ಕುತೂಹಲ ಮೂಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್ ಭೇಟಿ!
ಬೆಂಗಳೂರು, ಜು. 09: ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಸಚಿವ ಎಂ.ಪಿ. ಪಾಟೀಲ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರು ಸಿಎಂ ಅಧಿಕೃತ ನಿವಾಸ ಕಾವೇರಿಗೆ ತೆರಳಿ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. ಸಿಎಂ ಭೇಟಿಯ ಬಳಿಕ ಮಾತನಾಡಿರುವ ಎಂ.ಬಿ. ಪಾಟೀಲ್, ಯಾವುದೇ ರಾಜಕೀಯ ಚರ್ಚೆಯನ್ನು ಮಾಡಿಲ್ಲ ಎಂದು ಸ್ಷಷ್ಟಪಡಿಸಿದ್ದಾರೆ. ಆದರೂ ಇಬ್ಬರು ನಾಯಕರ ಭೇಟಿ ಮಹತ್ವದ ಪಡೆದುಕೊಂಡಿದ್ದು, ಅದಕ್ಕೆ ಕಾರಣವೂ ಇದೆ.
ಸರ್ಕಾರಿ ಕೆಲಸಗಳಿದ್ದಾಗ ರಾಜಕೀಯ ನಾಯಕರು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡುವುದು ವಾಡಿಕೆ. ಆದರೆ ಎಂ.ಬಿ. ಪಾಟೀಲ್ ಹಾಗೂ ಯಡಿಯೂರಪ್ಪ ಅವರು ಕೃಷ್ಣಾದಲ್ಲಿ ಭೇಟಿ ಮಾಡಿಲ್ಲ, ಬದಲಿಗೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ್ದಾರೆ.
ಹಿಂದೆ ಕಾಂಗ್ರೆಸ್ ಸರ್ಕಾರ ಪಕ್ಷ ಅಧಿಕಾರದಲ್ಲಿದ್ದಾಗ, ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರೂ ನಾಯಕರ ಮಧ್ಯೆ ಆರೋಪ-ಪ್ರತ್ಯಾರೋಗಳು ನಡೆದಿದ್ದವು. ಚುನಾವಣೆ ಬಳಿಕ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟವೂ ಕಾವು ಕಳೆದು ಕೊಂಡಿದೆ. ಇದೀಗ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿ ನಡೆಯುತ್ತಿದ್ದರೆ, ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಚರ್ಚೆ ಕಾವೇರಿದೆ. ಜೊತೆಗೆ ಯಡಿಯೂರಪ್ಪ ಬದಲಾವಣೆಗೆ ಆಗ್ರಹಿಸುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೂ ಕೂಡ ವಿಜಯಪುರ ಜಿಲ್ಲೆಯವರು. ಹೀಗಾಗಿ ಲಿಂಗಾಯತ ಸಮುದಾಯದ ಇಬ್ಬರು ಪ್ರಭಾವಿ ನಾಯಕರ ಭೇಟಿಗೆ ಮಹತ್ವದ ಬಂದಿದೆ.

ರಾಜಕೀಯ ಚರ್ಚೆ ಮಾಡಿಲ್ಲ, ಆದರೆ..
"ನಾನು ಒಬ್ಬ ಶಾಸಕ, ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಗಳು. ಹೀಗಾಗಿ ನಾನು ಅವರನ್ನು ಭೇಟಿಯಾಗಿದ್ದೇನೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ನನ್ನ ಕ್ಷೇತ್ರದ, ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಆದರೆ ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ" ಎಂದು ಸಿಎಂ ಭೇಟಿ ಮಾಡಿದ ಬಳಿಕ ಮಾಜಿ ಸಚಿವ ಎಂ.ಬಿ. ಪಾಟೀಲ್ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ.

ನೀರಾವರಿ ಚರ್ಚೆ ಮಾಡಿದ್ದೇವೆ
ಜೊತೆಗೆ "ಅಂತರ್ಜಲ ಮಟ್ಟ ಹೆಚ್ಚಿಸಲು ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅನುಷ್ಠಾದನಲ್ಲಿ ಕೆರೆ ಕಟ್ಟಿಗಳಿಗೆ ನೀರು ತುಂಬಿಸುವ ಯೋಜನಾ ವರದಿ ತಯಾರಿಸಲಾಗಿತ್ತು. ಮಾನ್ಸೂನ್ ಕಾಲದಲ್ಲಿ ಹೆಚ್ಚುವರಿ ನೀರನ್ನು ಕೆರೆ-ಕಟ್ಟಿಗಳಿಗೆ ತುಂಬಿಸುವುದು ಯೋಜನೆಯ ಉದ್ದೇಶವಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನೆನಗುದಿಗೆ ಬಿದಿತ್ತು, ಹೀಗಾಗಿ ಯೋಜನೆಯನ್ನು ಜಾರಿಗೆ ತರಲು ಮನವಿ ಮಾಡಿದ್ದೇನೆ" ಎಂದು ಮಾಜಿ ಜಲಸಂಪನ್ಮೂಲ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಸುಮಲತಾ-ಎಚ್‌ಡಿಕೆ ಕುರಿತು ಹೇಳಿಕೆ
ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಮಧ್ಯದ ಆರೋಪ-ಪ್ರತ್ಯಾರೋಪ ಹಾಗೂ ಅಂಬರೀಶ್ ಕುರಿತು ಎಂ.ಬಿ. ಪಾಟೀಲ್ ಇದೇ ಸಂದರ್ಭದಲ್ಲಿ ಮಾತನಾಡಿದ್ದಾರೆ. "ಅಂಬರೀಶ್ ನನ್ನ ಸ್ನೇಹಿತ, ಇಬ್ಬರ ನಡುವೆ ಒಳ್ಳೆ ಸ್ನೇಹ ಇತ್ತು. ಸಂಸದೆ ಸುಮಲತಾ ಅವರ ಬಗ್ಗೆಯೂ ಅಪಾರ ಗೌರವ ಇದೆ. ಅಕ್ರಮ ಗಣಿಗಾರಿಕೆ ವಿಚಾರವಾಗಿ ನನಗೆ ಗೊತ್ತಿಲ್ಲ. ಆದ್ರೆ ಕೆಆರ್‌ಎಸ್ ಸೇರಿದಂತೆ ರಾಜ್ಯದ ಹಲವು ಅಣೆಕಟ್ಟುಗಳ ಆಧುನೀಕರಣಕ್ಕೆ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಅನುಮತಿ ಸಿಕ್ಕಿತ್ತು. ಆಗ ವಿಶ್ವ ಬ್ಯಾಂಕ್ ನೆರವಿನೊಂದಿಗೆ ಅಣೆಕಟ್ಟುಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿತ್ತು. ಯಾವುದೇ ಡ್ಯಾಂ ಸುತ್ತಮುತ್ತ ಸುರಕ್ಷಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯಬಾರದು. ಕೆಆರ್‌ಎಸ್ ಪುರಾತನ ಜಲಾಶಯ. ಜಲಾಶಯದ ಸುರಕ್ಷಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.

ಎರಡು ಪತ್ರ ಬರೆದಿದ್ದ ಎಂ.ಬಿ. ಪಾಟೀಲ್
ತಮ್ಮ ಕ್ಷೇತ್ರದ ನೀರಾವರಿ ಯೋಜನೆಯ ಬಗ್ಗೆ ಚರ್ಚೆಗೆ ಬಂದಿದ್ದಾಗಿ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಈ ಹಿಂದೆಯೇ ಅಂದರೆ ಜುಲೈ 2 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಎಂ.ಬಿ.ಪಿ. ಪತ್ರ ಬರೆದಿದ್ದರು. ಪತ್ರ ಬರೆದು ಒಂದು ವಾರದ ಬಳಿಕ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
"ಆಲಮಟ್ಟಿ ಜಲಾಶಯದಿಂದ ಮಾನ್ಸೂನ್ ಸಮಯದಲ್ಲಿ ಹೆಚ್ಚುವರಿ ನೀರಿನಿಂದ ಕೆರೆ ತುಂಬಿಸುವುದು ಹಾಗೂ ಇಂಡಿ ತಾಲೂಕಿನ 16 ಕೆರೆಗಳಿಗೆ ತಿಡಗುಂದಿ ಉಪ ಕಾಲುವೆಯಿಂದ ನೀರು ತುಂಬಿಸುವ ಯೋಜನೆಗಳ ಕುರಿತು ಚರ್ಚೆ ಮಾಡಿದ್ದೇನೆ. ಇದಕ್ಕೆ ಸಹಮತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಅಗತ್ಯ ಆರ್ಥಿಕ ನೆರವು ಒದಗಿಸಲು ಕ್ರಮ ಜರುವುದಾಗಿ ಭರವಸೆ ನೀಡಿದ್ದಾರೆ." ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.












Click it and Unblock the Notifications