ಪ್ರಶ್ನೆಗಳು ಮುಗಿದಿಲ್ಲ ಸಾಲು ಸಾಲು ಪ್ರಶ್ನೆಗಳಿವೆ ಉತ್ತರಿಸಿ; ಮೋದಿ ಗೆ 14 ಪ್ರಶ್ನೆಗಳನ್ನ ಕೇಳಿದ ಸಿದ್ದರಾಮಯ್ಯ
ನನ್ನ ಪ್ರಶ್ನೆಗಳು ಮುಗಿದಿಲ್ಲ ಸಾಲು ಸಾಲು ಪ್ರಶ್ನೆಗಳಿವೆ. ಇಂದೂ ಸಹ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದೇನೆ ಉತ್ತರಿಸುವ ಧೈರ್ಯವನ್ನು ತೋರಿಸುತ್ತೀರೆಂದು ನಂಬಿದ್ದೇನೆ ಎಂದು 14 ಪ್ರಶ್ನೆಗಳನ್ನ ಸಿದ್ದರಾಮಯ್ಯ ಕೇಳಿದ್ದಾರೆ.
ಬೆಂಗಳೂರು,ಫೆಬ್ರವರಿ13: ಪ್ರಧಾನಿ ಮೋದಿಯವರು ಮತ್ತು ಗೃಹ ಸಚಿವ ಅಮಿತ್ ಶಾ ಅವರೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಪದೇ ಪದೇ ಕರ್ನಾಟಕಕ್ಕೆ ಬರುತ್ತಿದ್ದೀರಿ. ನಿಮಗೆ ಪ್ರವಾಹ ಬಂದಾಗ ನೆನಪಾಗದ ಕರ್ನಾಟಕ, ಆಕ್ಸಿಜನ್ ಇಲ್ಲದೆ ರಾಜ್ಯದಲ್ಲಿ ಕೋವಿಡ್ ರೋಗಿಗಳು ಮರಣ ಹೊಂದಿದಾಗ ನೆನಪಾಗದ ಕರ್ನಾಟಕ ವಿಮಾನ ಹಾರಿಸುವಾಗ ನೆನಪಾಗುತ್ತದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ರಾಜ್ಯಕ್ಕೆ ಪ್ರತಿ ಬಾರಿಯೂ ಬಂದಾಗ ನಾನು ಕೇಳಿದ ಪ್ರಶ್ನೆಗಳಿಗೆ ನೀವು ಉತ್ತರವನ್ನ ಕೊಟ್ಟಿಲ್ಲ. ನನ್ನ ಪ್ರಶ್ನೆಗಳು ಮುಗಿದಿಲ್ಲ ಸಾಲು ಸಾಲು ಪ್ರಶ್ನೆಗಳಿವೆ. ಇಂದೂ ಸಹ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದೇನೆ ಉತ್ತರಿಸುವ ಧೈರ್ಯವನ್ನು ತೋರಿಸುತ್ತೀರೆಂದು ನಂಬಿದ್ದೇನೆ ಎಂದು 14 ಪ್ರಶ್ನೆಗಳನ್ನ ಸಿದ್ದರಾಮಯ್ಯ ಕೇಳಿದ್ದಾರೆ.
1. 2014 ರಲ್ಲಿ ತಾವು ಅಧಿಕಾರಕ್ಕೆ ಬಂದ ದಿನದಿಂದ ಕೇಂದ್ರ ಸರ್ಕಾರವು ಇದುವರೆಗೆ ಕರ್ನಾಟಕದಿಂದ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಜಿಎಸ್‍ಟಿ ಹಾಗೂ ಜಿಎಸ್‍ಟಿ ಬರುವುದಕ್ಕೂ ಪೂರ್ವದಲ್ಲಿದ್ದ ವಿವಿಧ ರೀತಿಯ ತೆರಿಗೆಗಳು, ಅಡಿಷನಲ್ ಎಕ್ಸೈಸ್ ಡ್ಯೂಟಿ, ವಿವಿಧ ಸೆಸ್ಸುಗಳು, ಸರ್ ಛಾರ್ಜುಗಳು, ಕಸ್ಟಮ್ಸ್ ಡ್ಯೂಟಿ ಹಾಗೂ ಇತರೆ ಎಲ್ಲ ಮೂಲಗಳಿಂದ ವರ್ಷವಾರು ಸಂಗ್ರಹಿಸಿದ ಸಂಪನ್ಮೂಲಗಳೆಷ್ಟು?

2. ಭಾರತದಿಂದ ರಫ್ತು ಮಾಡುವ ಪ್ರಮಾಣ ಒಟ್ಟು ಮೌಲ್ಯವೆಷ್ಟು? ಇದರಲ್ಲಿ ಕರ್ನಾಟಕದಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳ ಪಾಲಿನ ಪ್ರಮಾಣ ಎಷ್ಟು? ಇದರಿಂದ ವರ್ಷವಾರು ಕೇಂದ್ರಕ್ಕೆ ಸಂಗ್ರಹವಾಗುವ ಆದಾಯವೆಷ್ಟು?
3. ಹಾಗೆಯೆ ಗುಜರಾತು, ಉತ್ತರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮಬಂಗಾಳ ಮುಂತಾದ ದೊಡ್ಡವಾದ ಎಂಟು ರಾಜ್ಯಗಳಿಂದ ಎಷ್ಟು ಸಂಗ್ರಹ ಮಾಡುತ್ತಿದ್ದೀರಿ ಎಂಬುದನ್ನು ರಾಜ್ಯವಾರು ಮಾಹಿತಿ ಕೊಡಿ.
4. ಕೇಂದ್ರ ಸರ್ಕಾರವು ಕರ್ನಾಟಕದಿಂದ ಒಟ್ಟಾರೆ ಸಂಗ್ರಹಿಸಿದ ಆದಾಯದಲ್ಲಿ ಕರ್ನಾಟಕಕ್ಕೆ ವಾಪಸ್ಸು ಕೊಟ್ಟಿದ್ದೆಷ್ಟು? ಎಷ್ಟು ತೆರಿಗೆ ಪಾಲು ಕೊಟ್ಟಿದ್ದೀರಿ? ಕೇಂದ್ರ ಪುರಸ್ಕøತ ಯೋಜನೆಗಳಿಗೆ ಎಷ್ಟು ಕೊಟ್ಟಿದ್ದೀರಿ? ಎಷ್ಟು ಕಿಮೀ ಹೆದ್ದಾರಿ ನಿರ್ಮಿಸಿದ್ದೀರಿ, ಎಷ್ಟು ಕಿಮೀ ರೈಲ್ವೆ ನಿರ್ಮಿಸಿದ್ದೀರಿ? ಎಷ್ಟು ವಿಶೇಷ ಅನುದಾನ ಕೊಟ್ಟಿದ್ದೀರಿ? ಕರ್ನಾಟಕದ ರೈತರಿಗೆ, ಕಾರ್ಮಿಕರಿಗೆ, ವ್ಯಾಪಾರಿಗಳಿಗೆ, ಸಣ್ಣ ಪುಟ್ಟ ಉದ್ಯಮಿಗಳಿಗೆ, ಮೀನುಗಾರರಿಗೆ, ಪರಿಶಿಷ್ಟ ಜಾತಿ, ಪಂಗಡಗಳ ಜನರಿಗೆ, ಮಹಿಳೆಯರಿಗೆ, ನೇಕಾರರಿಗೆ, ಮಕ್ಕಳ ಕಲ್ಯಾಣಕ್ಕೆ ಎಷ್ಟು ಖರ್ಚು ಮಾಡಿದ್ದೀರಿ?

5. ಗುಜರಾತು, ಉತ್ತರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮುಂತಾದ ದೊಡ್ಡವಾದ ಎಂಟು ರಾಜ್ಯಗಳಿಗೆ ಎಷ್ಟು ಖರ್ಚು ಮಾಡಿದ್ದೀರಿ? ಆ ರಾಜ್ಯಗಳ ಮೂಲಭೂತ ಸೌಕರ್ಯಗಳಿಗೆ ಎಷ್ಟು ಅನುದಾನ ಕೊಟ್ಟಿದ್ದೀರಿ ಎಂಬ ಮಾಹಿತಿಯನ್ನು ಕನ್ನಡಿಗರ ಮುಂದೆ ಮಂಡಿಸಿ.
6. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆಂದು ಇರುವ ಯೋಜನೆಯಾದ ಗ್ರಾಮ ಸಡಕ್ ಯೋಜನೆಗೆ ಯಾವ ಯಾವ ರಾಜ್ಯಗಳಿಗೆ ಎಷ್ಟು ಕೊಟ್ಟಿದ್ದೀರಿ?
7. ಅಮಿತ್ ಶಾ ಅವರು ಕರಾವಳಿಯಲ್ಲಿ ಕರಾವಳಿಯವರು ಅಡಿಕೆ ಬೆಳೆಯುತ್ತಾರೆ, ಗುಜರಾತಿನವರು ಬಳಸುತ್ತಾರೆ ಎಂದು ಹೇಳಿದ್ದೀರಿ? ಆದರೆ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅಡಿಕೆ ಬೆಲೆ 90000 ರೂ ದಾಟಿತ್ತು. ಈಗ 40-45 ಸಾವಿರ ರೂಪಾಯಿಗಳಿಗೆ ಕುಸಿದಿದೆ. ಈ ಪ್ರಮಾಣದಲ್ಲಿ ಕುಸಿಯಲು ಕಾರಣವೇನು? ಲಭ್ಯ ಮಾಹಿತಿಯ ಪ್ರಕಾರ ಬೇರೆ ಬೇರೆ ದೇಶಗಳಿಂದ 65000 ಟನ್ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿರುವುದು ಕಾರಣವಾ ಅಥವಾ ಗುಜರಾತಿನ ವ್ಯಾಪಾರಿಗಳು ಕರಾವಳಿಯ ಅಡಿಕೆ ಕೊಳ್ಳುವುದನ್ನು ನಿಲ್ಲಿಸಿದ್ದಾರಾ? ಕರ್ನಾಟಕದ ಅಡಿಕೆ, ತೆಂಗು, ಮೆಣಸು, ಕಾಫಿ ಮುಂತಾದ ಬೆಳೆಗಾರರಿಗೆ ಅನ್ಯಾಯ ಮಾಡುತ್ತಿರುವುದು ಯಾರು?

8. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಸಾಲ ಮಾಡಿ ಸಾಲ ತೀರಿಸದೆ ದೇಶ ಬಿಟ್ಟು ಓಡಿ ಹೋದ 28 ಜನ ಉದ್ಯಮಿಗಳಲ್ಲಿ 27 ಜನ ಗುಜರಾತು ಮೂಲದವರು. ಅವರ ಸಾಲ ಮನ್ನಾ ಮಾಡಲು ಬರೋಡಾ ಬ್ಯಾಂಕು ಮುಂತಾದ ಗುಜರಾತ್ ಮೂಲದ ಬ್ಯಾಂಕುಗಳನ್ನು ಖಾಲಿ ಮಾಡಿದಿರಿ. ಆದ್ದರಿಂದ ಕರ್ನಾಟಕ ಮೂಲದ ಲಕ್ಷಾಂತರ ಕೋಟಿ ಸಂಪತ್ತಿದ್ದ ಬ್ಯಾಂಕುಗಳನ್ನು ಕಿತ್ತುಕೊಂಡಿದ್ದೀರಿ. ಇದರಿಂದ ಕನ್ನಡಿಗರ ಐಡೆಂಟಿಟಿ ಹೋಯ್ತು, ನಮ್ಮ ಸಂಪತ್ತು ಹೋಯ್ತು, ನಮ್ಮ ಯುವಕ ಯುವತಿಯರಿಗೆ ಸಿಗುತ್ತಿದ್ದ 1 ಲಕ್ಷ ಉದ್ಯೋಗಗಳೂ ಹೋದವು. ಕರ್ನಾಟಕದ ರೈತರಿಗೆ, ಬಡವರಿಗೆ, ಕಾರ್ಮಿಕರಿಗೆ ಕನ್ನಡದಲ್ಲಿಯೆ ಸಿಗುತ್ತಿದ್ದ ಸೌಲಭ್ಯಗಳು ಇಲ್ಲವಾದವು. ಈ ಅನ್ಯಾಯಕ್ಕೆ ಕಾರಣ ಯಾರು?
9. ಕರ್ನಾಟಕದಲ್ಲಿ ವೈಮಾನಿಕ ಉದ್ಯಮವನ್ನು ಬೆಳೆಸುವುದರಲ್ಲಿ ಕಾಂಗ್ರೆಸ್ ಸರ್ಕಾರಗಳ ಕೊಡುಗೆ ಏನು? ಬಿಜೆಪಿ ಸರ್ಕಾರಗಳ ಕೊಡುಗೆ ಏನು? ಕಾಂಗ್ರೆಸ್ ಸರ್ಕಾರಗಳ ಸಾಧನೆಯನ್ನು ಬಿಜೆಪಿ ಸಾಧನೆ ಎನ್ನಲು ನಿಮಗೆ ಲಜ್ಜೆಯೇ ಆಗುವುದಿಲ್ಲವೆ? ನಿಮ್ಮ ಸಾಧನೆ ಏನು ತಿಳಿಸಿ.
10. ಎಚ್‍ಎಎಲ್ ಗೆ ನೀಡಬೇಕಾದ ವಿಮಾನಗಳ ತಯಾರಿಕೆಯನ್ನು ಫ್ರಾನ್ಸ್ ಕಂಪೆನಿಗೆ ಕೊಟ್ಟಿದ್ದೀರಿ? ಸರಬರಾಜು ಮಾಡಲು ಯಾವ ಅನುಭವವೂ ಇಲ್ಲದ ಅನಿಲ್ ಅಂಬಾನಿಗೆ ಕೊಟ್ಟಿದ್ದೀರಿ, ಅನೇಕ ಯುದ್ಧ ಸಾಮಗ್ರಿಗಳನ್ನು ಪೂರೈಸಲು ಅನುಭವವೇ ಇಲ್ಲದ ಅದಾನಿಗೆ ಕೊಟ್ಟಿದ್ದೀರಿ, ರೈಲುಗಳಿಗೆ ಕೋಚ್‍ಗಳನ್ನು ತಯಾರಿಸಿಕೊಡುತ್ತಿದ್ದ ಬಿಎಚ್‍ಎಎಲ್ ಬದಲಿಗೆ ಚೀನಾ ಮುಂತಾದ ವಿದೇಶಗಳಿಗೆ ಪೂರೈಕೆ ಆದೇಶ ಕೊಟ್ಟಿದ್ದೀರಿ ಇದರಿಂದ ಕರ್ನಾಟಕದಲ್ಲಿದ್ದ ಕೇಂದ್ರ ಸರ್ಕಾರದ ಕಂಪೆನಿಗಳಿಗೆ ನಷ್ಟವಾಯಿತು. ಈ ಅನ್ಯಾಯಕ್ಕೆ ಯಾರು ಹೊಣೆ ಮೋದಿಯವರೆ?
11. ನಮ್ಮ ರಾಜ್ಯದ ಪಾಲಿಗೆ ಇದ್ದ ಸಿಆರ್‍ಪಿಎಫ್ ಘಟಕವನ್ನು ಕಿತ್ತು ಉತ್ತರಪ್ರದೇಶಕ್ಕೆ ಕೊಟ್ಟುಬಿಟ್ಟಿರಿ. ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಮನಮೋಹನ್‍ಸಿಂಗ್ ಅವರ ನೇತೃತ್ವದ ಕೇಂದ್ರ ಸರ್ಕಾರ ಘೋಷಣೆ ಮಾಡಿ ಅನುದಾನಗಳನ್ನು ಕೊಟ್ಟುಕೊಂಡು ಬಂದಿದೆ. ಆದರೆ ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಂಸ್ಕøತಕ್ಕೆ ಖರ್ಚು ಮಾಡುತ್ತಿರುವ ಅನುದಾನಗಳ ಶೇ.1 ರಷ್ಟು ಕೂಡ ಕನ್ನಡಕ್ಕೆ ಕೊಡುತ್ತಿಲ್ಲ. ಈ ಅನ್ಯಾಯದ ಹೊಣೆಯನ್ನು ನೀವಲ್ಲದೆ ಯಾರು ಹೊರಬೇಕು?
12. ಮನಮೋಹನಸಿಂಗರು 371 ಜೆ ಅಡಿ ಕಲ್ಯಾಣ ಕರ್ನಾಟಕದ ಪ್ರದೇಶಗಳನ್ನು ತಂದರು. ಅದಕ್ಕೂ ಮೊದಲು ಅಡ್ವಾನಿಯವರೆ ರಾಜ್ಯದ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಆದರೆ ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಲ್ಯಾಣ ಕರ್ನಾಟಕಕ್ಕೆ ಒಂದು ಪೈಸೆ ಹಣ ಕೊಡಲಿಲ್ಲ.
13. ಅದಾನಿಗೆ ದೇಶದ ಸಂಪತ್ತನ್ನೆಲ್ಲ ಬೀಡುಬೀಸಾಗಿ ಕೊಟ್ಟು ಎಲ್‍ಐಸಿ ಮತ್ತು ಎಸ್‍ಬಿಐ ಮುಂತಾದ ಸಂಸ್ಥೆಗಳನ್ನು ಸಂಕಷ್ಟಕ್ಕೆ ಸಿಲುಕಿಸಿದ್ದೀರಿ. ಇದರಿಂದ ಬಡವರು ಮತ್ತು ಮಧ್ಯಮವರ್ಗದ ಜನರ ಉಳಿತಾಯವನ್ನು ಲೂಟಿ ಹೊಡೆಯಲು ಅವಕಾಶ ಕೊಟ್ಟು ದೇಶಕ್ಕೆ ಬಹಳ ದೊಡ್ಡ ದ್ರೋಹ ಮಾಡಿದ್ದೀರಿ. ಲೋಕಸಭೆಯಲ್ಲಿ ಅದಾನಿ ಕುರಿತು ವಿರೋಧ ಪಕ್ಷಗಳು ಪ್ರಶ್ನೆ ಎತ್ತಿದರೆ ಅದಕ್ಕೆ ಉತ್ತರ ಕೊಡುವುದು ಬಿಟ್ಟು ಆತ್ಮರತಿಯಲ್ಲಿ ತೊಡಗಿಬಿಟ್ಟಿರಿ. ರಾಜ್ಯಸಭೆ ಮತ್ತು ಲೋಕಸಭೆಗೆ ಉತ್ತರ ನೀಡದೆ ನಟನೆ ಮಾಡಬಹುದು ಆದರೆ ದೇಶದ ಜನರಿಗೆ ನೀವು ಉತ್ತರ ಕೊಡಲೇಬೇಕಲ್ಲ? ಆ ಉತ್ತರವನ್ನು ಉತ್ತರವನ್ನು ಕರ್ನಾಟಕದಲ್ಲಿಯೆ ಕೊಡಿ.
14. ಕರ್ನಾಟಕದಿಂದ ಸರ್ವಸ್ವವನ್ನು ಕಿತ್ತುಕೊಂಡು ಅನುದಾನಗಳನ್ನು ಕೊಡದೆ ಅನ್ಯಾಯ ಮಾಡಿ ರಾಜ್ಯವನ್ನು ಅಭಿವೃದ್ಧಿಯಲ್ಲಿ ಹಿಂದಕ್ಕೆ ತಳ್ಳಿ, ಸಾಲಗಾರ ರಾಜ್ಯವಾಗುವಂತೆ ಮಾಡಿ ವಿಕೃತ ಖುಷಿ ಪಡುತ್ತಿರುವ ನಿಮ್ಮನ್ನು ಕನ್ನಡಿಗರು ಹೇಗೆ ಸ್ವಾಗತಿಸಬೇಕು ಹೇಳಿ ಅಮಿತ್‍ಶಾ ಮತ್ತು ಮೋದಿಯವರೆ?












Click it and Unblock the Notifications