DK Shivakumar: ಹಲವರು ಕಣ್ಣಿಟ್ಟರೂ ಡಿಕೆ ಶಿವಕುಮಾರ್ ಅವರ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸೇಫ್, ಏಕೆ?
ರಾಜ್ಯ ಕಾಂಗ್ರೆಸ್‌ನಲ್ಲಿ ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕುತ್ತು ಬಂದಿದೆ ಎಂದು ಹೇಳಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿ.ಕೆ.ಶಿವಕುಮಾರ್ ಅವರನ್ನು ಕೆಳಗಿಳಿಸಲು ಸ್ವಪಕ್ಷದ ನಾಯಕರೇ ತೊಡೆ ತಟ್ಟಿದ್ದಾರೆ. ಇದಕ್ಕಾಗಿ ದೆಹಲಿಗೂ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಬಂದಿದ್ದಾರೆ. ಕೆಲವರು ಇನ್ನೇನು ಈ ಸೀಟು ಸಿಗೋದು ಫಿಕ್ಸ್ ಎನ್ನುವ ಲೆಕ್ಕಾಚಾರದಲ್ಲೂ ಇದ್ದಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಡಿ.ಕೆ.ಶಿವಕುಮಾರ್ ಅವರ ಸ್ಥಾನ ಸುಭದ್ರ ಎಂದು ಹೇಳಲಾಗುತ್ತಿದೆ.
ಡಿ.ಕೆ.ಶಿವಕುಮಾರ್ ಅವರೇ ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಬಗ್ಗೆ ಮಾತನಾಡಿದ್ದರು. ಹಾಗಾಗಿ ಕಾಂಗ್ರೆಸ್‌ನ ಹಲವು ನಾಯಕರು ನಾ ಮುಂದು ತಾ ಮುಂದು ಎಂದು ಈ ಕುರ್ಚಿ ಮೇಲೆ ಕರ್ಚೀಫ್ ಹಾಕುತ್ತಿದ್ದಾರೆ. ಏನೇ ಆದರೂ ಬಿಜೆಪಿಗೆ ಸೆಡ್ಡು ಹೊಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಮತ್ತಷ್ಟು ಬಲವಾಗಬೇಕು ಎಂಬುದು ಹೈಕಮಾಂಡ್ ಲೆಕ್ಕಾಚಾರ. ಇನ್ನು ಡಿ.ಕೆ.ಶಿವಕುಮಾರ್ ಅವರ ಹಿಡಿತದಲ್ಲೇ ಕಾಂಗ್ರೆಸ್ ಇಲ್ಲಿವರೆಗೆ ಗಟ್ಟಿಯಾಗಿ ನಿಂತಿರುವ ಕಾರಣ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಉದ್ದೇಶವಿಲ್ಲ ಎಂದು ಪಕ್ಷದಲ್ಲೇ ಚರ್ಚೆಯಾಗುತ್ತಿದೆ.

ಅಲ್ಲದೆ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಮೂರು ಕ್ಷೇತ್ರದ ಉಪಚುನಾವಣೆಯಲ್ಲೂ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿರುವ ಕಾರಣ ಇದರಲ್ಲಿ ಡಿ.ಕೆ.ಶಿವಕುಮಾರ್ ಅವರ ತಂತ್ರಗಾರಿಕೆ ಸಾಕಷ್ಟಿದೆ. ಅಲ್ಲದೆ ರಾಜ್ಯದಲ್ಲಿ ಶೀಘ್ರದಲ್ಲೇ ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಕೂಡ ನಡೆಯಲಿದ್ದು, ಇದಕ್ಕೆ ಡಿಕೆ ಶಿವಕುಮಾರ್ ಅವರಿಗೇ ಸಾರಥ್ಯ ನೀಡುವ ಚಿಂತನೆ ಇದೆ ಎನ್ನಲಾಗಿದೆ. ಹಾಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ಡಿಕೆ ಶಿವಕುಮಾರ್ ಅವರೇ ಸೂಕ್ತ ಎಂಬ ಮಾತೂ ಇದೆ. ಹಾಗಾಗಿ ಅವರಿಗೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಮತ್ತೆ ಕಸಿಯುವ ಕೆಲಸಕ್ಕೆ ಕೈಹಾಕೋದಿಲ್ಲ ಎನ್ನಲಾಗಿದೆ.
ಬಿಜೆಪಿ ರೀತಿ ಒಡಕಾಗಬಹುದು: ಈಗ ಪಕ್ಷದ ಅಧ್ಯಕ್ಷರನ್ನು ಬದಲಾಯಿಸಿದರೆ ಏನಾಗಬಹುದು? ಎಂಬುದಕ್ಕೆ ರಾಜ್ಯ ಬಿಜೆಪಿಯನ್ನೇ ಉದಾಹರಣೆಗೆ ತೆಗೆದುಕೊಂಡಿದೆ ಕಾಂಗ್ರೆಸ್ ಹೈಕಮಾಂಡ್. ಬಿಜೆಪಿಯಲ್ಲಿ ಬಿವೈ ವಿಜಯೇಂದ್ರ ಅವರಿಗೆ ಏಕಾಏಕಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದ ಕಾರಣ ಇಂದು ಪಕ್ಷವು ಒಡೆದ ಮನೆಯಾಗಿದೆ. ಅಲ್ಲದೆ ಇದರಿಂದ ಬಣ ಬಡಿದಾಟ, ಆಂತರಿಕ ಕಚ್ಚಾಟ ಹೆಚ್ಚಾಗಿ ಬಲ ಕಳೆದುಕೊಂಡಿದೆ. ಒಂದು ವೇಳೆ ಕಾಂಗ್ರೆಸ್‌ನಲ್ಲೂ ಈಗ ಅಧ್ಯಕ್ಷರನ್ನು ಬದಲಾಯಿಸಿದರೆ, ಬಿಜೆಪಿಗೆ ಬಂದ ಗತಿಯೇ ಕಾಂಗ್ರೆಸ್‌ಗೂ ಬರಬಹುದು ಎಂದು ಲೆಕ್ಕಾಚಾರ ಹಾಕಿದೆ. ಹಾಗಾಗಿ ಡಿಕೆ ಶಿವಕುಮಾರ್ ಅವರನ್ನೇ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಸುವ ಸಾಧ್ಯತೆ ದಟ್ಟವಾಗಿದೆ.

ಈಗಾಗಲೇ ಕಾಂಗ್ರೆಸ್ ನಾಯಕರಾದ ಸತೀಶ್ ಜಾರಕಿಹೊಳಿ, ಕೆಎನ್ ರಾಜಣ್ಣ ಅವರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದಾರೆ. ದಲಿತ ಸಮುದಾಯಕ್ಕೆ ಸಿಎಂ ಸ್ಥಾನ ಹಾಗೂ ಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಕೆ.ಎನ್.ರಾಜಣ್ಣ ಅವರು ಹೈಕಮಾಂಡ್ ಹೇಳಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕೆಪಿಸಿಸಿ ಅಧ್ಯಕ್ಷನಾಗುತ್ತೇನೆ ಎಂದು ಬಹಿರಂಗವಾಗಿ ಆಸೆ ಬಿಚ್ಚಿಟ್ಟಿದ್ದಾರೆ. ಏನೆ ಆದರೂ ಸದ್ಯಕ್ಕೆ ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಯಾವುದೇ ಚಿಂತನೆ ಎಂದೇ ಹೇಳಲಾಗುತ್ತಿದೆ.












Click it and Unblock the Notifications