BY Vijayendra: ಸರ್ವಪಕ್ಷ ಸಂಸದರ ನಿಯೋಗದಲ್ಲಿ ಶಶಿ ತರೂರ್ ಸೇರ್ಪಡೆ ಕಾಂಗ್ರೆಸ್‌ಗೆ ಅಸೂಯೆ
ಪಾಕಿಸ್ತಾನದ ಭೋತ್ಪಾದನೆ ಹಾಗೂ ಇತ್ತೀಚಿನ ಆಪರೇಷನ್ ಸಿಂಧೂರ್ ಬಗ್ಗೆ ತನ್ನ ಮಿತ್ರರಾಷ್ಟ್ರಗಳಿಗೆ ಮಾಹಿತಿ ನೀಡಲು ಭಾರತವು ಸರ್ವ ಪಕ್ಷಗಳ ಸಂಸದರ ನಿಯೋಗ ರಚಿಸಿದೆ. ಇದರಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೂ ಸ್ಥಾನ ನೀಡಲಾಗಿದ್ದು, ಇದಕ್ಕೆ ಕಾಂಗ್ರೆಸ್‌ನಲ್ಲೇ ಅಪಸ್ವರ ಕೇಳಿಬಂದಿದೆ. ಶಶಿ ತರೂರ್ ಮೊದಲು ಪಕ್ಷದ ಅನುಮತಿ ಪಡೆಯಬೇಕು ಎನ್ನುವ ಮೂಲಕ ಜೈರಾಮ್ ರಮೇಶ್ ವಿರೋಧಿಸಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಭಾರತದ ಸರ್ವ ಪಕ್ಷಗಳ ಸಂಸದರ ನಿಯೋಗದಲ್ಲಿ ಶಶಿತರೂರ್ ಅವರ ಸೇರ್ಪಡೆಯಿಂದ ಕಾಂಗ್ರೆಸ್ ತನ್ನ ಅಸೂಯೆ ಕಕ್ಕುತ್ತಿದೆ ಎಂದು ವಿಜಯೇಂದ್ರ ದೂರಿದ್ದಾರೆ. ರಾಷ್ಟ್ರದ ಹಿತಾಸಕ್ತಿ, ರಾಷ್ಟ್ರದ ಸಾರ್ವಭೌಮತ್ವ ಹಾಗೂ ಸುರಕ್ಷತೆಯ ಪ್ರಶ್ನೆ ಎದುರಾದಾಗ ಕಾಂಗ್ರೆಸ್ ಎಂದೂ ತೆರೆದ ಮನಸ್ಸಿನಿಂದ ನಡೆದುಕೊಂಡ ಉದಾಹರಣೆಯೇ ಇಲ್ಲ. ನೈಜ ಬದ್ಧತೆ ತೋರಿದ ನಿದರ್ಶನಗಳೂ ಇಲ್ಲ. ತನ್ನ ಪಕ್ಷದಲ್ಲಿನ ರಾಷ್ಟ್ರ ನಿಷ್ಠೆ ಹಾಗೂ ಕಾಳಜಿ ತೋರುವವರನ್ನು ಬದಿಗೆ ಸರಿಸಿದ್ದು ಅವರೆನ್ನಲ್ಲ ರಾಜಕೀಯವಾಗಿ ಮೂಲೆಗುಂಪು ಮಾಡಿದ್ದೇ ಹೆಚ್ಚು, ಆ ಸಾಲಿಗೆ ಈಗ ಶಶಿ ತರೂರ್ ಸೇರಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾಕಿಸ್ತಾನದ ಉಗ್ರ ಪೋಷಕ ಮುಖವಾಡವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಚ್ಚಿಡಲು ರಾಜತಾಂತ್ರಿಕ ಮಾರ್ಗದ ಮೂಲಕ ವಿವಿಧ ರಾಷ್ಟ್ರಗಳಿಗೆ ಭಾರತದ ಸರ್ವ ಪಕ್ಷಗಳ ಸಂಸದರ ನಿಯೋಗದಲ್ಲಿ ಶಶಿತರೂರ್ ಅವರ ಸೇರ್ಪಡೆಯಿಂದ ಕಾಂಗ್ರೆಸ್ ತನ್ನ ಅಸೂಯೆ ಕಕ್ಕುತ್ತಿದೆ. ಅಂತರರಾಷ್ಟ್ರೀಯ ಮಟ್ಟದ ವಿದೇಶಾಂಗ ನೀತಿಯ ಅವರ ಅನುಭವ ಹಾಗೂ ಸಾಮರ್ಥ್ಯವನ್ನು ಪರಿಗಣಿಸಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಅವರನ್ನು ಆಯ್ಕೆ ಮಾಡಿದೆ ಎಂದಿದ್ದಾರೆ.
ಆದರೆ ಕಾಂಗ್ರೆಸ್ ತನ್ನ ನಿಯೋಗದಲ್ಲಿ ಕರ್ನಾಟಕದ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿಸಿದ್ದ ಸೈಯ್ಯದ್ ನಾಸೀರ್ ಹುಸೇನ್ ಹಾಗೂ ಗೌರವ್ ಗೊಗೊಯ್‌ರಂತಹ ಪಾಕಿಸ್ತಾನಿ ಪರ ಸಹಾನುಭೂತಿ ಇರುವವರನ್ನು ನಿಯೋಗಕ್ಕೆ ನಾಮನಿರ್ದೇಶನ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ನಕಲಿ ರಾಷ್ಟ್ರಪ್ರೇಮದ ಅಸಲಿ ಮುಖವಾಡವನ್ನು ಕಳಚಿಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶ ಮೊದಲು ಪಕ್ಷ ನಂತರ ಎಂಬ ತತ್ವ ಬಿಜೆಪಿಯದ್ದು. ಅಧಿಕಾರ, ಪಕ್ಷ ಮೊದಲು, ದೇಶ ಆನಂತರ ಎಂಬ ಸಿದ್ಧಾಂತ ಕಾಂಗ್ರೆಸ್‌ನದ್ದು ಎಂಬುದು ಕಾಂಗ್ರೆಸ್ ಪಕ್ಷದ ನಡವಳಿಕೆಯಿಂದ ಸಾಬೀತಾಗುತ್ತಿದೆ. ಭಾರತದ ಸರ್ವಪಕ್ಷಗಳ ಸಂಸದರ ನಿಯೋಗದ ಭಾಗವಾಗಲು ಬಹುತೇಕ ವಿರೋಧ ಪಕ್ಷಗಳೆಲ್ಲವೂ ಸರ್ವಸಮ್ಮತಿ ಸೂಚಿಸಿವೆ. ಇದು ರಾಷ್ಟ್ರದ ಘನತೆಯ ವಿಚಾರ ಹೆಮ್ಮೆಯ ಭಾರತವನ್ನು ಪ್ರತಿನಿಧಿಸಲು ತಮಗೆ ದೊರೆತಿರುವ ವಿಶೇಷ ಅವಕಾಶ ಎಂದು ಪರಿಗಣಿಸಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ತನ್ನ ಅಪಸ್ವರ ಹಾಗೂ ಅಸೂಯೆಯ ಪ್ರತಿಕ್ರಿಯೆ ವ್ಯಕ್ತಪಡಿಸುವ ಮೂಲಕ ರಾಷ್ಟ್ರ ಹಿತಾಸಕ್ತಿಗಿಂತಲೂ ತನ್ನ ಸ್ವಾರ್ಥವೇ ಹೆಚ್ಚು ಎಂಬುದನ್ನು ಬಹಿರಂಗಪಡಿಸಿದೆ ಎಂದು ಟೀಕಿಸಿದ್ದಾರೆ.
ಸರ್ವ ಪಕ್ಷಗಳ ಸಂಸದರ ನಿಯೋಗದಲ್ಲಿ ರವಿಶಂಕರ್, ಶಶಿ ತರೂರ್, ಸುಪ್ರಿಯಾ ಸುಳೆ, ಕನಿಮೊಳಿ ಸೇರಿದಂತೆ ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಜೆಡಿಯು, ಎನ್‌ಸಿಪಿ (ಶರದ್ ಪವಾರ್ ಬಣ), ಬಿಜೆಡಿ, ಶಿವಸೇನೆ (ಯುಬಿಟಿ) ಮತ್ತು ಸಿಪಿಎಂನ ಸಂಸದರನ್ನು ಸೇರ್ಪಡೆ ಮಾಡಲಾಗಿದೆ.












Click it and Unblock the Notifications