ಶಾಸಕ ಮುನಿರತ್ನ ಅವರನ್ನ ಪಕ್ಷದಿಂದ ಉಚ್ಛಾಟಿಸಿ: ಕಾಂಗ್ರೆಸ್ ಪಟ್ಟು
ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಕೇಳಿಬಂದಿರುವ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದ ಬಗ್ಗೆ ಕಾಂಗ್ರೆಸ್ ವ್ಯಂಗ್ಯ ಮಾಡಿದೆ. ಬಿಜೆಪಿ ಶಾಸಕ ಮುನಿರತ್ನ ಗುತ್ತಿಗೆದಾರರೊಬ್ಬರಿಗೆ ಕಮಿಷನ್ ಹಣಕ್ಕಾಗಿ ದೌರ್ಜನ್ಯ ಎಸಗುವಾಗ ದಲಿತ ಸಮುದಾಯ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಅತ್ಯಂತ ಕೀಳು ಪದಗಳನ್ನು ಬಳಸಿ ನಿಂದಿಸಿದ್ದನ್ನು ಈ ನಾಡು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದೆ.
ʼದಲಿತರ ಬಗ್ಗೆ, ಮಹಿಳೆಯರ ಬಗ್ಗೆ, ಒಕ್ಕಲಿಗ ಸಮುದಾಯದ ಬಗ್ಗೆ ಬಿಜೆಪಿಗಿರುವ ಅಸಹನೆ ದ್ವೇಷ ಮುನಿರತ್ನರ ಬಾಯಲ್ಲಿ ಬಯಲಾಗಿದೆ. ಬಿಜೆಪಿ ಆಡಳಿತದಲ್ಲಿ ಗುತ್ತಿಗೆದಾರರನ್ನು ಪೀಡಿಸುವ ಭೀಕರತೆಯ ಅನಾವರಣವಾಗಿದೆ, ಈ ಕಾರಣಕ್ಕಾಗಿಯೇ ಬಿಜೆಪಿ ಅವಧಿಯಲ್ಲಿ ಹಲವು ಗುತ್ತಿಗೆದಾರರು ಆತ್ಮಹತ್ಯೆಯ ದಾರಿ ಹಿಡಿದಿದ್ದರು ಎಂದು ಕುಟುಕಿದೆ.

ಬಿಜೆಪಿ ಪಕ್ಷ ಈ ನಾಡಿನ ದಲಿತ ಸಮುದಾಯದ ಕಾಲು ಹಿಡಿದು ಕ್ಷಮೆ ಕೇಳಬೇಕು, ನಾಡಿನ ಮಹಿಳೆಯರನ್ನು ಕೀಳಾಗಿ ಕಂಡಿರುವ ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗಿಯಾಗಲು ಯಾವುದೇ ಅರ್ಹತೆ ಹೊಂದಿಲ್ಲ. ದಲಿತರ ಬಗ್ಗೆ ಕೀಳು ಮಟ್ಟದಲ್ಲಿ ನಿಂದಿಸಿದ ಸಂಗತಿ ಹಾಗೂ ಒಕ್ಕಲಿಗ ಸಮುದಾಯದ ಮಹಿಳೆಯರ ಬಗ್ಗೆ ತುಚ್ಚವಾಗಿ ಮಾತನಾಡಿದ ತಮ್ಮ ಶಾಸಕನ ಬಗ್ಗೆ ಬಿಜೆಪಿ ನಾಯಕರು ಇನ್ನೂ ಮೌನವಾಗಿರುವುದು ಬಿಜೆಪಿಯ ದಲಿತ ಹಾಗೂ ಮಹಿಳಾ ವಿರೋಧಿ ಮನಸ್ಥಿತಿಗೆ ಹಿಡಿದ ಕನ್ನಡಿ ಎಂದು ಆರೋಪ ಮಾಡಿದೆ.
ಬಿಜೆಪಿ ಶಾಸಕ ಮುನಿರತ್ನ ಗುತ್ತಿಗೆದಾರರೊಬ್ಬರಿಗೆ ಕಮಿಷನ್ ಹಣಕ್ಕಾಗಿ ದೌರ್ಜನ್ಯ ಎಸಗುವಾಗ ದಲಿತ ಸಮುದಾಯ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಅತ್ಯಂತ ಕೀಳು ಪದಗಳನ್ನು ಬಳಸಿ ನಿಂದಿಸಿದ್ದನ್ನು ಈ ನಾಡು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ.
— Karnataka Congress (@INCKarnataka) September 13, 2024
ದಲಿತರ ಬಗ್ಗೆ, ಮಹಿಳೆಯರ ಬಗ್ಗೆ, ಒಕ್ಕಲಿಗ ಸಮುದಾಯದ ಬಗ್ಗೆ ಬಿಜೆಪಿಗಿರುವ ಅಸಹನೆ ದ್ವೇಷ…
ಈ ಮಹಿಳಾ ಹಾಗೂ ದಲಿತ ವಿರೋಧಿ ನೀತಿಯನ್ನು ಆರ್‌ಎಸ್‌ಎಸ್ ಶಾಖೆಯಲ್ಲಿ ಕಲಿಸಿದ್ದಾ? ನಿನ್ನೆ ನಡೆದ ಆರ್‌ಎಸ್‌ಎಸ್ ಸಭೆಯಲ್ಲಿ ದಲಿತ ವಿರೋಧಿ ಟ್ರೈನಿಂಗ್ ನೀಡಲಾಯಿತೇ ಎಂದು ಪ್ರಶ್ನೆ ಮಾಡಿದೆ. ಬಿಜೆಪಿ ದಲಿತರ ಬಗ್ಗೆ ಗೌರವ ಹೊಂದಿದ್ದೇ ಆದರೆ ಶಾಸಕನನ್ನು ಉಚ್ಚಾಟಿಸಲಿ, ಇಲ್ಲದಿದ್ದರೆ ಬಿಜೆಪಿಯ ದಲಿತ ವಿರೋಧಿ ನೀತಿಯನ್ನು ಬಹಿರಂಗವಾಗಿ ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದೆ.
ಶಾಸಕ ಮುನಿರತ್ನ ವಿರುದ್ಧದ ಆರೋಪವೇನು?: ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಗುತ್ತಿಗೆದಾರರೊಬ್ಬರು ಬೆಂಗಳೂರು ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರಿಗೆ ದೂರು ನೀಡಿದ್ದಾರೆ. ಇತ್ತೀಚೆಗೆ ಮುನಿರತ್ನ ಹಾಗೂ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿತ್ತು. ಇದಾದ ನಂತರ ಮುನಿರತ್ನ ಅವರು ಗುತ್ತಿಗೆದಾರನಿಗೆ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಮುನಿರತ್ನ ಅವರು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಅವರ ವಿರುದ್ಧ ಕೈಗೊಳ್ಳಬೇಕು, ನನಗೆ ರಕ್ಷಣೆ ನೀಡಬೇಕೆಂದು ಗುತ್ತಿಗೆದಾರ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಕಸದ ಗುತ್ತಿಗೆ ನೀಡುವ ವಿಚಾರವಾಗಿ ಶಾಸಕ ಮುನಿರತ್ನ ಅವರು ನನ್ನನ್ನು ಕರೆದು ಬೆದರಿಕೆ ಹಾಕಿದ್ದಾರೆ. 20 ಲಕ್ಷ ಲಂಚ ಕೂಡ ಕೇಳಿದ್ದರು. ನಾನು ಆತ್ಮಹತ್ಯೆಗೂ ಪ್ರಯತ್ನಿಸಿದೆ, ಆದರೆ ನನ್ನ ಕುಟುಂಬದವರಿಗಾಗಿ ಉಳಿದುಕೊಂಡಿದ್ದೇನೆ ಎಂದು ಗುತ್ತಿಗೆದಾರ ಹೇಳಿದ್ದಾರೆ.
ಮುನಿರತ್ನ ಅವರ ಆಪ್ತನಾದ ವಸಂತ್ ಕುಮಾರ್ ಎಂಬುವರು ಲಂಚದ ಹಣ ವಸೂಲಿ ವಿಚಾರವಾಗಿ ಸಿಕ್ಕಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೆ ರೇಣುಕಾಸ್ವಾಮಿಗೆ ಆದ ಗತಿಯೇ ನಿನಗೂ ಆಗುತ್ತೆ ಎಂದು ಬೆದರಿಕೆ ಕೂಡ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಶಾಸಕ ಮುನಿರತ್ನ ಅವರ ಬಗ್ಗೆ ನೀನು ಲೋಕಾಯುಕ್ತಕ್ಕೆ ದೂರು ಕೊಡಲು ಮುಂದಾಗಿರುವ ವಿಚಾರ ನಮಗೆ ಗೊತ್ತಾಗಿದೆ. ರೇಣುಕಾಸ್ವಾಮಿಗೆ ಆ ಗತಿ ತಂದಿದ್ದು ನಮ್ಮ ಸಾಹೇಬರ ಸಂಬಂಧಿ. ನಿನಗೂ ಅದೇ ಗತಿ ಆಗುತ್ತೆ ನೋಡ್ಕೋʼ ಎಂದು ವಾರ್ನಿಂಗ್ ಕೂಡ ಕೊಟ್ಟಿದ್ದಾರೆ ಎನ್ನಲಾಗಿದೆ.
ಸದ್ಯ ಈ ವಿಚಾರವು ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮತ್ತೊಂದೆಡೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರಾಜಕಾರಣಿಗಳ ಪಾತ್ರವಿದೆಯೇ? ಎನ್ನುವ ಅನುಮಾನವನ್ನೂ ಹುಟ್ಟುಹಾಕಿದೆ. ಗುತ್ತಿಗೆದಾರ ಹೇಳಿರುವಂತೆ ಶಾಸಕ ಮುನಿರತ್ನ ಅವರ ಆಪ್ತ ತನ್ನ ಬಳಿ ಮಾತನಾಡುವಾಗ, ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನೂ ಸಾರ್ವಜನಿಕವಾಗಿ ಉಲ್ಲೇಖಿಸಿದ್ದಾನೆ. ಅಲ್ಲದೆ, ರೇಣುಕಾಸ್ವಾಮಿ ಕೊಲೆ ಮಾಡಿಸಿದ್ದು ಇವರೇ ಎಂದೂ ಬೊಟ್ಟು ಮಾಡಿ ಹೇಳಿದ್ದಾನೆ. ಕೊನೆಗೆ ರೇಣುಕಾಸ್ವಾಮಿಗೆ ಆದ ಗತಿಯೇ ನಿನಗೂ ಆಗುತ್ತೆ ಎಂದು ಧಮ್ಕಿ ಹಾಕಿರುವುದು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಆಡಿಯೋದಲ್ಲಿ ಏನಿದೆ?: ಶಾಸಕ ಮುನಿರತ್ನ ಅವರು ಹಣ ವಸೂಲಿ ಮಾಡಲು ಜಾತಿ ನಿಂದಿಸಿದ್ದಾರೆ. ನನ್ನ ಹೆಂಡತಿ ಮತ್ತು ತಾಯಿ ಬಗ್ಗೆ ಅಶ್ಲೀಲವಾಗಿ ಮಾತನಾಡಿ, ಜೀವ ಬೆದರಿಕೆ ಹಾಕಿದ್ದಾರೆ, ದಲಿತರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರ ಚಲುವರಾಜು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಜೊತೆಗೆ ಮುನಿರತ್ನ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ.












Click it and Unblock the Notifications