ಸರ್ಕಾರ ರಚನೆಗೂ ಮುನ್ನ ಕಾಂಗ್ರೆಸ್ ನಲ್ಲಿ ಶುರುವಾಯ್ತು ಸಿಎಂ ಸ್ಥಾನಕ್ಕಾಗಿ ಕಸರತ್ತು: ಯಾರ‍್ಯಾರಿದ್ದಾರೆ ರೇಸ್ ನಲ್ಲಿ?
ಬೆಂಗಳೂರು,ಮೇ 12: ರಾಜ್ಯ ವಿಧಾನಸಭಾ ಎಲೆಕ್ಷನ್ಗೆ ಮತದಾನ ಮುಗಿದು ರಿಸಲ್ಟ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಗೆಲುವಿನ ಸನಿಹದಲ್ಲಿರುವ ಕಾಂಗ್ರೆಸ್ ನಲ್ಲಿ ಸರ್ಕಾರ ರಚನೆಗೆ ಸಿದ್ದತೆ ನಡೆಯುತ್ತಿದ್ದು, ಆಪರೇಷನ್ ಕಮಲದ ಭೀತಿಯಲ್ಲಿರುವ ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳವ ತಂತ್ರಗಾರಿಕೆಯನ್ನ ನಡೆಸಿದ್ದು, ಸಿಎಂ ಸ್ಥಾನಕ್ಕಾಗಿ ಹಲವು ಕಸರತ್ತು ನಡೆಯುತ್ತಿವೆ.
ಬಹುತೇಕ ಸಮೀಕ್ಷೆಯಂತೆ ಕಾಂಗ್ರೆಸ್ ಈ ಬಾರೀ ಬಹುಮತವನ್ನ ಗಳಿಸಲಿದೆ ಎಂದು ಕಾಂಗ್ರೆಸ್ ನಾಯಕರುವ ಸರ್ಕಾರ ರಚಿಸುವ ವಿಶ್ವಾಸದಲ್ಲಿದ್ದು, ಕಾಂಗ್ರೆಸ್‌ನಲ್ಲಿ ಸಿಎಂ ಗಾದಿಗೆ ಏರುವ ಬಗ್ಗೆ ನಾನಾ, ನೀನಾ ಎಂಬ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಕಳೆದ ಒಂದು ವರ್ಷದಿಂದ ಕುರುಬ ಸಮುದಾಯದ ನಾಯಕ ಸಿದ್ದರಾಮಯ್ಯ ಹಾಗೂ ಒಕ್ಕಲಿಗ ಸಮುದಾಯದ ನಾಯಕ ಡಿ ಕೆ ಶಿವಕುಮಾರ್ ನಡುವೆ ಬಾರೀ ಪೈಪೋಟಿ ಏರ್ಪಟ್ಟಿದ್ದು, ಹತ್ತು ಹಲವು ನಾಯಕರು ಇದೀಗ ಸಿಎಂ ರೇಸ್ ನಲ್ಲಿದ್ದಾರೆ.

ಕಾಂಗ್ರೆಸ್ ನಲ್ಲಿ ಹತ್ತು ಹಲವು ನಾಯಕರು ಸಿಎಂ ಸ್ಥಾನದ ರೇಸ್ ನಲ್ಲಿದ್ದು, ಯಾರು ಎಷ್ಟನೇ ಸ್ಥಾನದಲ್ಲಿದ್ದಾರೆ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಆ ಮೂಲಕ ಕೈ ಪಾಳಯದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ.
ಸಿದ್ದರಾಮಯ್ಯ ಪರ ಹಲವು ನಾಯಕರ ಬೆಂಬಲ
ಮೊದಲಿನಿಂದಲೂ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಗಬೇಕು ಎಂದು ಪಕ್ಷದ ಶಾಸಕರು ಹಾಗೂ ಬೆಂಬಲಿಗರಿಂದ ಪದೇ ಪದೇ ಮಾತು ಕೇಳಿಬಂದಿತ್ತು. ಅದು ಅಲ್ಲದೇ ಹಲವು ಸಮೀಕ್ಷೆಗಳಲ್ಲೂ ಸಿದ್ದರಾಮಯ್ಯ ಫೇವರೇಟ್ ಆಗಿದು, ಬಹುತೇಕ ಜನರು ಸಿದ್ದರಾಮಯ್ಯ ಅವರನ್ನೇ ಆಯ್ಕೆ ಮಾಡಿದ್ದಾರೆ. ಅದು ಅಲ್ಲದೇ ಹೈಕಮಾಂಡ್ ನಾಯಕರ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಸಿದ್ದರಾಮಯ್ಯ ಪರ ಹೈಕಮಾಂಡ್ ಒಲವು ತೋರುವ ಸಾಧ್ಯತೆ ಇದೆ. ಇತ್ತ ಸಿದ್ದರಾಮಯ್ಯ ಅವರು ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದು, ಕಾಂಗ್ರೆಸ್ ಪಾಳಯದಲ್ಲಿ ಸಿದ್ದರಾಮಯ್ಯ ಪರ ಹಲವು ನಾಯಕರು ಬ್ಯಾಟಿಂಗ್ ಬಿಸುವ ಸಾದ್ಯತೆ ಹೆಚ್ಚಾಗಲಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಸಿಎಂ ರೇಸ್ ನಲ್ಲಿ
ದಲಿತ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಅವರ ಸಹ ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ ಎಂದು ಹೇಳಲಾಗಿದ್ದು, ದಲಿತ ಸಮುದಾಯದ ಮುಚ್ಚೂಣಿ ನಾಯಕರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಅವರು ದಲಿತ ಸಮುದಾಯ ಎಂದು ಅವಕಾಶ ಬೇಡ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಸಮುದಾಯದ ನಾಯಕ ಎಂದು ಪರಿಗಣಿಸಿ ಅವಕಾಶ ಕೊಡಿ ಎಂದು ಹಲವಾರು ಬಾರಿ ಹೇಳಿದ್ದರು. ಇದೀಗ ಎಐಸಿಸಿ ಅಧ್ಯಕ್ಷರಾಗಿದ್ದು, ಅವರ ಹೆಸರು ಸಿಎಂ ರೇಸ್ ನಲ್ಲಿ ಕೇಳಿ ಬಂದಿದೆ.

ಸಿಎಂ ಸ್ಥಾನಕ್ಕಾಗಿ ಡಿ ಕೆ ಶಿವಕುಮಾರ್ ಕಸರತ್ತು
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಂ ಸ್ಥಾನಕ್ಕೆ ಕಣ್ಣಿಟ್ಟಿರುವ ಪ್ರಮುಖರ ಪೈಕಿ ಡಿಕೆ ಶಿವಕುಮಾರ್ ಓರ್ವ ಪ್ರಬಲ ಆಕಾಂಕ್ಷಿ. ಸಿಎಂ ಸ್ಥಾನಕ್ಕೆ ಅವರು ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ಇದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನ ವಹಿಸಿಕೊಂಡ ದಿನದಿಂದಲೂ ಪಕ್ಷ ಸಂಘಟನೆಯನ್ನ ನಡೆಸಿದ್ದು, ಹೈಕಮಾಂಡ್ ನಾಯಕರ ಮಟ್ಟದಲ್ಲೂ ಉತ್ತಮ ಸಂಬಂಧವನ್ನ ಇಟ್ಟುಕೊಂಡಿದ್ದು, ಮಲ್ಲಿಕಾರ್ಜುನ್ ಖರ್ಗೆ ಬೆಂಬಲ ಈ ಬಾರೀ ಡಿ ಕೆ ಶಿವಕುಮಾರ್ ಅವರ ಮೇಲೆ ಇರಲಿದೆ ಎಂದು ಹೇಳಲಾಗಿದೆ.
ಎಂ.ಬಿ ಪಾಟೀಲ್, ದೇಶಪಾಂಡೆ, ಪರಂ ಸೇರದಂತೆ ಹಲವರು ಸಿಎಂ ರೇಸ್ ನಲ್ಲಿ
ಕಾಂಗ್ರೆಸ್ ನ ಹಿರಿಯ ನಾಯಕರಾದ ಆರ್ ವಿ ದೇಶಪಾಂಡೆಯವರ ಸಹ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು, ಪಕ್ಷ ಸಂಘಟನೆ ಸೇರಿದಂತೆ ಯಾವುದೇ ರೀತಿಯ ಕಳಂಕಗಳು ಸಹ ಕೇಳಿ ಬಂದಿಲ್ಲ. ಇನ್ನೂ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಸದ್ದು ಮಾಡಿದ್ದು ಲಿಂಗಾಯತ ಮುಖ್ಯಮಂತ್ರಿ ವಿಚಾರ, ಇದೀಗ ಲಿಂಗಾಯತ ಸಮುದಾಯದ ನಾಯಕ ಎಂ ಬಿ ಪಾಟೀಲ್ ಸಹ ನಾನು ಸಹ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೆಯನ್ನ ನೀಡಿದ್ದು, ಸಿಎಂ ಆಗುವ ಆಸೆಯನ್ನ ವ್ಯಕ್ತಪಡಿಸಿದ್ದರು.
ಇನ್ನೂ ಕಾಂಗ್ರೆಸ್‌ನಲ್ಲಿ ದಲಿತ ಸಮುದಾಯದ ನಾಯಕ ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ ಅವರ ಹೆಸರು ಕೇಳಿಬರುತ್ತಿದ್ದು, ನಾನು ಸಹ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಮಾಧ್ಯಮಗಳ ಮೂಲಕ ತಮ್ಮ ಆಸೆಯನ್ನ ವ್ಯಕ್ತಪಡಿಸಿದ್ದರು, ಇನ್ನು ಹೆಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ರಾಮಲಿಂಗರೆಡ್ಡಿ ಸೇರಿದಂತೆ ಮಲ್ಲಿಕಾರ್ಜುನ್ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರ ಹೆಸರು ಸಹ ಇದೀಗ ಮುನ್ನಲೆಗೆ ಬಂದಿದ್ದು, ಒಂದು ವೇಳೆ ಕಾಂಗ್ರೆಸ್ ಪಕ್ಷ ಬಹುಮತವನ್ನ ಗಳಿಸಿದರೇ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಅಂತ ಕಾದುನೋಡ್ಬೇಕಾಗಿದೆ.












Click it and Unblock the Notifications