತಿದೆ. ಈ ರೀತಿ ಆಗಬಾರದು. ನಮ್ಮ ದೇಶ ಶಾಂತಿಯಿಂದ ಇರಬೇಕು. ಇದಕ್ಕಾಗಿಯೇ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ನಾವು ಹೋರಾಡುತ್ತಿದ್ದೇವೆ ಎಂದರು.
ಈಗಾಗಲೇ ಶಿವಮೊಗ್ಗದಲ್ಲಿ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಪರಿಸ್ಥಿತಿ ನಿಯಂತ್ರಿಸಲು ಗುಂಪುಗೂಡಿದ್ದ ಯುವಕರನ್ನು ಪೊಲೀಸರು ಮನೆಯತ್ತ ವಾಪಸ್ ಕಳುಹಿಸಿದ್ದಾರೆ ಮತ್ತು ಮುಂಜಾಗ್ರತಾ ಕ್ರಮವಾಗಿ ತಕ್ಷಣದಿಂದಲೇ ಜಿಲ್ಲೆಯಾದ್ಯಂತ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಯುವಕನ ಹತ್ತೆ ದುರದೃಷ್ಟಕರ; ಯು.ಟಿ. ಖಾದರ್
ಶಿವಮೊಗ್ಗ ಯುವಕನ ಹತ್ತೆ ಪ್ರಕರಣ ದುರದೃಷ್ಟಕರವಾಗಿದ್ದು, ಸರ್ಕಾರ ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಶಿವಮೊಗ್ಗ ನಗರದಲ್ಲಿ ಅನ್ಯಕೋಮಿನ ಗುಂಪೊಂದು ಭಜರಂಗದಳ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆಗೈದಿರುವ ವಿಚಾರವಾಗಿ ಮಾಧ್ಯಮದ ಜೊತೆ ಮಾತನಾಡಿದ ಯು.ಟಿ. ಖಾದರ್, ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಪ್ರಕರಣದ ಆರೋಪಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಿ ಬಂಧಿಸಬೇಕೆಂದು ಒತ್ತಾಯಿಸುತ್ತೇನೆ ಎಂದರು.
ಸರ್ಕಾರಕ್ಕೆ ಇದು ನಾಚಿಕೆಗೇಡಿನ ವಿಚಾರ. ರಾಜ್ಯದ ಮಾಜಿ ಮುಖ್ಯಮಂತ್ರಿ, ಗೃಹ ಸಚಿವರು, ಹಿರಿಯ ಸಚಿವರೆಲ್ಲರೂ ಇರುವ ಪ್ರದೇಶದಲ್ಲಿ ಹಾಡಹಗಲಿನಲ್ಲಿಯೇ ಈ ಘಟನೆ ನಡೆದಿದೆ ಎಂದರೆ ಈ ಕಿಡಿಗೇಡಿಗಳಿಗೆ ಎಷ್ಟು ಧೈರ್ಯವಿದೆ. ಸರ್ಕಾರ ಹಾಗೂ ಕಾನೂನಿನ ಭಯವಿಲ್ಲ. ಇದು ದುರದೃಷ್ಟಕರ ಸಂಗತಿಯಾಗಿದೆ ಎಂದು ಯು.ಟಿ. ಖಾದರ್ ಕಿಡಿಕಾರಿದ್ದಾರೆ.
ಯಾರೋ ಮಾಡಿದ ಕೃತ್ಯಕ್ಕೆ ಯಾರನ್ನೋ ಕೊಂದು ಗಲಾಟೆ ಮಾಡುತ್ತಿದ್ದಾರೆ. ಸರ್ಕಾರ ನಷ್ಟ ಮಾಡಲು ಬಿಡಬಾರದು. ಯಾರು ಶಾಂತಿಗೆಡಿಸಲು ಪ್ರಯತ್ನಿಸುತ್ತಾರೆ ಅವರ ವಿರುದ್ಧ ಸೂಕ್ತವಾದ ಕ್ರಮಕೈಗೊಳ್ಳಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಆಡಳಿತ ಪಕ್ಷಕ್ಕೆ ನಾವು ಎಲ್ಲ ರೀತಿಯ ಕಾನೂನು ಸುವ್ಯವಸ್ಥೆಯನ್ನು ಜಾರಿಗೊಳಿಸಲು ಸಹಕಾರ ನೀಡುತ್ತೇವೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.












Click it and Unblock the Notifications