ಹತ್ತು ಪ್ರಶ್ನೆಗಳಿಗೆ ಉತ್ತರಿಸಲು ಬಿಜೆಪಿ ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಸವಾಲು
ಬೆಂಗಳೂರು,ಡಿಸೆಂಬರ್ 17: ಸರ್ಕಾರ 545 ಹಾಗೂ 402 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿತ್ತು. 545 ನೇಮಕಾತಿ ಪ್ರಕ್ರಿಯೆ ಹಗರಣದ ವಿಚಾರ ಎಲ್ಲರಿಗೂ ಗೊತ್ತಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ 2 ಆಡಿಯೋಗಳು ಹರಿದಾಡುತ್ತಿವೆ. ಅಭ್ಯರ್ಥಿಯೊಬ್ಬರು ಗೃಹಸಚಿವರ ಜತೆ ಮಾತನಾಡುತ್ತಿದ್ದಾರೆ. ಈ ಆಡಿಯೋ ಹಿನ್ನೆಲೆಯಲ್ಲಿ ನಾವು ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ 10 ಪ್ರಶ್ನೆಗಳನ್ನು ಕೇಳಬಯಸುತ್ತೇವೆ. ಈ ಆಡಿಯೋ ವಿಚಾರಕ್ಕೂ ನಮಗೆ ನೋಟಿಸ್ ನೀಡುತ್ತಾರೋ ಏನೋ? ಎಂದು ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ.
ಪ್ರಿಯಾಂಕ ಖರ್ಗೆ ಬಿಜೆಪಿ ಸರ್ಕಾರಕ್ಕೆ ಕೇಳಿರುವ ಹತ್ತು ಪ್ರಶ್ನೆಗಳು
1. 402 ಹುದ್ದೆಗಳ ನೇಮಕಾತಿಯಲ್ಲೂ ಅಕ್ರಮ ನಡೆದಿದ್ದು, ಅದಕ್ಕೆ ಸಂಬಂಧಿಸಿದಂತೆ ನಾವು ಸಿಐಡಿಗೆ ಸಾಕ್ಷಿ ಪುರಾವೆ ಸಲ್ಲಿಸಿದ್ದೇವೆ ಎಂದು ಅಭ್ಯರ್ಥಿ ಗೃಹಸಚಿವರಿಗೆ ಹೇಳಿದ್ದಾರೆ. ಆದರೂ ತನಿಖೆಗೂ ಮುನ್ನ ಮತ್ತೆ ನೇಮಕಾತಿ ಪ್ರಕ್ರಿಯೆ ಮುಂದುವರಿಯುತ್ತಿರುವುದೇಕೆ?
2. ನೀವು ಕೇವಲ ಉತ್ತರ ಪರೀಕ್ಷೆ ವಿಚಾರವಾಗಿ ತನಿಖೆ ಮಾಡುತ್ತಿದ್ದೀರಿ. ಆದರೆ ದೈಹಿಕ ಪರೀಕ್ಷೆಯಲ್ಲೂ ಅಕ್ರಮವಾಗಿದೆ. ಪ್ರಶ್ನೆ ಪತ್ರಿಕೆ 1ರಲ್ಲೂ ಅಕ್ರಮ ನಡೆದಿದ್ದು, ಅದಕ್ಕೂ ನಾವು ಸಾಕ್ಷಿ ನೀಡಿದ್ದು ಹೇಳಿದ್ದು, ಸರ್ಕಾರ ಈ ಬಗ್ಗೆ ತನಿಖೆ ಯಾಕೆ ಮಾಡುತ್ತಿಲ್ಲ?
3. ಆರೋಪಿಗಳಿಗೆ ಜಾಮೀನು ಹೇಗೆ ಸಿಗುತ್ತಿದೆ ಎಂದು ಕೇಳಿದಾಗ. ಅದು ತಾಂತ್ರಿಕ ಸಮಸ್ಯೆಯಿಂದ ಆಗಿದ್ದು, ನಾವು ಮೇಲ್ಮನವಿ ಹಾಕಬೇಕಾ ಬೇಡವೆ ಎಂದು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ. ತಾಂತ್ರಿಕ ಸಮಸ್ಯೆ ಅಂದರೆ ಅರ್ಥವೇನು? ಗೃಹಸಚಿವರ ಪ್ರಕಾರ ಸರ್ಕಾರದ ಪರ ವಾದ ಮಾಡುತ್ತಿರುವ ವಕೀಲರು ಅಸಮರ್ಥರೇ? 56 ಸಾವಿರ ಯುವಕರಿಗೆ ಅನ್ಯಾಯವಾಗುತ್ತಿರುವಾಗ ಅದನ್ನು ವಾದ ಮಾಡಲಾಗದೇ ಜಾಮೀನು ಸಿಗುತ್ತಿದೆ ಎಂದರೆ ಸರ್ಕಾರ ಹಗರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರಾ? ಮೇಲ್ಮನವಿ ಸಲ್ಲಿಸಲು ಕಾಯುತ್ತಿರುವುದೇಕೆ?
4. ನಾವು ಡಿಜಿ, ಐಜಿ, ಕಲಬುರ್ಗಿ ಆಯುಕ್ತರ ಬಗ್ಗೆಯೂ ಸಾಕ್ಷಿ ನೀಡಿದ್ದು, ತನಿಖೆಯನ್ನು ಕೇವಲ ಅಮೃತ್ ಪೌಲ್ ಅವರಿಗೆ ಮಾತ್ರ ಸೀಮಿತಗೊಳಿಸಿರುವುದೇಕೆ? ಅವರ ಮೌನವನ್ನು ನಾವು ತಪ್ಪೊಪ್ಪಿಗೆ ಎಂದು ಭಾವಿಸಬೇಕೆ?
5. ಮೂವರು ಶಾಸಕರ ಬಗ್ಗೆ ದೂರು ಇದ್ದು, ಆಬಗ್ಗೆ ತನಿಖೆ ಯಾಕಿಲ್ಲ ಎಂದು ಕೇಳಿದಾಗ. ನಾವು ತನಿಖೆ ಮಾಡಿದ್ದು ಸಾಕ್ಷಿಗಳು ಯಾರೂ ಮುಂದೆ ಬರುತ್ತಿಲ್ಲ ಎಂದು ಹೇಳಿದ್ದಾರೆ. ಆ ಮೂವರು ಶಾಸಕರು ಯಾರು? ಅವರ ವಿರುದ್ಧ ಯಾವ ತನಿಖೆ ನಡೆದಿದೆ? ಆ ಮೂವರು ಶಾಸಕರು ಕಾಂಗ್ರೆಸ್ ನವರಾ? ಬಿಜೆಪಿಯವರಾ? ಜೆಡಿಎಸ್ ನವರಾ? ಈ ಬಗ್ಗೆ ಮಾಹಿತಿ ಬಹಿರಂಗಪಡಿಸುತ್ತಿಲ್ಲವೇಕೆ? ಈ ವಿಚಾರವನ್ನು ಅಧಿವೇಶನದಲ್ಲೂ ಚರ್ಚೆ ಮಾಡುತ್ತಿಲ್ಲ.

6. ಶಾಸಕರೊಬ್ಬರ ಆಡಿಯೋ ಸೋರಿಕೆಯಾದಾಗ ಆ ಧ್ವನಿ ನನ್ನದೇ, ಸರ್ಕಾರ ಸಚಿವರ ಪರವಾಗಿ ಡೀಲ್ ಮಾತನಾಡಿ ಶಾಸಕರ ಭವನದಲ್ಲಿ ಹಣ ಪಡೆದಿರುವುದಾಗಿಯೂ ಹೇಳಿದ್ದರು. ಆ ಬಗ್ಗೆ ತನಿಖೆ ಏನಾಯ್ತು? ಸಾಕ್ಷಿ ನೀಡುತ್ತಿರುವವರ ಮೇಲೆ ಸಿಸಿಬಿ ನೋಟೀಸ್ ನೀಡುತ್ತಿದ್ದೀರ?
7. 402 ನೇಮಕಾತಿ ಅಕ್ರಮದ ಎಲ್ಲ ಸಾಕ್ಷಿಗಳನ್ನು ನಾವು ನಿಮಗೆ ತಲುಪಿಸಿದ್ದು, ನೀವು ಅದನ್ನು ಸಿಐಡಿಗೆ ತಲುಪಿಸಿದರಾ? ಸಿಐಡಿಯಿಂದ ಸಾಕ್ಷಿ ಪರಿಶೀಲನೆ ಮಾಡಿಸಿದಿರಾ? ಆ ಸಾಕ್ಷಿಗಳು ಎಲ್ಲಿವೆ? ಈ ಬಗ್ಗೆ ಯಾಕೆ ಮಾತನಾಡುತ್ತಿಲ್ಲ?
8. ಅಂದಿನ ಹಾಗೂ ಇಂದಿನ ಗೃಹಸಚಿವರಿಗೆ ಎಲ್ಲವೂ ಗೊತ್ತಿದೆ. ಯತ್ನಾಳ್ ಅವರು ಅವಕಾಶ ಸಿಕ್ಕಾಗೆಲ್ಲಾ ಇದರಲ್ಲಿ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಇದ್ದಾರೆ. ಈ ಡೀಲ್ ವಿಧಾನಸೌಧದಲ್ಲೇ ಆಗಿದೆ ಎಂದು ಹೇಳಿದ್ದಾರೆ. ಅವರು ಬಹಿರಂಗವಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರ ವಿಚಾರಣೆ ನಡೆಸಿದರಾ? ನಾನು ಪತ್ರಿಕೆಗಳಲ್ಲಿ ಬಂದಿರುವ ಅಂಶಗಳ ಬಗ್ಗೆ ಮಾತನಾಡಿದ್ದಕ್ಕೆ ನನಗೆ ನೋಟೀಸ್ ಜಾರಿ ಮಾಡಿದ್ದರು. ಇವರಿಗೆ ಮಾಹಿತಿ ಎಲ್ಲಿಂದ ಬಂತು? ಯಡಿಯೂರಪ್ಪ ಹಾಗೂ ವಿಜೇಂದ್ರ ಅವರ ವಿಚಾರಣೆ ಮಾಡಿದರಾ? ಕಾಂಗ್ರೆಸ್ ಗೊಂದು ನ್ಯಾಯಾ, ಬಿಜೆಪಿಗೊಂದು ನ್ಯಾಯವೇ?
9. ಅಮೃತ್ ಪೌಲ್ ಅವರು ಸೆಕ್ಷನ್ 164ಎ ನಲ್ಲಿ ಹೇಳಿಕೆ ನೀಡಲು ಸಿದ್ಧ ಎಂದು ಹೇಳಿದ್ದರೂ ನೀವು ಹೇಳಿಕೆ ದಾಖಲಿಸಿಕೊಳ್ಳಲು ಹಿಂಜರಿಯುತ್ತಿರುವುದೇಕೆ? ಯಾವುದಕ್ಕೆ ಹೆದರುತ್ತಿದ್ದೀರಿ? ನಿಮ್ಮ ಪ್ರಕಾರ ಕಾಂಗ್ರೆಸ್ ನಾಯಕರ ಹೆಸರು ಬರುತ್ತದೆಯಲ್ಲವೇ? ಆದರೂ ಹಿಂಜರಿಯುತ್ತಿರುವುದೇಕೆ? ನಿಮ್ಮ ಧಮ್ಮು, ತಾಕತ್ತು ಇದರಲ್ಲಿ ತೋರಿಸಿ. ಕೇವಲ ಜನಸ್ಪಂದನೆ ಕಾರ್ಯಕ್ರಮದಲ್ಲಿ ಧಮ್ಮು, ತಾಕತ್ತು ಬಗ್ಗೆ ಮಾತನಾಡುವುದಲ್ಲ. ನಿಮಗೆ ತಾಕತ್ತಿದ್ದರೆ ನೇಮಕಾತಿ ಪರೀಕ್ಷೆ ಬರೆದಿರುವ ಅಬ್ಯರ್ಥಿಗಳಿಗೆ ನ್ಯಾಯ ಒದಗಿಸಿ ಪೌಲ್ ಅವರ ಹೇಳಿಕೆ ದಾಖಲಿಸಿಕೊಳ್ಳಿ.

10. ಇನ್ನು ಈ ವಿಚಾರವಾಗಿ ಇಡಿ ತನಿಖೆ ನಡೆಸಿದ್ದು, ಇದಾದ ನಂತರವೂ ಅನುಮಾನ ಯಾಕೆ? ನ್ಯಾಯಾಂಗ ತನಿಖೆಗೆ ನೀಡುತ್ತಿಲ್ಲ ಯಾಕೆ? ಎಲ್ಲೆಡೆ ನೀವು ನಿಮ್ಮ ಬೆನ್ನು ಚಪ್ಪರಿಸಿಕೊಲ್ಳುತ್ತಿದ್ದೀರಿ. ಹಾಗಿದ್ದರೆ ನ್ಯಾಯಾಂಗ ತನಿಖೆ ಮಾಡಿಸಿ. ನಾವು ಹಿಂದಿನಿಂದಲೂ ಆಗ್ರಹಿಸುತ್ತಿದ್ದೇವೆ.
ಇಲ್ಲಿ ಹಾಸ್ಯಾಸ್ಪದ ಎಂದರೆ, ಸಾಕ್ಷಿ ಇದ್ದರೆ ಕೊಡಿ ಎಂದು ಗೃಹ ಸಚಿವರು ಕೇಳುತ್ತಿದ್ದಾರೆ. ನೀವು ಸಚಿವರಾಗಿದ್ದು, ಗುಪ್ತಚರ, ಪೊಲೀಸ್ ಇಲಾಖೆ ನಮ್ಮ ಕಯಲ್ಲಿದೆ. ನೀವು ಅಭ್ಯರ್ಥಿಗಳ ಬಳಿ ಸಾಕ್ಷಿ ಕೇಳುತ್ತಿದ್ದೀರಿ. ಇದೇನಾ ಗೃಹಸಚಿವರ ಜವಾಬ್ದಾರಿ? ನೀವು ಏನು ಮಾಡಲು ಹೊರಟಿದ್ದೀರಿ. ನಾವು ಕೇಳಿದರೆ ನಮ್ಮನ್ನು ಪ್ರಚಾರ ಪ್ರಿಯರು ಎನ್ನುತ್ತೀರಿ. ಹೌದು ನಾವು ಪ್ರಚಾರ ಪ್ರಿಯರೆ, ನಾವು ಕೇಳಿರುವ ಈ 10 ಪ್ರಶ್ನೆಗಳಿಗೆ ಉತ್ತರಿಸಿ.
ನಿಮಗೆ ತಾಕತ್ತು ಧಮ್ಮು ಇದ್ದರೆ ಈ ಬಗ್ಗೆ ಚರ್ಚೆ ಮಾಡಿ. ನೀವು ಮಾಧ್ಯಮ ಅಥವಾ ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಿ. ನಾವು ಸಿದ್ಧವಿದ್ದೇವೆ. ನಾವು ಏನಾದರೂ ಕೇಳಿದರೆ, ಕಾಂಗ್ರೆಸ್ ಅವಧಿಯಲ್ಲಿ ನಡೆದಿಲ್ಲವಾ ಎಂದು ಕೇಳುತ್ತೀರಿ. ಇದೇನಾ ನಿಮ್ಮ ಜವಾಬ್ದಾರಿ. ಇಷ್ಟೆನಾ ನಿಮ್ಮ ಸರ್ಕಾರದ ಸಾಮರ್ಥ್ಯ? ಈ ಅಸಮರ್ಥ ಉತ್ತರ ನೀಡಲು, ಇಂತಹ ಅಯ್ಯೋಗ್ಯ ಸರ್ಕಾರ ಮಾಡಲು ಇವರು ಸಾವಿರ ಕೋಟಿ ಖರ್ಚು ಮಾಡಿ ಬಾಂಬೆತನಕ ಹೋಗಿದ್ದರು. ನೀವು ಹಾಕಿರುವ ಬಂಡವಾಳ ಹಿಂಪಡೆಯಲು ಸರ್ಕಾರ ನಡೆಸುತ್ತಿದ್ದೀರಾ? ಯುವಕರ ಭವಿಷ್ಯ ಹಾಳು ಮಾಡುತ್ತಿದ್ದೀರಲ್ಲಾ ನಾಚಿಕೆಯಾಗುವುದಿಲ್ಲವೇ? ಅದಾಗ್ಯೂ ದೊಡ್ಡಮಾತಗಳನ್ನಾಡುತ್ತೀರಿ ಎಂದರು.












Click it and Unblock the Notifications