ಕೆಪಿಸಿಸಿ ಮುಖಂಡರೊಂದಿಗೆ ಕೆ.ಸಿ.ವೇಣುಗೋಪಾಲ್ ಸರಣಿ ಸಭೆ
ಬೆಂಗಳೂರು, ಫೆಬ್ರವರಿ 22: ನಿನ್ನೆ ರಾತ್ರಿ ಬೆಂಗಳೂರಿಗೆ ಆಗಮಿಸಿರುವ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಇಂದು ಕೆಪಿಸಿಸಿ ಮುಖಂಡರ ಜೊತೆ ಸರಣಿ ಸಭೆ ನಡೆಸುತ್ತಿದ್ದಾರೆ.
ಲೋಕಸಭೆ ಚುನಾವಣೆ ಸೀಟು ಹಂಚಿಕೆ ವಿಚಾರವಾಗಿ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಪರಮೇಶ್ವರ್, ಡಿ.ಕೆ.ಶಿವಕುಮಾರ್ ಅವರುಗಳೊಂದಿಗೆ ವೇಣುಗೋಪಾಲ್ ಅವರು ಸರಣಿ ಸಭೆಗಳನ್ನು ನಡೆಸಿದ್ದಾರೆ.
ಯಾವ ಕ್ಷೇತ್ರ ಉಳಿಸಿಕೊಳ್ಳಬೇಕು, ಯಾವ ಕ್ಷೇತ್ರ ಜೆಡಿಎಸ್‌ಗೆ ನೀಡಬೇಕು, ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಮತ್ತು ಪ್ರಚಾರ ಹೇಗಿರಬೇಕು ಎಂಬೆಲ್ಲುದರ ಬಗ್ಗೆ ವೇಣುಗೋಪಾಲ್ ಅವರು ಮಾತುಕತೆ ನಡೆಸುತ್ತಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಕೆಪಿಸಿಸಿಯು ಪ್ರಾಥಮಿಕ ಪಟ್ಟಿಯೊಂದನ್ನು ತಯಾರು ಮಾಡಿದೆ. ಅದರ ಬಗ್ಗೆಯೇ ಕೆ.ಸಿ.ವೇಣುಗೋಪಾಲ್ ಅವರು ಇಂದು ಚರ್ಚೆ ನಡೆಸಿದ್ದಾರೆ.
ಕಾಂಗ್ರೆಸ್ ಆಯ್ದುಕೊಳ್ಳಲಿರುವ ಕ್ಷೇತ್ರಗಳ ಸಾಧಕ-ಬಾಧಕಗಳ ಬಗ್ಗೆಯೂ ವಿಸ್ತೃತ ಚರ್ಚೆ ಆಗಲಿದೆ. ಇನ್ನೆರಡು ದಿನಗಳಲ್ಲಿ ಜೆಡಿಎಸ್ ಮುಖಂಡರ ಜೊತೆಗೆ ಲೋಕಸಭೆ ಚುನಾವಣೆ ಸೀಟು ಹಂಚಿಕೆ ಕುರಿತು ಚರ್ಚೆ ಆಗಲಿದ್ದು, ಅದಕ್ಕೆ ಪೂರಕವಾಗಿ ಇಂದು ಕೆ.ಸಿ.ವೇಣುಗೋಪಾಲ್ ಅವರು ಸಭೆ ನಡೆಸಿದ್ದಾರೆ.
ಕೆ.ಸಿ.ವೇಣುಗೋಪಾಲ್ ಅವರು ದೇವೇಗೌಡ ಅವರನ್ನೂ ಇಂದೇ ಭೇಟಿ ಆಗುವ ಸಂಭವ ಇದೆ. ನಿನ್ನೆಯಷ್ಟೆ ದಿನೇಶ್ ಗುಂಡೂರಾವ್ ಅವರು ದೇವೇಗೌಡ ಅವರನ್ನು ಭೇಟಿಯಾಗಿ ಸೀಟು ಹಂಚಿಕೆ ಕುರಿತು ಪ್ರಾಥಮಿಕ ಹಂತದ ಮಾತುಕತೆ ನಡೆಸಿದ್ದಾರೆ.












Click it and Unblock the Notifications